ಆಸ್ಪತ್ರೆ ಮುಂಭಾಗದ ಚರಂಡಿಯಲ್ಲಿ ರಾರಾಜಿಸುತ್ತಿರುವ ಕಸ

ತುಮಕೂರು

ವಿಶೇಷ ವರದಿ :ರಾಕೇಶ್.ವಿ.

     ಕೊರಟಗೆರೆ ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ತೋವಿನಕೆರೆಯ ಮುಖ್ಯರಸ್ತೆಯಲ್ಲಿಯೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಚರಂಡಿಯಲ್ಲಿ ಕಸವು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಲಾಗದಿದ್ದುದರಿಂದ ನಾಗರಿಕರು ಪರದಾಡುವಂತಾಗಿದೆ. 

     ನಗರದ ಹೃದಯಭಾಗದಲ್ಲೇ ಇರುವ ಈ ಆಸ್ಪತ್ರೆಯು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಇರುವುದೊಂದೆ ಆಸ್ಪತ್ರೆ. ಈ ಭಾಗದಲ್ಲಿನ ಜನರಿಗೆ ಯಾವುದೇ ಕಾಯಿಲೆ ಬಂದರೂ ಇಲ್ಲಿಗೆ ಬರಬೇಕು. ಆದರೆ ಇಲ್ಲಿ ಬಂದೂ ಮತ್ತಷ್ಟು ಕಾಯಿಲೆಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಹತ್ತಾರು ಹಳ್ಳಿಗಳಿಗೆ ಒಂದೇ ಆಸ್ಪತ್ರೆ
   ತೋವಿನಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆಯು ಸುತ್ತಮುತ್ತಲಿನ 30 ಹಳ್ಳಿಗಳಿಗೆ ಆಶ್ರಯವಾಗಿದೆ. ತೋವಿನಕೆರೆ, ಕಬ್ಬಿಗೆರೆ, ದೊಡ್ಡೆಗೌಡನಪಾಳ್ಯ, ವೆಂಕಟರಾಮನಹಳ್ಳಿ, ಬಡಮುದ್ದನಪಾಳ್ಯ, ಗಟ್ಟಿ ತಿಮ್ಮನಹಳ್ಳಿ, ಮುದಿಗೌಡನಹಳ್ಳಿ,  ಚಿಕ್ಕರಸಹಳ್ಳಿ, ಕಣಿವೆ ಹೊಸಹಳ್ಳಿ, ದೇವರಹಳ್ಳಿ, ಸಿವಿಡಿಪಾಳ್ಯ, ಸಿಎಸ್‍ಜಿ ಪಾಳ್ಯ, ಕುರಿಹಳ್ಳಿ, ವಡ್ಡರಹಳ್ಳಿ, ಜೋನಿಗರಹಳ್ಳಿ, ಮಣುವಿನಕುರಿಕೆ, ಹೀಗೆ ಹತ್ತು ಹಲವು ಹಳ್ಳಿಗಳಿಗೆ ಇದು ಒಂದೇ ಆಸ್ಪತ್ರೆಯಾಗಿದೆ.
ಆಸ್ಪತ್ರೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿಗಳು
   ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಗೋಡೆಗೆ ಅಂಟಿಕೊಂಡಂತೆ ಸುಮಾರು ಪೆಟ್ಟಿಗೆ ಅಂಗಡಿಗಳಲ್ಲಿ ಜನ ವ್ಯಾಪಾರ ವಹಿವಾಟು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಮೂವತ್ತೂ ವರ್ಷಗಳಿಂದಲೂ ಇಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದು, ಇಂದಿಗೂ ಅದು ಮುಂದುವರೆದಿದೆ. ಇವುಗಳಿಂದ ಇಲ್ಲಿ ಆಸ್ಪತ್ರೆ ಇರುವುದೇ ಕಾಣುವುದಿಲ್ಲ.  ಇತ್ತೀಚೆಗೆ ನೂತನವಾಗಿ ಆಸ್ಪತ್ರೆಯ ನಾಮಫಲಕವನ್ನು ಗ್ರಾಮ ಪಂಚಾಯಿತಿಯಿಂದ ಅಳವಡಿಸಿದರಾದರೂ ಅದು ಕೂಡ ಚಿಕ್ಕ ಅಳತೆಯನ್ನು ಹೊಂದಿದೆ.
ಸೂಚನ ಫಲಕಗಳ ಅವಶ್ಯಕತೆ
   ತೋವಿನಕೆರೆಗೆ ಪ್ರವೇಶಿಸುತ್ತಿದ್ದಂತೆ ಎಲ್ಲಿಯೂ ಆಸ್ಪತ್ರೆ ಇರುವುದರ ಬಗ್ಗೆ ಮಾಹಿತಿಯ ಫಲಕಗಳು ಕಂಡು ಬರುವುದಿಲ್ಲ. ಆಸ್ಪತ್ರೆ ಮುಂಭಾಗದಲ್ಲಿ ನೂತನವಾಗಿ ಅಳವಡಿಸಿರುವುದು ಬಿಟ್ಟರೆ ಅದಕ್ಕೆ ಮಾರ್ಗ ಸೂಚಿಸುವ ಫಲಕಗಳಾಗಲಿ ಅಥವಾ ಆಸ್ಪತ್ರೆ ಮುಂದೆ ಇದೆ ಎಂಬ ಯಾವುದೇ ಸೂಚನಾ ಫಲಕಗಳು ಇಲ್ಲ.
ಆಸ್ಪತ್ರೆ ಮುಂದೆ ಬೇಕಿವೆ ಹಂಪ್ಸ್‍ಗಳು
     ತೋವಿನಕೆರೆಯಿಂದ ಕೋರಾ, ವಸಂತನರಸಾಪುರ, ಶಿರಾ ಹಾಗೂ ಕೊರಟಗೆರೆ, ಮಧುಗಿರಿ ಕಡೆಗೆ ಮಾರ್ಗಗಳಿವೆ. ಇದರಿಂದ ಸಾಮಾನ್ಯವಾಗಿಯೇ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಈ ನಡುವೆ ನೂತನವಾಗಿ ಸಿಸಿ ರಸ್ತೆ ಕಾಮಗಾರಿ ನಡೆದು ಪಟ್ಟಣದಲ್ಲಿ ಉತ್ತಮ ರಸ್ತೆ ಇದ್ದು, ಇದರಿಂದ ವಾಹನಗಳ ವೇಗಕ್ಕೆ ಮಿತಿ ಇಲ್ಲದಂತಾಗಿದೆ. ಆಸ್ಪತ್ರೆ ಮುಂಭಾಗದಲ್ಲಿ ಒಂದು ಹಂಪ್ಸ್ ಅಳವಡಿಸಿದ್ದರೆ ವಾಹನಗಳ ವೇಗ ಕಡಿಮೆಯಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು.
ಚರಂಡಿಯಲ್ಲಿ ತುಂಬಿಕೊಂಡ ಕಸ
        ಆಸ್ಪತ್ರೆ ಮುಂಭಾಗದಲ್ಲಿ ಕೊಳಚೆ ನೀರು ಹರಿಯಲು ಮಾಡಲಾದ ಚರಂಡಿಯಲ್ಲಿ ನೀರು ಹರಿಯುವುದರ ಬದಲಾಗಿ ಕಸದ ರಾಶಿ ತುಂಬಿಕೊಂಡಿದೆ. ಚರಂಡಿಯ ಮೇಲ್ಭಾಗದಲ್ಲಿ ಅಂಗಡಿ ಮುಂಗಟ್ಟುಗಳಿರುವುದರಿಂದ ಸ್ವಚ್ಛ ಮಾಡಲು ಆಗುತ್ತಿಲ್ಲ. ಪೌರ ಕಾರ್ಮಿಕರು ಕೆಳಭಾಗದಲ್ಲಿ ಇಳಿದು ಕಸವನ್ನು ತೆರವು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ತುಂಬೆಲ್ಲ ಧೂಳು
      ರಸ್ತೆಯ ಮೇಲ್ಬಾಗದಲ್ಲಿ ಪ್ರತಿನಿತ್ಯ ಧೂಳು ತುಂಬಿಕೊಂಡಿರುತ್ತದೆ. ಅಕ್ಕಪಕ್ಕದಲ್ಲಿ ವಿವಿಧ ಮಳಿಗೆಗಳು ಸೇರಿದಂತೆ ವಿವಿಧ ಕಚೇರಿಗಳು ಇವೆ. ಇನ್ನೂ ರಸ್ತೆ ಮೇಲೆ ಯಾವುದೇ ವಾಹನ ಓಡಾಡಿದರೂ ರಸ್ತೆ ಮೇಲಿನ ಧೂಳು ಪಾದಾಚಾರಿಗಳಿಗೆ ಹಾಗೂ ವ್ಯಾಪಾರ ವಹಿವಾಟು ಮಾಡುವವರ ಮೇಲೆ ನೋಡಬಹುದಾಗಿದೆ. 
ಹೈರಾಣಾಗುತ್ತಿರುವ ರೋಗಿಗಳು
     ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವು ಮುಖ್ಯರಸ್ತೆಯ ಪಕ್ಕದಲ್ಲೆ ಇದ್ದು, ಈ ರಸ್ತೆಯಲ್ಲಿ ನಿತ್ಯ ನೂರಾರು ಬಸ್, ಲಾರಿಗಳು ಓಡಾಡುತ್ತವೆ. ಇವುಗಳಂದ ಹೊರಬರುವ ಶಬ್ಧ, ಹೊಗೆಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಹೈರಾಣಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರು, ಹಿರಿಯರು, ಗರ್ಭಿಣಿಯರು ಭಯಭೀತರಾಗುತ್ತಿದ್ದಾರೆ.
ರೋಗ ಹರಡುವ ಭೀತಿ
    ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಂಡು ಬಂದರೂ ಹೊರಭಾಗದಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಆಸ್ಪತ್ರೆ ಮುಂಭಾಗದ ಚರಂಡಿಯಲ್ಲಿ ಅನಾವಶ್ಯಕ ವಸ್ತುಗಳು ಕೊಳೆತು ಗಬ್ಬು ನಾರುತ್ತಿವೆ. ಇಲ್ಲಿ ಸೊಳ್ಳೆಗಳು, ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ವಿವಿಧ ರೋಗಗಳನ್ನು ಹರಡುತ್ತಿವೆ. ಇಷ್ಟಾದರೂ ಈ ಬಗ್ಗೆ ಯಾವೊಬ್ಬ ಅಧಿಕಾರಿಯಾಗಲಿ, ಪಂಚಾಯತಿಯವರಾಗಲಿ ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
   ಕೊರಟಗೆರೆ ಕ್ಷೇತ್ರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರತಿನಿಧಿಸುತ್ತ್ತಿರುವ ಕ್ಷೇತ್ರವಾಗಿದೆ. ಆದರೆ ಇಲ್ಲಿನ ಆಸ್ಪತ್ರೆ ಮುಂಭಾಗದಲ್ಲಿನ ಕೆಲ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೀವ್ರತರವಾಗಿ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಶಾಸಕರು ಸಮಸ್ಯೆ ಪರಿಹರಿಸುವತ್ತ ಕ್ರಮ ಕೈಗೊಳ್ಳಬೇಕಿದೆ.
ನಾರಾಯಣ್, ಸ್ಥಳೀಯ ವ್ಯಕ್ತಿ
   ಬಡ ವ್ಯಕ್ತಿಗಳು ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‍ನಿಂದ ಕಸದ ನಿರ್ಮೂಲನೆಗೆ ನೂತನ ವಾಹನವನ್ನು ಕಳುಹಿಸುತ್ತಿದ್ದಾರೆ. ಇದರಿಂದ ವೈಜ್ಞಾನಿಕವಾಗಿ ಆಸ್ಪತ್ರೆ ಮುಂಭಾಗದಲ್ಲಿನ ಕಸ ತೆರವು ಮಾಡಿಸುತ್ತೇವೆ. 
ಕೆಂಪಣ್ಣ, ಗ್ರಾ.ಪಂ ಉಪಾಧ್ಯಕ್ಷ
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link