ತುಮಕೂರು

ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗಾಗಿ ಜ. 30 ರಂದು ಚುನಾವಣೆ ನಡೆಯಲಿದೆ.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಜ.30 ರಂದು ಬೆಳಗ್ಗೆ 11-30 ರಿಂದ ಚುನಾವಣಾಧಿಕಾರಿಗಳಾಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಚುನಾವಣಾ ಪ್ರಕ್ರಿಯೆಗಳು ನಡೆಯುವುವು. ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಂದ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಜ.20 ರಂದು ಸಂಜೆ ಚುನಾವಣಾ ವೇಳಾಪಟ್ಟಿಯ ಸೂಚನೆ ಬಂದಿದ್ದು, ಅದರಲ್ಲಿರುವ ವಿವರ ಈ ರೀತಿ ಇದೆ:-
ಮೊದಲಿಗೆ ಮೇಯರ್ ಸ್ಥಾನಕ್ಕೆ, ನಂತರ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುವುದು. ಬಳಿಕ ಅನುಕ್ರಮವಾಗಿ 1)ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, 2)ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕನ್ಯಾಯ ಸಥಾಯಿ ಸಮಿತಿ, 3)ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿಸಮಿತಿ, 4)ಲೆಕ್ಕಪತ್ರ ಸ್ಥಾಯಿ ಸಮಿತಿಯ ಸದಸ್ಯರುಗಳ ಆಯ್ಕೆಗಾಗಿ ಚುನಾವಣೆ ನಡೆಯುವುದು. ಇವಿಷ್ಟೂ ಆಯ್ಕೆ ಸಂದರ್ಭದಲ್ಲಿ ನಾಮಪತ್ರಗಳ ಪರಿಶೀಲನೆ, ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ, ಅವಶ್ಯವಿದ್ದಲ್ಲಿ ಚುನಾವಣೆ ಹಾಗೂ ಫಲಿತಾಂಶ ಪ್ರಕಟಣೆಯ ಪ್ರಕ್ರಿಯೆಗಳು ನಡೆಯುವುವು.
ನಿಗದಿತ ನಮೂನೆಯ ನಾಮಪತ್ರವನ್ನು ಸರ್ಕಾರಿ ರಜೆ ದಿನಗಳನ್ನು ಹೊರತು ಪಡಿಸಿ ಯಾವುದೇ ದಿನದಂದು ಕಚೇರಿ ವೇಳೆಯಲ್ಲಿ ಜ.30 ರಂದು ಬೆಳಗ್ಗೆ 9-30 ರೊಳಗೆ ಅಥವಾ ಜ.30 ರಂದು ಬೆಳಗ್ಗೆ 8 ರಿಂದ 9-30 ರೊಳಗೆ ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಿಗೆ (ಎ.ಡಿ.ಸಿ.) ಸಲ್ಲಿಸಬೇಕಾಗಿದೆ.
ಕೈ ಎತ್ತುವ ಮೂಲಕ ಆಯ್ಕೆ
ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ/ ವಿರೋಧವಾಗಿ ಕೈ ಎತ್ತುವ ಮೂಲಕ ಮತಗಳನ್ನು ದಾಖಲಿಸಲಾಗುವುದು ಹಾಗೂ ಅವರುಗಳ ಸಹಿಯನ್ನು ನಡವಳಿ ಪುಸ್ತಕದಲ್ಲಿ ದಾಖಲಿಸಲಾಗುವುದು. ಸಭೆಯಲ್ಲಿ ಹಾಜರಿದ್ದ ಹಾಗೂ ಮತದಾನ ಹಕ್ಕು ಹೊಂದಿರುವ ಯಾವುದೇ ಸದಸ್ಯರು ಅವರು ಇಚ್ಛಿಸಿದಲ್ಲಿ ತಟಸ್ಥರಾಗಿ ಉಳಿಯಬಹುದು.
ನಾಲ್ಕೂ ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಈ ನಾಲ್ಕು ಸಮಿತಿಗಳ ಪೈಕಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಲಾ ಓರ್ವ ಸದಸ್ಯರು ಇರಲೇಬೇಕು. ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಒಂದು ಮತದ ಮೂಲಕ ವರ್ಗಾಯಿಸಬಹುದಾದ ಅನುಪಾತಿ ಕ್ರಮದ ಪ್ರಕಾರ (ಪ್ರಾಶಸ್ತ್ಯ ಮತದ ಮೂಲಕ) ನಡೆಸಲಾಗುವುದು. ಇವರೆಲ್ಲರ ಅಧಿಕಾರಾವಧಿಯು ಮುಂದಿನ ಒಂದು ವರ್ಷದ್ದಾಗಿರುತ್ತದೆ.
ಮೇಯರ್-ಉಪಮೇಯರ್ ಮೀಸಲಾತಿ
ಸರ್ಕಾರದ ಅಧಿಸೂಚನೆ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವು ಸಾಮಾನ್ಯ (ಮಹಿಳೆ) ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನವು ಹಿಂದುಳಿದ –ಅ-ವರ್ಗ (ಮಹಿಳೆ)ಕ್ಕೆ ಮೀಸಲಾಗಿದೆ.
ಪೊಲೀಸ್ ಬಂದೋಬಸ್ತ್ಗೆ ಪತ್ರ
ಚುನಾವಣೆ ಹಿನ್ನೆಲೆಯಲ್ಲಿ ಜ.30 ರಂದು ಬೆಳಗ್ಗೆ 8 ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಪಾಲಿಕೆ ಕಚೇರಿ ಆವರಣದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಕೋರಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಜ.20 ರಂದು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.
ಪಾಲಿಕೆ ಪಕ್ಷಗಳ ಬಲಾಬಲ
ತುಮಕೂರು ಮಹಾನಗರ ಪಾಲಿಕೆಯು ಒಟ್ಟು 35 ಸದಸ್ಯ ಬಲವನ್ನು ಹೊಂದಿದೆ. ಈ 35 ರಲ್ಲಿ ಬಿ.ಜೆ.ಪಿ.-12, ಕಾಂಗ್ರೆಸ್-10, ಜೆ.ಡಿ.ಎಸ್-10 ಸದಸ್ಯಬಲವನ್ನು ಹೊಂದಿದ್ದು, ಮೂವರು ಪಕ್ಷೇತರರು ಇದ್ದಾರೆ. ಈ ಮೂವರಲ್ಲಿ ಒಬ್ಬ ಪಕ್ಷೇತರರು ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ.
ಮತದಾನದ ಹಕ್ಕುಳ್ಳವರು
ಪಾಲಿಕೆಯ ಚುನಾಯಿತ 35 ಸದಸ್ಯರುಗಳು, ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮತ್ತು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ಕಾಂತರಾಜ್ ಅವರುಗಳು ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕು ಹೊಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








