ಬೆಂಗಳೂರು
ರಾಜ್ಯ ರಾಜಧಾನಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದು ವರ್ಷದಲ್ಲಿ 3 ಕೋಟಿ 36 ಲಕ್ಷ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿರುವುದು ಎಂದು ವರದಿಯಾಗಿದೆ. ಕಳದೆ ವರ್ಷಕ್ಕೆ ಹೋಲಿಸಿ ನೋಡಿದಾಗ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.4.1ರಷ್ಟು ಏರಿಕೆ ಕಂಡು ಬಂದಿದೆ ಎಂದು ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, 3.36 ಕೋಟಿ ಪ್ರಯಾಣಿಕರ ಪೈಕಿ 2.87 ಕೋಟಿ ಅಂತರ್ ದೇಶೀಯ ಪ್ರಯಾಣಿಕರಾಗಿದ್ದು, 40 ಲಕ್ಷ 87 ಸಾವಿರ ಅಂತಾರಾಷ್ಟ್ರೀಯ ಪ್ರಯಾಣಿಕರು ಎಂದು ವರದಿಯಾಗಿದೆ. ಕಳೆದ 2018ರ ಸಾಲಿಗೆ ಹೋಲಿಸಿ ನೋಡಿದಾಗ ಅಂತರ್ ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.2.6ರಷ್ಟು ಏರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ.
5 ವರ್ಷಗಳಲ್ಲಿ 6 ಕೋಟಿ ಪ್ರಯಾಣಿಕರನ್ನು ತಲುಪುವ ಗುರಿ
ಕಳೆದ 2018ಕ್ಕೆ ಹೋಲಿಸಿದರೆ 2019ರ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಮುಂದಿನ 5 ವರ್ಷಗಳಲ್ಲಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. 2025ರ ವೇಳೆಗೆ ವಾರ್ಷಿಕ ಪ್ರಯಾಣಿಕರ ಸಂಖ್ಯೆಯನ್ನು 5 ರಿಂದ 6 ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.