ಹಾಸನ :
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿ ತನ್ನನ್ನು ಆಸ್ಪತ್ರೆಗೆ ಸಾಗಿಸುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ವಾಹನ ಸವಾರರು ಮಾನವೀಯತೆ ತೋರದ ಹಿನ್ನೆಲೆ ರಸ್ತೆಯಲ್ಲೇ ಪ್ರಾಣಬಿಟ್ಟ ಘಟನೆ ಜಿಲ್ಲೆಯ ಹೊರವಲಯದಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಸಂಕೇನಹಳ್ಳಿ ನಿವಾಸಿ ಕಾಂತರಾಜು (30) ಎಂದು ಗುರುತಿಸಲಾಗಿದೆ. ಹಾಸನ ಹೊರ ವಲಯದ ಬಿಎಂ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಬೈಕ್ ಸವಾರ ಕಾಂತರಾಜು ಎಷ್ಟೇ ಗೋಗರೆದರೂ ಇತರ ವಾಹನ ಸವಾರರು ಕಾಂತರಾಜುನನ್ನು ಆಸ್ಪತ್ರೆಗೆ ಸಾಗಿಸಲು ಮುಂದೆ ಬರಲಿಲ್ಲ. ಆದರೆ ಕೊನೆಗೆ ಇಬ್ಬರು ಯುವಕರು ತಮ್ಮ ವಾಹನ ನಿಲ್ಲಿಸಿ ಆಂಬುಲೆನ್ಸ್ ಗೆ ಕರೆ ಮಾಡಿದರು. ಆಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿ ಕಾಂತರಾಜು ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಅಷ್ಟೊತ್ತಿಗಾಗಲೇ 20 ನಿಮಿಷ ರಕ್ತದ ಮಡುವಿನಲ್ಲೇ ಒದ್ದಾಡಿದ್ದ ಯುವಕ, ಕೊನೆಯುಸಿರೆಳೆದಿದ್ದಾನೆ.
ಅಪಘಾತ ಸಂಭವಿಸಿದ ತಕ್ಷಣ ಇತರ ವಾಹನ ಸವಾರರು ಕಾಂತರಾಜುನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೆ ಪ್ರಾಣ ಅಪಾಯದಿಂದ ಪಾರಾಗಬಹುದಿತ್ತು. ಆದರೆ ಜನರ ಬೇಜವಾಬ್ದಾರಿತನದಿಂದ ಆತ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ