ಬಿಬಿಎಂಪಿಯಿಂದ ಪಶ್ಚಿಮ ವಲಯದ ಪೌರಕಾರ್ಮಿಕರಿಗೆ ಗೃಹ ಭಾಗ್ಯ

ಬೆಂಗಳೂರ

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಿರ್ಮಿಸಿರುವ ಮನೆಗಳನ್ನು ಪಶ್ಚಿಮ ವಲಯದ ಪೌರಕಾರ್ಮಿಕರಿಗೆ ಮೇಯರ್ ಗೌತಮ್ ಕುಮಾರ್ ಅವರು ಹಕ್ಕು ಪತ್ರ ವಿತರಿಸಲಾಯಿತು.

      ಮಲ್ಲೇಶ್ವರಂನಲ್ಲಿರುವ ಐಪಿಪಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಿಸಿ ಮಾತನಾಡಿದ ಮೇಯರ್ ಗೌತಮ್ ಕುಮಾರ್ ಅವರು, ಪ್ರಸ್ತುತ ಸುಮಾರು 272 ಮಂದಿ ಪಾಲಿಕೆಯ ಅರ್ಹ ಫಲಾನುಭವಿಗಳಿಗೆ ಪ್ಲಾಟ್‌ಗಳನ್ನು ನೀಡಲು ಗುರುತಿಸಲಾಗಿದ್ದು ಇದರಲ್ಲಿ ಪಶ್ಚಿಮ ವಲಯ ವ್ಯಾಪ್ತಿಯಿಂದ ಒಟ್ಟು 89 ಮಂದಿ ಫಲಾನುಭವಿಗಳಿಗೆ ಪ್ಲಾಟುಗಳನ್ನು ನೀಡಲಾಗಿದೆ ಎಂದರು.

     2015-16 ನೇ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, ಈ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ತಲಾ ಪ್ಲಾಟಿನ ಒಟ್ಟಾರೆ ಮೊತ್ತದಲ್ಲಿ 9 ಲಕ್ಷ ರೂ. ಗಳಲ್ಲಿ 6 ಲಕ್ಷಗಳನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ 3 ಲಕ್ಷ ರೂ.ಗಳನ್ನು ಬಿಬಿಎಂಪಿ ಭರಿಸುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸತ್ತಿರುವ ಸುಮಾರು 400 ಮಂದಿ ಖಾಯಂ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಬಿಡಿಎ ಆಲೂರಿನಲ್ಲಿ ನಿರ್ಮಿಸಿರುವ ಪ್ಲಾಟುಗಳನ್ನು ಹಂಚಿಕೆ ಮಾಡಲು ಉದ್ದೇಶಿಸಿದೆ ಎಂದು ಹೇಳಿದರು.

     ಬೆಂಗಳೂರು ನಗರ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಅತ್ಯಂತ ಮಹತ್ವದ್ದಾಗಿದೆ. ಅವರಲ್ಲಿರುವ ಸೇವಾ ಮನೋಭಾವನೆಯಿಂದ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗಿದೆ. ಬೆಳಿಗ್ಗೆಯಿಂದ ಸಂಜೆ ವರೆಗೆ ನಗರವನ್ನು ಶುಚಿಗೊಳಿಸಿ ಆರೋಗ್ಯ ಕಾಪಾಡಲು ಕಾರಣೀಭೂತರಾಗಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಬಿಬಿಎಂಪಿ ವತಿಯಿಂದ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾಕಷ್ಟು ಮಂದಿ ಇವುಗಳಿಂದ ತೊಂದರೆಗೆ ಒಳಗಾಗಿದ್ದಾರೆ.

     ಈ ಹಿನ್ನೆಲೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 2 ಕ್ಯಾನಲ್‌ಗಳನ್ನು ನಿರ್ಮಾಣ ಮಾಡಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಸರಕಾರಿ ಸ್ವಾಮ್ಯದ 150 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿದ್ದು ಇದರಲ್ಲಿ ಬಿಬಿಎಂಪಿ ವ್ಯಾಪ್ತಿಗೆ 85 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಸೇರಲಿವೆ. ಈ ಚಿಕಿತ್ಸಾ ಕೇಂದ್ರಗಳಲ್ಲಿ ನಾಯಿಗಳು ಕಚ್ಚಿದ ರೇಬಿಸ್ ವ್ಯಾಕ್ಸಿನ್ ಔಷಧಿ ಉಚಿತವಾಗಿ ಲಭ್ಯವಾಗಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು. ರೇಬಿಸ್ ಔಷಧಿಗೆ ಯಾವುದೇ ಕೊರತೆಯಿಲ್ಲ. ಈ ಬಗ್ಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ಕಾರ್ಯಕ್ರಮದಲ್ಲಿ ಸುಮಾರು 60 ಮಂದಿ ಫಲಾನುಭವಿಗಳಿಗೆ ಪ್ಲಾಟ್‌ಗಳ ಹಕ್ಕು ಪತ್ರಗಳನ್ನು ವಿತರಿಸಲಾಯಿತು.ಉಪ ಮಹಾಪೌರ ರಾಮಮೋಹನ ರಾಜ್, ಪಶ್ಚಿಮ ವಲಯ ಆಯುಕ್ತ ಬಸವರಾಜು, ಮಂಜುನಾಥ ರಾಜ್, ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link