ಜಿಎಸ್‍ಟಿ ತೆರಿಗೆಯಿಂದ ಸಕಾರಾತ್ಮಕ ಪರಿಣಾಮಕ್ಕಿಂತ ನಕಾರಾತ್ಮಕ ಪರಿಣಾಮಗಳು ಹೆಚ್ಚಾಗಿವೆ. ಅದರ ಒಂದು ವಿಕೃತ ರೂಪವೇ ಸಿಗರೇಟ್ ಕಳ್ಳ ಸಾಗಾಣಿಕೆ. ಇದು ಭಾರತದಲ್ಲಿ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ದಂಧೆಯಾಗಿ ಪರಿಣಮಿಸಿದೆ.
ಇನ್ನೂ ಈ ಸಿಗರೇಟ್ ಕಳ್ಳ ಸಾಗಾಣಿಕೆಯ ವಿಸ್ತೀರ್ಣವನ್ನು ನೋಡುವುದಾದರೆ 1 ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿ ಬೆಲೆಬಾಳುವ ಸಿಗರೇಟ್‍ಗಳನ್ನು ಅಕ್ರಮವಾಗಿ ಬಿಕರಿ ಮಾಡಲು ಸ್ವಯಂ ಕಂಪನಿಗಳೇ ಕುಮ್ಮಕ್ಕು ನೀಡುತ್ತಿರುವುದು ವಿಪರ್ಯಾಸ. ಇನ್ನು ಜಾಗತಿಕವಾಗಿ ಸಿಗರೇಟ್ ಬಿಕರಿ ಅಂಕಿ ಅಂಶ ದಾಖಲಿಸುವ ಯುರೊಮೊನಿಟರ್ ಇಂಟರ್ ನ್ಯಾಷನಲ್ ಪ್ರಕಾರ, ಭಾರತವು ವಿಶ್ವದ 4 ನೇ ಅತಿದೊಡ್ಡ ಅಕ್ರಮ ಸಿಗರೇಟ್ ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ.
ಪುಸ್ತಕದಲ್ಲಿನ ಅಂಕಿ ಅಂಶ ಪಕ್ಕಕ್ಕಿಟ್ಟರೆ ವಾಸ್ತವವಾಗಿ, ವಿಶ್ವ ಕಸ್ಟಮ್ಸ್ ಸಂಸ್ಥೆಯು ಡಿಸೆಂಬರ್ 2016 ರಲ್ಲಿ ಪ್ರಕಟವಾದ ತನ್ನ ಅಕ್ರಮ ವ್ಯಾಪಾರ ವರದಿಯಲ್ಲಿ, ಭಾರತದಲ್ಲಿ ಹೆಚ್ಚುತ್ತಿರುವ ಕಳ್ಳಸಾಗಣೆ ಸಿಗರೇಟ್ ವ್ಯಾಪಾರವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಸಿದೆ. ಭಾರತೀಯ ಕಸ್ಟಮ್ಸ್ ಸಂಸ್ಥೆ ಮಾಡಿದ ಗುಪ್ತಚರ ಮಾಹಿತಿ ಮತ್ತು ರೋಗಗ್ರಸ್ತವಾಗುವಿಕೆಗಳು ಸರಕು, ಸಾಮಾನು ಸರಂಜಾಮು ಮತ್ತು ಎಕ್ಸ್‍ಪ್ರೆಸ್ ಸಾಗಣೆಗಳಲ್ಲಿ ಸಿಗರೇಟ್ ಕಳ್ಳಸಾಗಣೆ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಸಿಗರೇಟ್‍ಗಳ ಮೇಲಿನ ಅತಿ ಹೆಚ್ಚು ಮತ್ತು ನಿರಂತರವಾಗಿ ಹೆಚ್ಚುತ್ತಿರುವ ತೆರಿಗೆ ದರಗಳು ಅಂತರರಾಷ್ಟ್ರೀಯ ಕಳ್ಳಸಾಗಣೆ ಮತ್ತು ದೇಶೀಯ ತೆರಿಗೆ ತಪ್ಪಿಸಿದ ಸಿಗರೇಟ್‍ಗಳೆರಡರಲ್ಲೂ ಅಕ್ರಮ ವ್ಯಾಪಾರದಿಂದ ತೆರಿಗೆ ವಂಚನೆಗೆ ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.
ಇದಲ್ಲದೆ ಪಿಕ್ಟೋರಿಯಲ್ ಹೆಲ್ತ್ ವಾರ್ನಿಂಗ್ಸ್‍ನಂತಹ ನಿಯಮಗಳು ಭಾರತದಲ್ಲಿ ಅಕ್ರಮ ಸಿಗರೇಟ್ ವ್ಯಾಪಾರಕ್ಕೆ ಮತ್ತಷ್ಟು ಪ್ರೋತ್ಸಾಹವನ್ನು ನೀಡುತ್ತಿವೆ, ಏಕೆಂದರೆ ಅಕ್ರಮ ಸಿಗರೇಟ್‍ಗಳು ಸರ್ಕಾರದ ತಂಬಾಕು ನಿಯಂತ್ರಣ ಮಂಡಳಿಯ ನಿಯಮಗಳನ್ನು ಅನುಸರಿಸುತ್ತಿಲ್ಲವಾದ್ದರಿಂದ ವ್ಯಾಪಾರಕ್ಕೆ ಹೆಚ್ಚಿನÀ ಪ್ರೋತ್ಸಾಹ ದೊರೆಯುತ್ತಿದೆ.
ಹೆಸರಾಂತ ಜಾಗತಿಕ ಸಂಶೋಧನಾ ಸಂಸ್ಥೆಯಾದ ಯೂರೋಮೊನಿಟರ್ ಇಂಟರ್ ನ್ಯಾಷನಲ್ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರಾಟದಲ್ಲಿ 2005 ರಿಂದ ಈಗಿನವರೆಗೆ ಇದು ದ್ವಿಗುಣವಾಗಿದೆ. ಇನ್ನು ಇದು ಭಾರತವನ್ನು ವಿಶ್ವದ 4 ನೇ ಅತಿದೊಡ್ಡ ಅಕ್ರಮ ಸಿಗರೇಟ್ ಮಾರುಕಟ್ಟೆಯನ್ನಾಗಿ ಮಾಡಿದೆ ಮತ್ತು ಅಂತರರಾಷ್ಟ್ರೀಯ ಸಿಗರೇಟ್ ಕಳ್ಳ ಸಾಗಾಣಿಕೆದಾರರಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಅಕ್ರಮ ಸಿಗರೇಟ್ ಕೃತ್ಯಕ್ಕೆ ಕೆಲವು ಕಾರಣಾಂಶಗಳು:
ಸಿಗರೇಟ್‍ಗಳ ಮೇಲಿನ ವಿಪರೀತವಾದ ತೆರಿಗೆ ಮತ್ತು ತಂಬಾಕು ನಿಯಂತ್ರಣ ಪ್ರಾಧಿಕಾರ ಕಡ್ಡಾಯಗೊಳಿಸಿರುವ ತಂಬಾಕು ಜಾಗೃತಿ ಚಿತ್ರಗಳಿಂದಾಗಿ 85% ಬೇಡಿಕೆ ಕುಸಿಯಲು ಕಾರಣವಾಗಿದೆಯಲ್ಲದೇ ಕಾನೂನು ಬಾಹಿರ ಸಿಗರೇಟ್ ವ್ಯಾಪಾರ ಹೆಚ್ಚಳಕ್ಕೂ ಕಾರಣವಾಗಿದೆ.
ಬೇಡಿಕೆಯೇನು ಕಡಿಮೆಯಾಗುವುದಿಲ್ಲಾ ಆದರೆ ಕೇವಲ ಬೇಡಿಕೆಯ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ ಅಂದರೆ ಇಷ್ಟು ದಿನ ತೆರಿಗೆ ಪಾವತಿಸಿದ ಮತ್ತು ಕಾನೂನು ಬದ್ದವಾಗಿ ಮಾರಾಟ ಮಾಡಿದ ಸಿಗರೇಟ್‍ಗಳನ್ನು ಕೇಳುತ್ತಿದ್ದವರು ಈಗ ರಾಗ ಬದಲಿಸಿ ತೆರಿಗೆ ಪಾವತಿಸದ ಮತ್ತು ನಿಯಂತ್ರಣ-ಅನುಸರಣೆಗೆ ಬಾರದ ಉತ್ಪನ್ನಗಳಿಗೆ ಮಣೆ ಹಾಕುತ್ತಾರೆ.
ಐಎಂಆರ್‍ಬಿ (ಇಂಡಿಯನ್ ಮಾರ್ಕೆಟ್ ರಿಸರ್ಚ್ ಬ್ಯೂರೋ) ನಡೆಸಿದ ಅಧ್ಯಯನದ ಪ್ರಕಾರ, ವಿಶೇಷವಾಗಿ 2012-13 ಮತ್ತು 2017-18ರ ನಡುವೆ ಸಿಗರೇಟ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಿರುವುದರ ಪ್ರಭಾವ ಸಕಾರಾತ್ಮಕವಾಗಿ ಬೀರುವುದಕ್ಕಿಂತ ನಕಾರಾತ್ಮಕವಾಗಿ ಬಂದಿದ್ದೆ ಅಧಿಕವಾಗಿದೆ ಎಂದಿದೆ.
ಜುಲೈ 2017 ರಲ್ಲಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಉದ್ಯಮಕ್ಕೆ ಅನುಕೂಲ ಮಾಡಿಕೊಡಲಿದೆ ಎಂದೇ ಭಾವಿಸಲಾಗಿತ್ತಾದರೂ ಕಾಲ ಕಳೆದಂತೆ ಅದರ ಕರಾಳ ಛಾಯೆ ಉದ್ಯಮದ ಮೇಲೆ ಬೀಳತೊಡಗಿತು, ಇದರಿಂದ ದೇಶದಲ್ಲಿ ಮೊದಲಿದ್ದ ವ್ಯಾಟ್ ತೆರಿಗೆ ಇದ್ದಾಗ ಚಲಾವಣೆಯಲ್ಲಿದ್ದ ಅಕ್ರಮ ಸಿಗರೇಟ್‍ಗಳಿಗಿಂತ ಜಿಎಸ್‍ಟಿ ಬಂದ ನಂತರ ಇದು ನಿರಂಕುಶವಾಗಿ ಬೆಳೆಯಿತಲ್ಲದೆ ಇದಕ್ಕೆ ಕಡಿವಾಣವಿಲ್ಲದಂತಾಗಿದೆ. ಫ್ರಿ ಜಿಎಸ್‍ಟಿ ತೆರಿಗೆ ದರಗಳು ಸರಾಸರಿ 13 ರಷ್ಟು ಇವೆ. ಸೆಸ್ ಹೆಚ್ಚಳದ ನಂತರದಲ್ಲಿ ಸಿಗರೇಟ್ ಮೇಲಿನ ತೆರಿಗೆಯೂ ಹೆಚ್ಚಾಗಿದೆ. ಈ ತೆರಿಗೆಯನ್ನು ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅಕ್ರಮ ಸಿಗರೇಟ್ ಗಳ ಚಲಾವಣೆ ಮೊದಲಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಸಮಿತಿ ವರದಿ ನೀಡಿದೆ.
ಅಕ್ರಮ ಸಿಗರೇಟ್ ವ್ಯಾಪಾರದಲ್ಲಿ ಹಲವಾರು ಗಂಭೀರ ಪರಿಣಾಮಗಳು ಉಂಟಾಗಲಿದ್ದು, ಇದರಿಂದ ರಾಷ್ಟ್ರೀಯ ಬೊಕ್ಕಸಕ್ಕೆ 13,000 ಕೋಟಿ ರೂ ನಷ್ಟವಾಗಲಿದೆ. ಕಾನೂನುಬಾಹಿರ ಚಲಾವಣೆ ನಿಯಂತ್ರಿಸುವ ಸಂಘಟಿತ ಕ್ರಿಮಿನಲ್ ಸಿಂಡಿಕೇಟ್‍ಗಳ ಹರಡುವಿಕೆಗೆ ಸಹಾಯ ಮಾಡಿದಂತಾಗುತ್ತದೆ. ಸರ್ಕಾರದ ತಂಬಾಕು ನಿಯಂತ್ರಣ ನೀತಿಗಳನ್ನು ಹಾಳು ಮಾಡುವುದಲ್ಲದೆ, ತಂಬಾಕು ನಿಯಮಾವಳಿಗಳಿಗೆ ಏಳ್ಳು ನೀರು ಬಿಡುತ್ತದೆ, ಅಲ್ಲದೆ ದೇಶೀಯವಾಗಿ ಬೆಳೆದ ತಂಬಾಕಿಗೆ ಬೇಡಿಕೆ ಕಡಿಮೆಯಾಗುತ್ತದೆ ಏಕೆಂದರೆ ಅವರಿಗೆ ಬೇರೆ ಮೂಲಗಳಿಂದ ಸಿಗುವ ತಂಬಾಕು ಕಡಿಮೆ ಬೆಲೆಯದ್ದಾಗಿರುತ್ತದೆ ಮತ್ತು ಲಾಭದಾಯಕವಾಗಿದೆ ಎನ್ನಲಾಗಿದೆ. ಹೀಗೆ ಅಡ್ಡ ಪರಿಣಾಮಗಳನ್ನು ತಂದೊಡ್ಡುವ ಸರ್ಕಾರದ ಯೋಜನೆಗಳೇ ದೇಶದ ಸ್ಥಿತಿಗತಿಗಳನ್ನು ಕಲುಷಿತಗೊಳಿಸುತ್ತಿದ್ದು, ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕಾದ ಸರ್ಕಾರ ಅವನತಿಗೆ ಎಳೆದೊಯ್ಯುತ್ತಿರುವುದು ಇದೆಂಥಾ ವಿಪರ್ಯಾಸ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ