ನಮ್ಮ ತಪ್ಪಿನಿಂದ ನಾವು ಕಲಿತಿದ್ದೇವೆ : ಡಿ ಕೆ ಶಿವಕುಮಾರ್

ಬೆಂಗಳೂರು

   ಕಳೆದ ಚುನಾವಣೆ ವೇಳೆ ಸ್ವಲ್ಪ ಯಾಮಾರಿದ್ದೇವೆ, ಕಾಂಗ್ರೆಸ್-ಜೆಡಿಎಸ್‌ ಚೆನ್ನಾಗಿ ರಾಜಕೀಯ ಚದುರಂಗದಾಟ ಆಡಿದ್ದರೆ ಬಿಜೆಪಿಗೆ ಹತ್ತು ಸ್ಥಾನಗಳೂ ಬರಲು ಸಾಧ್ಯವಿರುತ್ತಿರಲಿಲ್ಲ. ನಮ್ಮ ತಪ್ಪಿನಿಂದಾಗಿ ಮುಂದೆ ಹೇಗೆ ರಾಜಕಾರಣ ಮಾಡಬೇಕು ಎಂಬ ಅನುಭವವಾಗಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

   ರಾಮನಗರದಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಯುತ್ತಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅಸೂಯೆ, ಹೊಟ್ಟೆಉರಿಗೆ ಮದ್ದು ಇಲ್ಲ. ಲೋಕಸಭೆಯಲ್ಲಿ ಬಿಜೆಪಿಗೆ 25, ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದೊಂದು ಸ್ಥಾನ ಬಂದಿವೆ. ಒಂದು ವೇಳೆ ನಾವು ಜೆಡಿಎಸ್, ರಾಜಕೀಯ ಚದುರಂಗ ಆಟವನ್ನು ಚೆನ್ನಾಗಿ ಆಡಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ. ಲೋಕಸಭಾ ಚುನಾವಣೆ ನಂತರ ಬಿಜೆಪಿಗೆ ನಿರೀಕ್ಷಿತ ಗೆಲುವು ಬಂದಿಲ್ಲ. ಈಗಾಗಲೇ ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನದಲ್ಲೂ ಹಿನ್ನಡೆ ಆಗಿದೆ. ಉತ್ತರ ಭಾರತದಾದ್ಯಂತ ಬಿಜೆಪಿ ನೆಲ ಕಚ್ಚುತ್ತಿದೆ. ದೆಹಲಿಯಲ್ಲಿಯೂ ಬಿಜೆಪಿಗೆ ಗೆಲುವು ಇಲ್ಲ ಎಂದು ಭವಿಷ್ಯ ನುಡಿದರು.

   ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದೆ ಎಂಬ ದ್ವೇಷದಿಂದ ಒಂದಲ್ಲ ಒಂದು ರೀತಿಯಲ್ಲಿ ಡಿಸ್ಟರ್ಬ್ ಮಾಡಲು ಹೊರಟಿದ್ದಾರೆ‌. ಬಿಜೆಪಿಯವರು ನೇರವಾಗಿ ಹೇಳದೇ , ಆರ್ ಎಸ್ ಎಸ್ ಅನ್ನು ಮುಂದೆ ಬಿಟ್ಟು ಏನೇನೋ ಕುತಂತ್ರ ರೂಪಿಸಿ, ಜನರ ಭಾವನೆ ಕೆರಳಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಪಥ ಸಂಚಲನ ಆದರೂ ಮಾಡಿಕೊಳ್ಳಲಿ, ಚೆಡ್ಡಿಯಾದರೂ ಹಾಕಿಕೊಳ್ಳಲಿ, ಪಂಚೆಯಾದರೂ ಉಟ್ಟುಕೊಳ್ಳಲಿ. ಮಾವಿನ ಹಣ್ಣು ಕೆಂಪಗೆ ಇದ್ದಾಗ ಮಾತ್ರ ಜನ ನೋಡುತ್ತಾರೆ. ಮನುಷ್ಯ ಬೆಳ್ಳಗೆ, ಬಲಿಷ್ಠನಾಗಿದ್ದಾಗ ಮಾತ್ರ ನೋಡುತ್ತಾರೆ. ಸಹೋದರ ಡಿ.ಕೆ.ಸುರೇಶ್ ಜನರ ಪರ ಕೆಲಸ ಮಾಡುತ್ತಿದ್ದು, ಅದನ್ನು ಸಹಿಸದೇ ಈ ರೀತಿ ತಂತ್ರ ಮಾಡುತ್ತಿದ್ದಾರೆ‌. ಸಂಘಪರಿವಾರ , ಬಿಜೆಪಿ ಏನು ಬೇಕಾದರೂ ಮಾಡಲಿ. ಅದಕ್ಕೆಲ್ಲ ತಲೆ ಕೆಡೆಸಿಕೊಳ್ಳದೇ ನಾವು ನಮ್ಮ ರಾಜಕೀಯ ಮಾಡುತ್ತೇವೆ. ಪಥ ಸಂಚಲನ ಆದರೂ ಮಾಡಲಿ, ಉರುಳು ಸೇವೆಯಾದರೂ ಮಾಡಲಿ, ಎಲ್ಲರಿಗೂ ಕಾವಿಯಾದರೂ ತೊಡಿಸಲಿ. ಆದರೆ ನಾವು ಯಾವುದಕ್ಕೂ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

   ಫಥ ಸಂಚಲನಕ್ಕೆ ಬರುವ ಜನರಿಗೆ ಅಗತ್ಯವಿದ್ದಲ್ಲಿ ತಾವೇ ಊಟದ ವ್ಯವಸ್ಥೆ ಮಾಡಿಕೊಡುತ್ತೇವೆ‌. ಕಳೆದ ಬಾರಿ ಕನಕಪುರದಲ್ಲಿ ಜಾಥ ಮಾಡಿದಾಗ ಎಷ್ಟು ಜನ ಭಾಗವಹಿಸಿದ್ದರು ಎಂಬ ವೀಡಿಯೋ ಪ್ರದರ್ಶಿಸಲಿ. ಅವರವರ ಜಾಥಕ್ಕೆ ಜನರು ಎಲ್ಲೆಲ್ಲಿಂದ ಬಂದರು ಎಂಬ ಬಗ್ಗೆ ಪೊಲೀಸರೇ ತಮಗೆ ಮಾಹಿತಿ ನೀಡಿದ್ದಾರೆ. ಜನರು ಬಂದಿರುವುದನ್ನು ತಾವು ಸಹ ವೀಡಿಯೋ ಮಾಡಿ ಇರಿಸಿದ್ದೇನೆ. ಈಗ ಎಲ್ಲಿಂದ ಆದರೂ ಜನರನ್ನು ಕರೆ ತರಲಿ. ಉತ್ತರ ಪ್ರದೇಶದಿಂದ ಆದರೂ ಬರಲಿ, ರಾಮನಗರದಿಂದ ಆದರೂ ಬರಲಿ, ಆನೇಕಲ್ ನಿಂದ ಆದರೂ ಬರಲಿ. ಬೆಂಗಳೂರು, ಮಂಗಳೂರಿನಿಂದಲಾದರೂ ಕರೆದುಕೊಂಡು ಬರಲಿ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link