ಮೈಸೂರು
ಜನವರಿ ಬಂತು ಎಂದರೆ ಅವರೆಕಾಯಿಯ ಕಾಲ ಶುರುವಾಯಿತು ಎನ್ನುತ್ತಾರೆ ಆದರೆ ಅವರೆ ಬೆಳೆದು ಒಂದಷ್ಟು ಹಣ ಸಂಪಾದನೆ ಮಾಡಿಕೊಳ್ಳಬಹುದು ಎಂದು ಆಸೆಪಟ್ಟಿದ್ದ ರೈತರಿಗೆ ಮಾತ್ರ ನಿರಾಸೆಯಾಗಿದೆ. ಕಾರಣ, ಬಹಳಷ್ಟು ಕಡೆಗಳಲ್ಲಿ ಹಸಿರು ಹುಳಗಳು ಅವರೆಕಾಯಿ, ಎಲೆಯನ್ನೆಲ್ಲ ತಿಂದು ಹಾಕುತ್ತಾ ರೈತರಿಗೆ ಶತ್ರುವಾಗಿ ಪರಿಣಮಿಸಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಬೆಲೆ ದಿಢೀರ್ ಕುಸಿತದಿಂದ ಕಂಗಾಲಾಗಿದ್ದಾರೆ.
ಹಿಂಗಾರು ಮಳೆಯ ನಂತರ ಹೆಚ್ಚಿನ ರೈತರು ಅವರೆಕಾಯಿಯನ್ನು ಬೆಳೆಯುತ್ತಾರೆ. ಈ ಅವರೆಕಾಯಿ ಬೆಳೆಯ ಕತೆಯೂ ಅಷ್ಟೆ ಒಂಥರಾ ಜೂಜು ಇದ್ದಂತೆ. ಕೆಲವೊಮ್ಮೆ ಉತ್ತಮ ದರ ಸಿಕ್ಕಿ ರೈತರಿಗೆ ಹಣ ತಂದುಕೊಡಬಹುದು. ಇನ್ನು ಕೆಲವೊಮ್ಮೆ ನಷ್ಟ ಹೊಂದಿ ಕೃಷಿಗೆ ಖರ್ಚು ಮಾಡಿದ ಹಣವೂ ಬಾರದೆ ಸಂಕಷ್ಟಕ್ಕೆ ಸಿಲುಕಿಸಲೂಬಹುದು.
ಅವರೆಕಾಯಿ ಕೆ.ಜಿ.ಗೆ 30-40 ರೂಪಾಯಿಗೆ ಮಾರಾಟವಾಗುತ್ತಿದ್ದರೂ ರೈತರಿಗೆ ಮಾತ್ರ ಹದಿನೈದೋ ಇಪ್ಪತ್ತೋ ರೂಪಾಯಿ ಸಿಗುತ್ತದೆ. ಕೆಲವೊಮ್ಮೆ ಮಧ್ಯವರ್ತಿಗಳ ಹಾವಳಿಯಿಂದ ಮಾರಾಟ ಮಾಡುವುದೇ ಸಮಸ್ಯೆಯಾಗಿದೆ. ಹೀಗಿರುವಾಗ ಮೈಸೂರಿನ ಕೆಲವು ಭಾಗಗಳು ಹಾಗೂ ಚಾಮರಾಜನಗರದ ಗುಂಡ್ಲುಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಅವರೆ ಕಾಯಿಗೆ ಹಸಿರು ಹುಳುವಿನ ಕಾಟ ಆರಂಭವಾಗಿದೆ. ಈ ಹುಳುವಿನ ಕಾಟದಿಂದ ರೈತರು ಹೈರಾಣಾಗಿದ್ದಾರೆ.