ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಯಾಗದ ಶಿರಾ ತಾಯಿ-ಮಗು ಆಸ್ಪತ್ರೆ

ಶಿರಾ

    ಶಿರಾ ಅಂದರೆ ಬರದ ಬೀಡು ಎಂಬುದು ವಾಡಿಕೆಯಲ್ಲಿದೆ. ಮಳೆ ಬಾರದೆ ರೈತರು ಕಂಗಾಲಾಗುವ ಪರಿಸ್ಥಿತಿಯಂತೂ ಈ ಭಾಗದಲ್ಲಿ ಇನ್ನೂ ಸುಧಾರಿಸಿಲ್ಲವಾದರೂ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹತ್ವದ ಸರ್ಕಾರಿ ಆಸ್ಪತ್ರೆ ಮಾತ್ರ ತನ್ನ ಪಾಡಿಗೆ ತಾನು ಸಾರ್ವಜನಿಕರ ಆರೋಗ್ಯದ ಮುತುವರ್ಜಿ ವಹಿಸುತ್ತಲೆ ಇದೆ.

    ಕಳೆದ ಕೆಲ ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯ ಬಗ್ಗೆ, ಇಲ್ಲಿನ ಸಮಸ್ಯೆಗಳ ಬಗ್ಗೆ ದೂರುಗಳ ಸುರಿಮಳೆಗರೆಯುವ ಮಂದಿಯೂ ಇದ್ದರು. ಈಗಲೂ ಸಮಸ್ಯೆಗಳು ಈ ಆಸ್ಪತ್ರೆಯಲ್ಲಿ ಇಲ್ಲ ಅನ್ನಲಿಕ್ಕೆ ಆಗದು. ಆದರೂ ಕೆಲ ನುರಿತ ಹಾಗೂ ಒಂದಿಷ್ಟು ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಬಂದ ವೈದ್ಯರು ಸದರಿ ಆಸ್ಪತ್ರೆಯಲ್ಲಿರುವ ಒಂದೆ ಕಾರಣಕ್ಕೆ ಆಸ್ಪತ್ರೆಯು ಒಂದಿಷ್ಟು ಪ್ರಶಂಸೆಗೆ ಒಳಗಾಗಲು ಕಾರಣವಾಗಿದೆ.

    ಸದರಿ ಆಸ್ಪತ್ರೆಯು ಆರಂಭದಲ್ಲಿ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ನಂತರ ರೋಗಿಗಳ ಸಂಖ್ಯೆಯೂ ಹೆಚ್ಚಾಯಿತು. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕೇವಲ ಶಿರಾ ಭಾಗದ ಸಾರ್ವಜನಿಕರಷ್ಟೆ ಅಲ್ಲದೆ. ನೆರೆಯ ಹಿರಿಯೂರು, ಮಧುಗಿರಿ, ಪಾವಗಡ, ಚಿ.ನಾ.ಹಳ್ಳಿ, ಕೊರಟಗೆರೆ ತಾಲ್ಲೂಕುಗಳಿಂದಲೂ ಚಿಕಿತ್ಸೆಗೆಂದು ಈ ಆಸ್ಪತ್ರೆಗೆ ಬರುತ್ತಾರೆ.

     ಅಷ್ಟೆ ಅಲ್ಲದೆ ಶಿರಾ ತಾಲ್ಲೂಕು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡ ಪರಿಣಾಮ ಗುಡಿಬಂಡೆ, ಮದೂಡಿ, ಮಲ್ಲಿನ ಮಡಗು, ಸ್ವಾರಗಿರಿ, ಪಳಾರ, ಮಡಕ ಶಿರಾ, ಹೇಮಾವತಿ ಕಡೆಯಿಂದಲೂ ರೋಗಿಗಳು ಶಿರಾ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ.

     ಶಿರಾ ಆಸ್ಪತ್ರೆಗೆ ದಿನ ನಿತ್ಯ ಆಗಮಿಸುವ ಹೊರ ರೋಗಿಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಪ್ರತಿ ದಿನ 1500ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗಾಗಿ ದಾಖಲು ಗೊಳ್ಳುತ್ತಾರೆ. ಸದರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರು ಉತ್ತಮ ಚಿಕಿತ್ಸೆ ನೀಡುತ್ತಿರುವ ಪರಿಣಾಮ ಪ್ರಸೂತಿ ಚಿಕಿತ್ಸೆಗೆಂದು ಪ್ರತಿ ತಿಂಗಳು 2,500ಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆಯುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.

   ಯಾವಾಗ ಶಿರಾ ಆಸ್ಪತ್ರೆಗೆ ಪ್ರಸೂತಿಗೆಂದು ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಹೆಚ್ಚಾಯಿತೋ ಆಗ 2017 ರಲ್ಲಿ ಅಂದು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ತಾಯಿ-ಮಗು ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಒತ್ತಡ ಹೇರಿದ್ದರು. ಪರಿಣಾಮ ಸುಮಾರು 21 ಕೋಟಿ ರೂ.ಗಳ ವೆಚ್ಚದಲ್ಲಿ 100 ಹಾಸಿಗೆಗಳ ತಾಯಿ-ಮಗು ಆಸ್ಪತ್ರೆಗೆ ಅನುದಾನವೂ ಮಂಜೂರಾಯಿತು.

   2017 ರಲ್ಲಿ ಸದರಿ ತಾಯಿ-ಮಗು ಆಸ್ಪತ್ರೆಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಆರಂಭದಲ್ಲಿ ಅತ್ಯಂತ ಚುರುಕಿನಿಂದ ಕಾಮಗಾರಿ ಕೆಲಸ ಆರಂಭವಾಯಿತು. ವಿಧಾನಸಭಾ ಚುನಾವಣೆಯ ನಂತರ ಸದರಿ ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿತು. ಕಿಟಕಿ, ಬಾಗಿಲು, ವಿದ್ಯುತ್ ಶಕ್ತಿ….ಹೀಗೆ ಒಂದಲ್ಲಾ ಒಂದು ಅಪೂರ್ಣ ಕಾಮಗಾರಿ ನೆಪದಲ್ಲಿ ಕಾಮಗಾರಿ ಕುಂಠಿತವೆ ಆಯಿತು.

   ಶಾಸಕ ಬಿ.ಸತ್ಯನಾರಾಯಣ್ ಆಸ್ಪತ್ರೆಗೆ ಕೆಲವು ಬಾರಿ ಭೇಟಿ ನೀಡಿ ಕಾಮಗಾರಿ ತ್ವರಿತಗೊಳಿಸುವಂತೆ ಸೂಚನೆ ನೀಡಿದ ಪರಿಣಾಮ ಕಾಮಗಾರಿ ಚುರುಕಿನಿಂದ ಸಾಗಲು ಕಾರಣವಾಯಿತು.ಇನ್ನೇನು ಆಸ್ಪತ್ರೆಯ ಉದ್ಘಾಟನೆಯೊಂದೆ ಬಾಕಿ ಅನ್ನುವಾಗ ಒಂದೆರಡು ಶೌಚಾಲಯದ ಕಾಮಗಾರಿ ಬಾಕಿ ಇರುವಿಕೆಯನ್ನು ಟೆಂಡರ್‍ದಾರ ಮುಂದು ಮಾಡಿಕೊಂಡು ಮತ್ತಲವು ತಿಂಗಳು ಉದ್ಘಾಟನೆಯ ಕಾರ್ಯ ಮುಂದೆ ಹೋಯಿತು. ಇನ್ನೇನು ಸದರಿ ಆಸ್ಪತ್ರೆ ಕಾಮಗಾರಿ ಮುಗಿಯಿತು ಅಂದುಕೊಂಡವರಿಗೆ ನಿರಾಸೆ ಕಾಡುತ್ತಲೆ ಹೋಯಿತು.

    ಎಲ್ಲವೂ ಮುಗಿಯಿತೆನ್ನುವಾಗ ಉಳಿದ ಕೆಲಸ ಸಿಬ್ಬಂದಿಯ ನೇಮಕ. ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡುವಂತೆ ಶಾಸಕ ಬಿ.ಸತ್ಯನಾರಾಯಣ್ ಅವರೆ ಖುದ್ದು ಸರ್ಕಾರಕ್ಕೆ ಪತ್ರ ಬರೆದು ಒತ್ತಡ ಹೇರಿದ್ದಾರೆ. ಇನ್ನೇನು ಒಂದೆರಡು ದಿನಗಳಲ್ಲಿ ಸಿಬ್ಬಂದಿಯ ನೇಮಕವೂ ಆಗಲಿದೆ.

    ಈ ಎಲ್ಲಾ ನಿಧಾನ ಬೆಳವಣಿಗೆಯ ನಡುವೆಯೂ ಇದೀಗ ತಾಯಿ-ಮಗು ಆಸ್ಪತ್ರೆ ಸುಸಜ್ಜಿತವಾಗಿ ಸಂಪೂರ್ಣವಾಗಿ ನಿರ್ಮಾಣಗೊಂಡಿದೆ. ಇಡೀ ಕಟ್ಟಡದ ಬಣ್ಣದ ಕೆಲಸವೂ ಪೂರ್ಣಗೊಂಡಿದ್ದು ಉದ್ಘಾಟನೆ ಮಾತ್ರ ಬಾಕಿ ಉಳಿದಿದೆ.
ಇಷ್ಟೆಲ್ಲಾ ಆದರೂ ಸದರಿ ಆಸ್ಪತ್ರೆಯ ಲೋಕಾರ್ಪಣೆಗಾಗಿ ಮುಖ್ಯಮಂತ್ರಿಗಳಿಂದ ದಿನಾಂಕ ಗೊತ್ತುಪಡಿಸುವ ಕೆಲಸ ಮಾತ್ರ ಬಾಕಿ ಉಳಿದಿದೆಯಂತೆ. ವಾರಕ್ಕೊಮ್ಮೆ ಶಿರಾ ತಾಯಿ-ಮಗು ಆಸ್ಪತ್ರೆಗೆ ಬಂದು ಕಾಮಗಾರಿ ವೀಕ್ಷಣೆ ಮಾಡುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು ದಿನಾಂಕ ಗೊತ್ತುಪಡಿಸಿಕೊಳ್ಳಲು ಮುಖ್ಯಮಂತ್ರಿಗಳನ್ನು ಎಡತಾಕುತ್ತಲೆ ಇದ್ದಾರಂತೆ. ಆದರೆ ಸಿ.ಎಂ. ಡೇಟ್ ಮಾತ್ರ ಇನ್ನೂ ಫಿಕ್ಸ್ ಆಗಿಯೇ ಇಲ್ಲ.

    ಆಸ್ಪತ್ರೆಯೂ ಮಂಜೂರಾಗಿ, ಕಟ್ಟಡವೂ ಪೂರ್ಣಗೊಂಡು, ಸುಣ್ಣ-ಬಣ್ಣ ಕಂಡರೂ ಉದ್ಘಾಟನೆಯ ಕೆಲಸಕ್ಕೆ ಅಧಿಕಾರಿಗಳು ಮೀನಾ-ಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ನೇರವಾಗಿ ಇದರ ಉದ್ಘಾಟನೆಯ ಹೊಣೆ ಹೊತ್ತು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸುವರೇನೊ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap