ಚಿಕ್ಕಮಗಳೂರು :
ಶೃಂಗೇರಿ ವಿದ್ಯಾರ್ಥಿನಿ ಸ್ವಾತಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಸಂತೋಷ್ ಹಾಗೂ ಪ್ರದೀಪ್ ಮೇಲಿನ ಆರೋಪ ಸಾಬೀತಾಗಿದ್ದು, ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಉಮೇಶ್ ಎಂ ಅಡಿಗ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಗಲ್ಲು ಶಿಕ್ಷೆ ಜೊತೆಗೆ ತಲಾ 25 ಸಾವಿರ ದಂಡ ವಿಧಿಸಲಾಗಿದೆ.
2016ರ ಫೆಬ್ರವರಿ 16ರಂದು ಶೃಂಗೇರಿ ತಾಲೂಕಿನ ಅಕ್ಕಸಾಲುಕೊಡಿಗೆಯ 18ರ ಹರೆಯದ ಕಾಲೇಜು ಹುಡುಗಿಯ ಮೇಲೆ ಇವರಿಬ್ಬರು ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಆಕೆ ಪರೀಕ್ಷೆ ಬರೆದು ಮನೆಗೆ ಕಾಲು ದಾರಿಯಲ್ಲಿ ವಾಪಾಸು ಆಗುತ್ತಿದ್ದ ಸಮಯದಲ್ಲಿ ಕಾದು ಕುಳಿತಿದ್ದ ಪ್ರದೀಪ್ ಮತ್ತು ಸಂತೋಷ್ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದು ಬಲತ್ಕಾರ ನಡೆಸಿ ನಂತರ ಕೊಲೆಗೈದಿದ್ದರು. ಆಕೆಯ ಶವವನ್ನು ಅಲ್ಲೆ ಹತ್ತಿರದ ಪಾಳು ಬಾವಿಗೆ ಎಸೆದಿದ್ದರು. ನಂತರ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು.ಈ ಸಂಬಂಧದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ