ತುಮಕೂರು
ವಾಹನದ ಸೂಕ್ತ ದಾಖಲಾತಿಗಳು, ಅರ್ಹತಾ ಪತ್ರ ನವೀಕರಣ ಮಾಡದೆ ಇರುವುದು, ನಿಗದಿತ ಸಮಯದೊಳಗೆ ತೆರಿಗೆ ಹಣ ಪಾವತೆ ಮಾಡದೇ ಇರುವ ವಾಹನಗಳನ್ನು ಜಫ್ತು ಮಾಡಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು ಎಚ್ಚರಿಕೆ ನೀಡಿದರು.
ನಗರದ ಆರ್‍ಟಿಒ ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಲವು ವಾಹನಗಳ ಮಾಲೀಕರು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡುತ್ತಿಲ್ಲ. ವಾಹನಗಳಿಗೆ ವಿಮಾ ಪತ್ರ ಇಟ್ಟುಕೊಳ್ಳುವುದಿಲ್ಲ. ಅರ್ಹತಾ ಪತ್ರ ನವೀಕರಣ ಮಾಡಿಸಿಕೊಳ್ಳದೆ ಹಾಗೆ ಓಡಾಡಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹಾಲು ಒಕ್ಕೂಟದ ವಾಹನಗಳಿಗೆ ಯಾವ ದಾಖಲೆಗಳು ಇಲ್ಲದೆ ಓಡಾಡಿಸುತ್ತಿರುವದರ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಹಲವು ವಾಹನಗಳಿಗೆ ದಾಖಲೆಗಳಿಲ್ಲದಿರುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಮೂರು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ತುರ್ತು ಸರಕು ಸಾಗಾಟ ಮಾಡುವ ವಾಹನಗಳಲ್ಲಿ ಹಾಲು ಒಕ್ಕೂಟದ ವಾಹನವು ಒಂದಾಗಿದ್ದು, ಇವರಗೆ ಎಚ್ಚರಿಕೆಯ ನೋಟೀಸ್ ನೀಡಲಾಗುತ್ತಿದೆ. ಅರ್ಹತಾ ಪತ್ರ ಮತ್ತು ರಹದಾರಿ ಇಲ್ಲದೆ ಸಂಚರಿಸುತ್ತಿರುವುದು ಕಂಡು ಬಂದಿದ್ದು, ಇಂತಹ ವಾಹನಗಳು ರಸ್ತೆ ಮೇಲೆ ಓಡಾಡುವುದು ಸಂಚಾರಿ ನಿಯಮ ಉಲ್ಲಂಘಿಸಿದಂತೆ ಆಗುತ್ತದೆ. ಈ ವಾಹನಗಳು ತುರ್ತು ಸೇವಾ ವಾಹನಗಳಾಗಿರುವುದರಿಂದ ಪ್ರವರ್ತನಾ ಸಮಯದಲ್ಲಿ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಆದ್ದರಿಂದ ಇಂತಹ ವಾಹನಗಳಿಗೆ ಹಾಲು ತುಂಬುವ ಮುನ್ನ ವಾಹನದ ಎಲ್ಲಾ ಮೂಲ ದಾಖಲೆಗಳು ಸರಿಯಾಗಿ ಇವೆಯೇ ಎಂಬುದು ಪರಿಶೀಲಿಸಿಕೊಳ್ಳಬೇಕು ಎಂಬುದಾಗಿ ಎಚ್ಚರಿಕಾ ನೋಟೀಸ್ ನೀಡಲಾಗುತ್ತಿದೆ ಎಂದರು.
ಮ್ಯಾಕ್ಸ್ ಕ್ಯಾಬ್‍ಗಳಂತ ವಾಹನದಲ್ಲಿ ಒಬ್ಬ ಚಾಲಕ ಸೇರಿದಂತೆ 12ಜನರನ್ನು ಮಾತ್ರ ಅದರಲ್ಲಿ ಕೂರಿಸಿಕೊಳ್ಳಬೇಕು. ಆದರೆ ಕೆಲವರು ಅದನ್ನು ಲೆಕ್ಕಿಸದೆ ವಾಹನ ಚಲಾಯಿಸಿದ್ದನ್ನು ಗಮನಿಸಿದ ಆರ್‍ಟಿಒ ಅಧಿಕಾರಿಗಳು ಮ್ಯಾಕ್ಸ್ ಕ್ಯಾಬ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮುಂದೆ ಯಾರಾದರೂ ನಿಗಧಿತ ಆಸನಗಳಿಗಿಂತ ಹೆಚ್ಚಿನದಾಗಿ ಪ್ರಯಾಣಿಕರನ್ನು ಕೂರಿಸಿಕೊಂಡರು ಅಂತಹ ವಾಹನಗಳನ್ನು ಕೂಡ ಜಫ್ತಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಫ್ತು ಮಾಡಲಾದ ವಾಹನಗಳನ್ನು ಹಾಗೂ ದಾಖಲೆ ಪತ್ರಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು ಹಾಗೂ ಮೋಟಾರ್ ವಾಹನಗಳ ನಿರೀಕ್ಷ ಎಚ್.ಸದ್ರುಲ್ಲ ಶರೀಫ್ ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ