ಜಂತು ಹುಳು ನಿಯಂತ್ರಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯ..!

ಚಳ್ಳಕೆರೆ

      ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಪುಟ್ಟ ಮುಗ್ಧ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿರುವ ಜಂತು ಹುಳು ನಿವಾರಣೆ ಕುರಿತು ರಾಷ್ಟ್ರೀಯ ಮಟ್ಟದಲ್ಲೇ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದ್ದು, ಇಂತಹ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಸರ್ವರೂ ಕೈಜೋಡಿಸಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

     ಅವರು, ಸೋಮವಾರ ಇಲ್ಲಿನ ಮಾಕಂಸ್ ರೋಟರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದ ಜಂತು ಹುಳು ನಿವಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ಸಾಮಾನ್ಯವಾಗಿ ಪ್ರತಿನಿತ್ಯವೂ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುವುದು ಸ್ವಾಭಾವಿಕವಾಗಿ ಆದರೆ, ಕೆಲವೊಮ್ಮೆ ನಾವು ಸೇವಿಸುವ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗದೆ ಹಾಗೆ ಉಳಿದು ಜಂತು ಹುಳು ಹೊಟ್ಟೆಯಲ್ಲಿ ಬೆಳೆದು ಆರೋಗ್ಯವನ್ನು ಹಾಳು ಮಾಡುತ್ತದೆಯಲ್ಲದೆ, ಕೆಲವೊಮ್ಮೆ ಅಪಾಯವನ್ನು ಸಹ ತಂದೊಡ್ಡುತ್ತದೆ. ಈ ನಿಟ್ಟಿನಲ್ಲಿ ಜಂತು ಹುಳು ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಬೇಕೆಂದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಸರ್ಕಾರದಿಂದ ಉಚಿತವಾಗಿ ವರ್ಷಕ್ಕೆ ಎರಡು ಬಾರಿ ಜಂತು ಹುಳು ನಿವಾರಣ ಮಾತ್ರೆಗಳನ್ನು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಪ್ರಸ್ತುತ ತಾಲ್ಲೂಕಿನಾದ್ಯಂತ 529 ಶಾಲೆಗಳು, 480 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟಾರೆ 1 81 281 ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಯನ್ನು ನೀಡಬೇಕಿದೆ. ಈ ಅಂದೋಲನಕ್ಕೆ ಶಾಸಕರೇ ಚಾಲನೆ ನೀಡಿದ್ದು, ನಿಗದಿತ ಅವಧಿಯಲ್ಲಿ ಎಲ್ಲಾ ಮಕ್ಕಳಿಗೂ ಈ ಮಾತ್ರೆಗಳನ್ನು ಕೂಡಲೇ ವಿತರಿಸುವುದಾಗಿ ಅವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯ ಜಿ.ವೀರೇಶ್, ನಗರಸಭಾ ಸದಸ್ಯ ರಮೇಶ್‍ಗೌಡ, ಶಿಶು ಅಭಿವೃದ್ಧಿ ಅಧಿಕಾರಿ ಮೋಹನ್‍ಕುಮಾರಿ, ಪೌರಾಯುಕ್ತ ಪಿ.ಪಾಲಯ್ಯ, ರೋಟರಿ ಮಾಕಂಸ್ ಶಾಲೆಯ ಅಧ್ಯಕ್ಷ ಡಾ.ಕೆ.ಎಂ.ಜಯಕುಮಾರ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ಎಸ್.ಬಿ.ತಿಪ್ಪೇಸ್ವಾಮಿ, ಎನ್.ಪ್ರೇಮಕುಮಾರ್, ತಿಪ್ಪೀರಮ್ಮ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link