ದಾವಣಗೆರೆ:
ವಿ.ಡಿ.ಸಾವರಕರ್ ಬ್ರಿಟೀಷರೊಂದಿಗೆ ಕೈಜೋಡಿಸಿದ್ದರೆಂಬ ಆರೋಪ ಮಾಡಿರುವುದಕ್ಕೆ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸುವಂತೆ ಕೆಎಸ್ಐಸಿ ಮಾಜಿ ಅಧ್ಯಕ್ಷ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಅವರ ಮೊಬೈಲ್ಗೆ ಕಳೆದ ಡಿ.26ರಂದು ಕರೆ ಮಾಡಿ ಬೆದರಿಕೆ ಹಾಕಿದ್ದ ಭದ್ರಾವತಿ ಮೂಲದ ವ್ಯಕ್ತಿ ಈಗ ಪತ್ರ ಬರೆಯುವ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ.
ಡಿ.ಬಸವರಾಜ್ ಅವರಿಗೆ ಅಂಚೆಯ ಮೂಲಕ ಬಂದಿರುವ ಪತ್ರದ ಲಕೋಟೆಯ ಮೇಲೆ ಭದ್ರಾವತಿಯ ಬಸ್ ಸ್ಟಾಪ್ ಹತ್ತಿರದ ಶಿವರಾಜ್ ಪಿಂಟರ್ಸ್ ವಿಳಾಸವಿದ್ದು, ಸಾವರಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದರ ಬಗ್ಗೆ ಎಂಬ ಒಕ್ಕಣೆಯೊಂದಿಗೆ ಆರಂಭವಾಗುವ ಪತ್ರದಲ್ಲಿ ಕೆಎಸ್ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರೊಂದಿಗೆ ಸಾವರಕರ್ ಕೈಜೋಡಿಸಿದ್ದರು ಎಂಬುದಾಗಿ ಯಾವ ಆಧಾರದಲ್ಲಿ ಆರೋಪ ಮಾಡಿದ್ದೀರಿ ಎಂಬುದಾಗಿ `ಬಾ’ ಎಂಬ ಅಕ್ಷರ ಬರೆದಿರುವ ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಪ್ರಶ್ನಿಸಿದ್ದಾನೆ.
ಸಾವರಕರ್ ಬ್ರಿಟೀಷರೊಂದಿಗೆ ಶಾಮೀಲಾಗಿದ್ದರು ಎಂಬುದಾಗಿ ಹೇಳಿಕೆ ನೀಡಿದ್ದೀರಿ. ಅದನ್ನು ಮೊದಲು ಸ್ಪಷ್ಟಪಡಿಸಬೇಕು. ನಿಮ್ಮ ಹೇಳಿಕೆಯಿಂದ ಸಾವರಕರ್ ಅಭಿಮಾನಿಯಾದ ತನ್ನ ಮನಸ್ಸಿಗೆ ನೋವುಂಟಾಗಿದೆ. ಅಲ್ಲದೇ, ತಮ್ಮ ವಿರುದ್ಧ ಕೊಲೆ ಬೆದರಿಕೆ ಕೇಸ್ ದಾಖಲಿಸಿದ್ದೀರಿ. ಏನೂ ತೊಂದರೆ ಇಲ್ಲ ಬಿಡಿ. ಈಗಲೂ ಅದೇ ಮಾತನ್ನೇ ಮತ್ತೊಮ್ಮೆ ಹೇಳುತ್ತೇನೆ ಕೇಳಿ ಎಂಬುದಾಗಿ ಪತ್ರವನ್ನು ಅನಾಮಧೇಯ ವ್ಯಕ್ತಿ ಮುಂದುವರಿಸಿದ್ದಾನೆ.
ಈಗ ನನ್ನ ಮಾತನ್ನು ತಮಾಷೆಯೆಂದು ತಿಳಿದುಕೊಂಡರೆ ಭಾರೀ ಬೆಲೆ ತೆರಬೇಕಾಗುತ್ತೆ. ಅದಕ್ಕೆ ಹೇಳುತ್ತೀನಿ ಕೇಳಿ, ಜನವರಿ 30ರ ವರೆಗೆ ನಿಮಗೆ ಕಾಲಾವಕಾಶ ಕೊಡುತ್ತೇನೆ. ಅಷ್ಟರೊಳಗೆ ಸಾವರಕರ್ಗೆ ಮಾಡಿದ ಅವಮಾನಕ್ಕೆ ಕ್ಷಮೆ ಕೇಳಿ ಒಂದು ಸುದ್ದಿಗೋಷ್ಟಿ ಮಾಡಬೇಕು. ಕೇವಲ ನಿಮಗೆ ಮಾತ್ರ ಒತ್ತಡ ಹಾಕುತ್ತಿಲ್ಲವೆಂಬುದಾಗಿ ಅನಾಮಧೇಯ ವ್ಯಕ್ತಿ ಹೇಳಿದ್ದಾನೆ.
ನಿಮ್ಮ ನಾಯಕರಾದ ಸಿದ್ದರಾಮಯ್ಯ, ದಿನೇಶ ಗುಂಡೂರಾವ್ರನ್ನೂ ಬಿಡುವುದಿಲ್ಲ. ಈ ಇಬ್ಬರೂ ಸಹ ಕ್ಷಮೆ ಕೇಳುವಂತೆ ಮಾಡುತ್ತೇನೆ. ಡಿ.ಬಸವರಾಜ ಸರ್ ಹುಷಾರ್. ನಾನು ನಿಮ್ಮ ಬೆನ್ನ ಹಿಂದೆಯೇ ಇದ್ದೀನಿ ಎಂಬುದಾಗಿ ಪತ್ರ ಮುಗಿಸುವ ಮೂಲಕ ಇಂತಿ ಸಾವರಕರ ಅಭಿಮಾನಿ ಬಾ, ಎಂಬುದಾಗಿ ಪತ್ರವನ್ನು ಪೂರ್ಣಗೊಳಿಸಿದ್ದಾನೆ.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ ಡಿಸೆಂಬರ್ ತಿಂಗಳಲ್ಲಿ ತಮಗೆ ಭದ್ರಾವತಿಯಿಂದ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾನೆಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೆ ಅದೇ ಡಿ.ಬಸವರಾಜ ಅವರಿಗೆ ಅಂಚೆಯ ಮೂಲಕ ಬೆದರಿಕೆ ಪತ್ರ ಬಂದಿದ್ದು, ಕ್ಷಮಾಪಣೆ ಕೇಳಿದರೆ ನಾನು ನಿಮಗೆ ತುಂಬು ಹೃದಯದ ಧನ್ಯವಾದಗಳು ಹೇಳುತ್ತೇನೆ. ಇಲ್ಲ ಅಂದರೆ, ಮುಂದೆ ನಡೆಯುವ ಎಲ್ಲಾ ಘಟನೆಗಳಿಗೂ ನೀವೇ ಜವಾಬ್ದಾರರು ಎಂಬುದಾಗಿಯು ಬೆದರಿಕೆ ಹಾಕಿದ್ದಾನೆ.
ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಡಿ.ಬಸವರಾಜ್ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಎಎಸ್ಪಿ ರಾಜೀವ್ ಎಂ ಅವರಿಗೆ ದೂರು ನೀಡಿದ್ದು, ಹೆಚ್ಚುವರಿ ಎಸ್ಪಿ ರಾಜೀವ್ ಎಂ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಣ್ಣನವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ