ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ನ್ಯಾಯ ಸಮ್ಮತವಲ್ಲ : ಶ್ರೀರಾಮುಲು.

ಚಳ್ಳಕೆರೆ

      ಜನರ ಸೇವೆ ಮಾಡು ಉದ್ದೇಶದಿಂದ ನಮ್ಮನ್ನು ಜನರೇ ಆಯ್ಕೆ ಮಾಡಿರುತ್ತಾರೆ. ಅದೇ ರೀತಿ ಸಾರ್ವಜನಿಕರು ನೀಡುವ ತೆರಿಗೆಯಿಂದ ಅಧಿಕಾರಿಗಳು ಮತ್ತು ನೌಕರರು ಸಂಬಳವೂ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯುತ್ತೀರ. ಆದರೆ, ಜನರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯೆ ವಹಿಸಿದರೆ ಅಂತಹವರ ಸೇವೆ ಸರ್ಕಾರಕ್ಕೆ ಅವಶ್ಯಕತೆ ಇಲ್ಲವೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

      ಅವರು, ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಳಕು ಮತ್ತು ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಂಗಾಭದ್ರ ಹಿನ್ನೀರು ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಒಂದೂವರೆ ವರ್ಷದ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಂಡು ಈ ಭಾಗಕ್ಕೆ ಸಮೃದ್ಧ ನೀರಿನ ವ್ಯವಸ್ಥೆಯಾಗಲಿದೆ.

     ಕೆಲವೆಡೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಇಲಾಖೆ ಅನುಮತಿ ಇಲ್ಲದೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸ್ವಷ್ಟಣೆ ನೀಡಿದ ಸಚಿವರು ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಸಚಿವರು ಮತ್ತು ಮುಖ್ಯ ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
 

     ಈ ಹಿಂದೆ ಕಳೆದ ಪ್ರಗತಿಪರಿಶೀಲನ ಸಭೆಯ ಭರವಸೆಯನ್ನು ಅಧಿಕಾರಿ ವರ್ಗ ಪೂರೈಸಬೇಕಿತ್ತು. ಆದರೆ, ಬಹುತೇಕ ಅಧಿಕಾರಿಗಳು ಅವರು ನೀಡಿದ ಭರವಸೆಯನ್ನು ಪಾಲಿಸದಂತೆ ಕಾಣಲಿಲ್ಲ. ನೀವು ನೀಡಿರುವ ಎಲ್ಲಾ ವರದಿಗಳು ಅಸ್ವಷ್ಟವಾಗಿದ್ದು, ಯಾವುದೇ ಅಭಿವೃದ್ಧಿ ನಡೆಯದಂತೆ ಕಾಣುವುದಿಲ್ಲ. ಕೇವಲ ಪ್ರಗತಿಪರಿಶೀಲನಾ ಸಭೆಯಲ್ಲಿ ವರದಿ ನೀಡಿ ಕೆಲಸ ಮಾಡದೇ ಇದ್ದರೆ ಸಾಲದು. ಪ್ರತಿಯೊಂದು ಹಂತದಲ್ಲೂ ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಗಮನನೀಡಲಾಗುವುದು. ಸುಳ್ಳು ಮಾಹಿತಿಯಿಂದ ಯಾವುದೇ ರೀತಿಯ ಪ್ರಯೋಜನವಾಗದು.

    ನೀವು ಮಾಡುವ ಕೆಲಸ ಸಾರ್ವಜನಿಕರಿಗೆ ಉಪಯೋಗವಾಗುವಂತಿರಬೇಕು, ಸಮಾಜದ ಎಲ್ಲಾ ವರ್ಗದ ಜನರಿಗೆ ತೃಪ್ತಿ ನೀಡಬೇಕು. ಇದರಿಂದ ಸರ್ಕಾರದ ಗೌರವ ಹೆಚ್ಚುತ್ತದೆಯಲ್ಲದೆ, ಚುನಾಯಿತ ಜನಪ್ರತಿನಿಧಿಗಳು ಸಹ ಜನರ ಮನಸ್ಸಿನಲ್ಲಿ ಆಳಾವಾಗಿ ಬೇರೂರುತ್ತಾರೆ. ಮುಂದಿನ ದಿನಗಳಲ್ಲಾದರೂ ಅಧಿಕಾರಿ ವರ್ಗ ತಾವು ಮಾಡಿದ ಕೆಲಸವನ್ನು ಮಾತ್ರ ಪ್ರಗತಿಯಲ್ಲಿ ನಮೂದಿಸಬೇಕು. ಸುಳ್ಳು ಮಾಹಿತಿ ಕೊಟ್ಟರೆ ಸುಮ್ಮನೆ ಕೂಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳಿಗೆ ನಯವಾಗಿಯೇ ಚಾಟಿ ಬೀಸಿದರು.

        ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ನೀಡುವ ವರದಿಗಳ ಸತ್ಯಾಂಶಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಮನಹರಿಸಬೇಕು, ಕೇವಲ ಅವರು ನೀಡಿದ ವರದಿ ಪಡೆದು ನೀಡುವುದಲ್ಲದ. ಬದಲಾಗಿ ಈ ಹಿಂದೆ ಅವರು ನೀಡಿದ ಅಂಕಿ, ಅಂಶಗಳು ನಿಮ್ಮಲ್ಲಿರುತ್ತದೆ. ಈ ಬಾರಿ ಅವೇ ಪುನಾರಾರ್ವನೆಯಾದರೆ ಅಲ್ಲಿ ಏನು ಅಭಿವೃದ್ಧಿಯಾಗಿಲ್ಲ ಎಂಬುವುದು ಸಾಬೀತಾಗುತ್ತದೆ. ಅದ್ದರಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸುವಂತೆ ಸೂಚನೆ ನೀಡಿದರು.

     ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಸವರಾಜು, ಸಹಾಯಕ ಇಂಜಿನಿಯರ್ ಪ್ರಕಾಶ್ ನೀಡಿದ ವರದಿಯನ್ನು ಪ್ರಾಸ್ತಾಪಿಸಿದ ಸಚಿವ ಶ್ರೀರಾಮುಲು, ನೀವು ನೀಡಿದ ವರದಿಯಲ್ಲಿ ಸತ್ಯಾಂತ ಮಾಯವಾಗಿದ್ದು, ಯಾವುದೇ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಂಡಿಲ್ಲ. ನಿಮ್ಮ ವರದಿಯೇ ನಿಮ್ಮ ನಿರ್ಲಕ್ಷ್ಯತನವನ್ನು ಎತ್ತಿತೋರುತ್ತಿದೆ. ಈ ಹಿಂದೆ ನಿಮಗೆಸೂಚನೆ ನೀಡಿದಾಗ ಸರಿಪಡಿಸಿಕೊಳ್ಳುವ ಭರವಸೆ ನೀಡಿದ್ದು, ಮತ್ತೆ ನಿಮ್ಮನ್ನು ಇಲ್ಲಿ ಮುಂದುವರೆಸಲಾಗಿದೆ. ಹೀಗೆ ನಿಮ್ಮ ವರ್ತನೆ ಮುಂದುವರೆದರೆ ಕೂಡಲೇ ಅಮಾನತ್ತು ಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದರು.

    ಬೆಸ್ಕಾಂ ಇಲಾಖೆ ಅಧಿಕಾರಿ ಮಮತ ಮಾಹಿತಿ ನೀಡಿ, ಇಲಾಖೆಯ ಸೂಚನೆ ಮೇರೆಗೆ ಗಂಗಾ ಕಲ್ಯಾಣ ಯೋಜನೆಯೂ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯುತ್ತಿದ್ದು, ನಾಯಕನಹಟ್ಟಿ ಬೆಸ್ಕಾಂ ಕಚೇರಿ ಕಾಂಪೌಡ್ ನಿರ್ಮಾಣಕ್ಕೆ 2 ಕೋಟಿ ಹಣ ನೀಡುವಂತೆ ಮನವಿ ಮಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಹಣ ಒದಗಿಸುವಂತೆ ಮನವಿ ಮಾಡಿದರು.

    ಹಿಂದುಳಿದ ವರ್ಗಗಳ ಅಧಿಕಾರಿ ಡಿ.ಟಿ.ಜಗನ್ನಾಥ ನಗರದ ಹೊರಭಾಗದಲ್ಲಿ ಎರಡೂ ಬಿಸಿಎಂ ಹಾಸ್ಟಲ್‍ಗಳಿದ್ದು, ಮಹಿಳಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕಾಂಪೌಂಡ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಕೃಷಿ ಇಲಾಖೆ ಅಧಿಕಾರಿ ಮೋಹನ್‍ಕುಮಾರ್‍ವರದಿಯನ್ನು ಅವಲೋಕಿಸಿದ ಸಚಿವರು, ನಿಮ್ಮ ಇಲಾಖೆ ಪ್ರಧಾನವಾದ ಇಲಾಖೆಯಾಗಿದ್ದು, ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ವಿತರಿಸಬೇಕು ಹಾಗೂ ಸ್ವಿಂಕ್ಲರ್ ಸೆಂಟ್‍ಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ನೀಡಬೇಕೆಂದರು.

     ತೋಟಗಾರಿಕೆ, ಅರಣ್ಯ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಶಿಶುಅಭಿವೃದ್ಧಿ ಇಲಾಖೆ, ಪಶುವೈದ್ಯ ಇಲಾಖೆ, ಶಿಕ್ಷಣ ಇಲಾಖೆ, ಅಕ್ಷರದಾಸೋಹ, ಕಂದಾಯ ಇಲಾಖೆ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದೇ ಕಾರಣಕ್ಕೂ ಬೇಸಿಗೆ ಕಾಲದಲ್ಲಿ ಗ್ರಾಮೀಣ ಹಾಗೂ ನಗರದ ಜನರಿಗೆ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಜನರಿಗೆ ಟ್ಯಾಂಕರ್ ಮೂಲಕವಾದರೂ ನೀರು ನೀಡಬೇಕು. ಸ್ವಚ್ಚತೆ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಗಮನಹರಿಸಬೇಕೆಂದರು.

    ಪ್ರಗತಿಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ತಿಪ್ಪಮ್ಮಲಿಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ತಿಪ್ಪೇಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap