ಹರಿಹರವು ಕರ್ನಾಟಕದ ಸಂಪರ್ಕ ಸೇತುವೆಯಾಗಲಿ

ದಾವಣಗೆರೆ:

    ನಾಡಿನ ಕೇಂದ್ರ ಬಿಂದುವಾದ ಹರಿಹರವು ಕರ್ನಾಟಕದ ಸಂಪರ್ಕ ಸೇತು(ಕನೆಕ್ಟಿಂಗ್ ಕರ್ನಾಟಕ) ಆಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.ಹರಿಹರದ ಹೊರವಲಯದಲ್ಲಿರುವ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶದಿಂದ ಕರ್ನಾಟಕ ಸಂಪರ್ಕ ಸೇತುವೆಯಾಗಬೇಕೆಂದು ಹೇಳಿದರು.

      ಹರಿದ್ವಾರದ ಗಂಗಾರತಿ ದೇಶದೆಲ್ಲೆಡೆ ಪ್ರಸಿದ್ಧವಾಗಿದ್ದು, ಹರಿಹರ ಸಹ ಹರಿದ್ವಾರದಷ್ಟೇ ಪ್ರಸಿದ್ಧ ಇತಿಹಾಸ ಪರಂಪರೆಯನ್ನು ಹೊಂದಿದೆ. ಅಂತಹ ಇತಿಹಾಸವನ್ನು ಮತ್ತೆ ಬೆಳೆಸುವ ನಿಟ್ಟಿನಲ್ಲಿ ಗಂಗಾ ನದಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ತುಂಗಭದ್ರಾ ನದಿಗೂ ತುಂಗಾರತಿ ಮಾಡಲು ತೀಮಾರ್ನಿಸಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಅವರನ್ನು ಆಹ್ವಾನಿಸಲಾಗುವುದು ಎಂದರು.

     ಸಿದ್ಧಗಂಗಾ ಶ್ರೀಗಳೊಂದಿಗೆ ನನಗೆ 15 ವರ್ಷಗಳ ಕಾಲ ನಿಕಟ ಒಡನಾಟವಿತ್ತು. ಶ್ರೀಗಳ ಆದರ್ಶಗಳಿಂದಾಗಿ ಸಿದ್ಧಗಂಗಾ ಮಠ ಬೆಳೆದಿದೆ. ಅದೇರೀತಿ ಹರಿಹರ ಪೀಠವು ಮಧ್ಯ ಕರ್ನಾಟಕದ ದಾಸೋಹ ಪೀಠವಾಗಬೇಕೆಂಬುದು ನಮ್ಮ ಆಶಯವಾಗಿದ್ದು, ಈಗಾಗಲೇ ಸಿದ್ಧಗಂಗಾ ಶ್ರೀಗಳ ಆಶಯದಂತೆ ಹರಿಹರ ಪೀಠದಲ್ಲಿ ನಿತ್ಯ ದಾಸೋಹ ಆರಂಭವಾಗಿದೆ ಎಂದರು.

     ತೆಗೆದುಕೊಳ್ಳುವ ಕೈಗಳು ಪ್ರಾಮಾಣಿಕವಾಗಿದ್ದರೆ, ಕೊಡುವ ಕೈಗಳಿಗೆ ಕೊರತೆ ಇಲ್ಲ. ಈಗಾಗಲೇ ಮಠದಲ್ಲಿ ಆರು ತಿಂಗಳಿಗೆ ಆಗುವಷ್ಟು ದವಸ-ಧಾನ್ಯ ಸಂಗ್ರಹವಾಗಿದೆ. ನೀವು ಕೊಡುವುದು ಸಮಾಜದ ಕಾರ್ಯಕ್ಕೆ. ಅದರಲ್ಲಿ ನಾವು ನಿಮ್ಮಂತೆ ಸ್ವಲ್ಪ ಪ್ರಸಾದ ಸ್ವೀಕರಿಸಬಹುದು. ಏಕೆಂದರೆ, ನಮಗೇನೂ ಹೆಂಡಿರು-ಮಕ್ಕಳಿಲ್ಲ ಎಂದ ಅವರು, ಸಿದ್ಧಗಂಗಾ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲೇ ಹರಿಹರ ಶ್ರೀಪೀಠದಲ್ಲಿ ಆಧ್ಯಾತ್ಮ, ಆರೋಗ್ಯದ ದಾಸೋಹ ಸಿಗುವಂತೆ ಮಾಡಲು ಸಂಕಲ್ಪಿಸಲಾಗಿದೆ ಎಂದು ಹೇಳಿದರು.

    ವೀರಶೈವ-ಲಿಂಗಾಯತ ಪರಂಪರೆಗೂ ಪಂಚಮಸಾಲಿಗೂ ತಂದೆ-ತಾಯಿ, ಮಕ್ಕಳ ಸಂಬಂಧವಿದೆ. ವೀರಶೈವ-ಲಿಂಗಾಯತ ಹಾಗೂ ಪಂಚಮಸಾಲಿ ಒಂದಕ್ಕೊಂದು ಪೂರಕವಾಗಿವೆ. ಆದ್ದರಿಂದ ಸಮಾಜಬಾಂಧವರೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದರು.

    ಇದೇ ಫೆ.15ರಂದು ಹರಿಹರ ಪೀಠದಿಂದ ಕೊಟ್ಟೂರು ಬಸವೇಶ್ವರ ಜಾತ್ರೆಗೆ ಪಾದಯಾತ್ರೆ ಹೊರಟು ಹರನ ಪ್ರಸಾದ ಅರ್ಪಿಸಲಾಗುವುದು. ಎಲ್ಲರೂ ಒಗ್ಗೂಡಿ ಯೋಗಯುಕ್ತ, ರೋಗಮುಕ್ತ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.ಕೇಳದಯೇ ನಾಡಿನ ಮಠಮಾನ್ಯ, ಸಂಘಸಂಸ್ಥೆಗಳಿಗೆ ದಾನ ನೀಡುವ ಡಾ.ಶಾಮನೂರು ಶಿವಶಂಕರಪ್ಪನವರು ಸಧ್ಯ ಕರುನಾಡ ಕರ್ಣರಾಗಿದ್ದಾರೆ ಎಂದು ಹೇಳಿದರು.

   ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಆದ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮೊಂದಿಗೆ ಚರ್ಚಿಸಿ ವೀರಶೈವ-ಲಿಂಗಾಯತ ಬೇರೆ, ಬೇರೆ ಎಂಬುದಾಗಿ ಎದ್ದಿರುವ ವಿವಾದ ಶಮನಕ್ಕೆ ನೀವು ಬೇಕಾದ ತೀರ್ಮಾನ ಕೈಗೊಳ್ಳಿ. ಈ ವಿಷಯದಲ್ಲಿ ಏನೇ ಬಂದರೂ ನಮ್ಮ ಸರ್ಕಾರ ನೋಡಿಕೊಳ್ಳಲಿದೆ ಎಂಬುದಾಗಿ ಹೇಳಿದ್ದಾರೆ.

      ಹೀಗಾಗಿ ಎಲ್ಲಾ ಉಪ ಪಂಗಡಗಳು ಒಂದಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.ಸಿದ್ಧಗಂಗಾ ಶ್ರೀಗಳ ಬಗ್ಗೆ ಇಂದು ನಾವು ಏನೇ ಮಾತನಾಡಿದರು ಗುಡ್ಡಕ್ಕೆ ಮಣ್ಣು ಹೊತ್ತಂತಾಗಲಿದೆ. ಏಕೆಂದರೆ, ಅವರದು ಪದಗಳಿಗೆ ನಿಲುಕದ ವ್ಯಕ್ತಿತ್ವವಾಗಿದೆ. ಸಿದ್ಧಗಂಗಾ ಮಠದಲ್ಲಿ ದಾನಿಗಳ ಸಹಕಾರದಿಂದ ಎಲ್ಲಾ ಸಮಾಜಗಳ ಸಾವಿರಾರು ಮಕ್ಕಳಿಗೆ ಉಚಿತ ವಿದ್ಯೆ, ಊಟ ಸಿಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಅಂತಹ ಪರಂಪರೆ ಹುಟ್ಟುಹಾಕಿದ ಕೀರ್ತಿ ಸಿದ್ಧಗಂಗಾ ಶ್ರೀಗಳಿಗೆ ಸಲ್ಲುತ್ತದೆ ಎಂದರು.

      ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಮಾಜದ ಹಿರಿಯ ಮುಖಂಡ ಜುಂಜಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹರಜಾತ್ರೆಯ ಯಶಸ್ಸಿಗೆ ಸಹಕರಿಸಿದ ಅಧಿಕಾರಿಗಳು, ಸಮಾಜದ ಗಣ್ಯರು ಹಾಗೂ ಪತ್ರಕರ್ತರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link