ಚಳ್ಳಕೆರೆ
ಆಂಧ್ರಪ್ರದೇಶದ ಕಡಪದಿಂದ ಚಳ್ಳಕೆರೆ ನಗರಕ್ಕೆ ಸುಮಾರು 300 ಚೀಲ ಸಿಮೆಂಟ್ ಹೊತ್ತು ತರುತ್ತಿದ್ದ ಹತ್ತು ಚಕ್ರದ ಲಾರಿಯ ಹಿಂಭಾಗದ ಟಯರ್ ಸ್ಪೋಟಗೊಂಡು ಇಡೀ ಲಾರಿಯೇ ಸುಟ್ಟುಹೋದ ಘಟನೆ ತಳಕು ಠಾಣಾ ವ್ಯಾಪ್ತಿಯ ಕಾಲುವೇಹಳ್ಳಿ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಸಿಮೆಂಟ್ ಸೇರಿದಂತೆ ಲಾರಿಯೂ ಸುಟ್ಟಿದ್ದು 30 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಲಾರಿ ಡ್ರೈವರ್ ಮತ್ತು ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ಧಾರೆ.
ಕಡಪದಿಂದ ಸಿರುವಾಳ ಓಬಳಾಪುರ ಮೂಲಕ ಚಿತ್ರನಾಯನಹಳ್ಳಿ ಕ್ರಾಸ್,ಯಾದಲಗಟ್ಟೆ, ವಿಶೇಶ್ವಪುರ, ಕರೀಕೆರೆ ಮೀರಸಾಬಿಹಳ್ಳಿ ಮೂಲಕ ಚಳ್ಳಕೆರೆ ಕಡೆಗೆ ಈ ಲಾರಿ ಬರುತ್ತಿದ್ದು, ಕಾಲುವೇಹಳ್ಳಿ ಬಳಿಯ ಕ್ರಾಸ್ನಲ್ಲಿ ಟಯರ್ ಸ್ಪೋಟಗೊಂಡು ಇಡೀ ಲಾರಿಗೆ ಬೆಂಕಿ ಆವರಿಸಿಕೊಂಡಿದೆ. ಲಾರಿ ಚಾಲಕ ಅಪಾಯವನ್ನು ಅರಿತು ಲಾರಿಯಿಂದ ಕೆಳಗೆ ಇಳಿದು ಸುತ್ತಮುತ್ತಲ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಪೊಲೀಸ್ ಠಾಣೆಗೂ ಸಹ ಮಾಹಿತಿ ನೀಡಿರುತ್ತಾನೆ.
ತಳಕು ಪೊಲೀಸರು ಬೆಂಕಿ ಹೊತ್ತಿಕೊಂಡ ಲಾರಿಯತ್ತ ತೆರಳಿ ಅಗ್ನಿಶಾಮಕ ಪಡೆಯನ್ನು ಸ್ಥಳಕ್ಕೆ ಕರೆಸಿ ಸುಮಾರು ಎರಡು ಗಂಟೆಗಳ ಕಾಲ ಎರಡು ಅಗ್ನಿಶಾಮಕ ಪಡೆಯೊಂದಿಗೆ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುತ್ತಾರೆ. ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ದಾವಿಸಿ ಬಂದು ಈ ದುರ್ಘಟನೆಯನ್ನು ವೀಕ್ಷಿಸಿದರು. ತಳಕು ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ