ತುಮಕೂರು
ಶೇ.15 ರಿಂದ 20 ರಷ್ಟು ಆಸ್ತಿ-ನೀರಿನ ತೆರಿಗೆ ಏರಿಕೆ

ತುಮಕೂರು ನಗರದಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು 2020-21 ನೇ ಸಾಲಿನಿಂದ ಅನ್ವಯಿಸುವಂತೆ ಶೇ.15 ರಿಂದ ಶೇ.20 ರಷ್ಟು ಏರಿಸಲು ತುಮಕೂರು ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ನಿರ್ಣಯಿಸಿರುವುದು ಬೆಳಕಿಗೆ ಬಂದಿದ್ದು, ನಗರದ ನಾಗರಿಕರಿಗೆ ಮತ್ತೊಮ್ಮೆ ತೆರಿಗೆಯ ಹೊರೆ ಬೀಳಲಿದೆ.
ಸ್ಥಾಯಿ ಸಮಿತಿಯ ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಂಡಿದ್ದು, ಈ ಬಗ್ಗೆ ಮುಂದಿನ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಲಭಿಸಬೇಕಿದೆ.
2020-21 ನೇ ಸಾಲಿನಿಂದ ಆಸ್ತಿ ತೆರಿಗೆಯನ್ನು ವಾಸೋಪಯೋಗಿಯಾಗಿದ್ದರೆ (ರೆಸಿಡೆನ್‍ಷಿಯಲ್) ಶೇ. 15 ರಷ್ಟು ಹಾಗೂ ವಾಣಿಜ್ಯವಾಗಿದ್ದರೆ (ಕಮರ್ಷಿಯಲ್) ಶೇ. 20 ರಷ್ಟು ಏರಿಸಲು ನಿರ್ಧರಿಸಲಾಗಿದೆ. ಇದೇ ರೀತಿ ಕುಡಿಯುವ ನೀರಿನ ಶುಲ್ಕವನ್ನೂ ಪರಿಷ್ಕರಿಸಲು ಒಪ್ಪಲಾಗಿದೆ. ಇದರಲ್ಲೂ ವಾಸೋಪಯೋಗಿಯಾಗಿದ್ದರೆ ಶೇ. 15 ರಷ್ಟು ಹಾಗೂ ವಾಣಿಜ್ಯವಾಗಿದ್ದರೆ ಶೇ.20 ರಷ್ಟು ಏರಿಕೆ ಮಾಡಲು ಉದ್ದೇಶಿಸಲಾಗಿದೆ. ನಗರದ ಆಸ್ತಿದಾರರು ಹಾಲಿ ಪಾವತಿ ಮಾಡುತ್ತಿರುವ ತೆರಿಗೆಯ ಜೊತೆಗೆ ಇನ್ನುಮುಂದೆ ಈ ಪ್ರಮಾಣದಲ್ಲಿ ಹೆಚ್ಚುವರಿ ಆಗಲಿದೆ.
ನಗರಾದ್ಯಂತ ಖಾಲಿ ನಿವೇಶನವಿದ್ದರೆ ಅವುಗಳಲ್ಲಿ ಅನೈರ್ಮಲ್ಯವಿದ್ದರೆ ಅದನ್ನು ಪಾಲಿಕೆ ವತಿಯಿಂದ ಶುಚಿಗೊಳಿಸಿ, ಆಯಾ ನಿವೇಶನದ ಮಾಲೀಕರಿಗೆ ಶುಚಿತ್ವ ಶುಲ್ಕ ವಿಧಿಸುವ ಬಗೆಗೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಪಾಲಿಕೆ ವತಿಯಿಂದ ಪ್ರಕಟಣೆ ಹೊರಡಿಸುವಂತೆಯೂ ಸೂಚಿಸಲಾಗಿದೆ.
ಪ್ರತಿ 3 ವರ್ಷಗಳಿಗೊಮ್ಮೆ
ಸರ್ಕಾರದ ನಿಯಮಾವಳಿಗಳ ಅನುಸಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ, ನೀರಿನ ತೆರಿಗೆ ಏರಿಸುವುದು ಪಾಲಿಕೆಗೆ ಅನಿವಾರ್ಯವಾಗಿದೆ. ಅದರಂತೆ ಈಗ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. 2005-06 ನೇ ಸಾಲಿನಿಂದ ಈ ಪದ್ಧತಿ ಜಾರಿಯಲ್ಲಿದೆ. ಕಳೆದ ಬಾರಿ 2017-18 ನೇ ಸಾಲಿನಲ್ಲಿ ತೆರಿಗೆ ಏರಿಕೆ ಮಾಡಲಾಗಿದೆ. ಅದಾದ ಬಳಿಕ ಈಗ 2020-21 ನೇ ಸಾಲಿನಿಂದ ತೆರಿಗೆ ಏರಿಸಲು ಸ್ಥಾಯಿ ಸಮಿತಿಯು ನಿಯಮಾನುಸಾರ ನಿರ್ಣಯಿಸಿದೆ ಎಂದು ಪಾಲಿಕೆಯ ಮೂಲಗಳು ಹೇಳುತ್ತಿವೆ.
ಗುಜರಿ ವ್ಯಾಪಾರಿಗಳಿಗೆ ಪರವಾನಗಿಗೆ ಒಪ್ಪಿಗೆ
ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ಗುಜರಿ ವ್ಯಾಪಾರಿಗಳಿಗೆ ಉದ್ದಿಮೆ ಪರವಾನಗಿ ನೀಡಲು ಮತ್ತು ಅವರಿಂದ ಆಸ್ತಿ ತೆರಿಗೆ ಪಾವತಿಸಿಕೊಳ್ಳುವ ಮತ್ತೊಂದು ಮಹತ್ವದ ತೀರ್ಮಾನವನ್ನು ಸ್ಥಾಯಿ ಸಮಿತಿ ಕೈಗೊಂಡಿದೆ.
ಕಾಂಗ್ರೆಸ್‍ನ ಇನಾಯತ್ ಉಲ್ಲಾ ಖಾನ್ (16 ನೇ ವಾರ್ಡ್- ಕೆ.ಆರ್.ಬಡಾವಣೆ) ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ನಗರದ ರಿಂಗ್ ರಸ್ತೆಯಲ್ಲಿ ಗುಜರಿ ವ್ಯಾಪಾರಿಗಳಿದ್ದಾರೆ. ಸುಮಾರು 166 ಚಿಕ್ಕ ಶೀಟ್‍ಗಳ ಅಂಗಡಿಗಳನ್ನು ನಿರ್ಮಿಸಿಕೊಂಡು, ಜೀವನೋಪಾಯ ಮಾಡುತ್ತಿದ್ದಾರೆ. ಆದ್ದರಿಂದ ಇವರಿಂದ ಆಸ್ತಿ ತೆರಿಗೆ ಪಾವತಿಸಿಕೊಂಡರೆ, ಪಾಲಿಕೆಗೆ ತೆರಿಗೆ ಸಂದಾಯವಾದಂತಾಗುತ್ತದೆ. ಅಲ್ಲದೆ ಇವರಿಗೆ ಉದ್ದಿಮೆ ಪರವಾನಗಿಯನ್ನೂ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಇದಕ್ಕೆ ಸಭೆಯು ಒಪ್ಪಿಗೆ ಸೂಚಿಸಿದೆ.
ನೇಮಕಕ್ಕೆ ಒತ್ತಾಯ
ಪಾಲಿಕೆಯ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲು ಅನುಕೂಲವಾಗುವಂತೆ ಶೀಘ್ರಲಿಪಿಕಾರರನ್ನು ಮತ್ತು ಸರ್ವೇಯರ್‍ಗಳನ್ನು ಪಾಲಿಕೆಗೆ ನೇಮಿಸಿಕೊಳ್ಳಬೇಕೆಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ತಕ್ಷಣವೇ ಪತ್ರ ಬರೆಯಲು ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
