ದೆಹಲಿ ಸಿಎಎ ವಿರೋಧಿ ಹಿಂಸಾಚಾರ : ರಸ್ತೆಗಳಿಗೆ ನಾಕಾಬಂಧಿ ಹೇರಿಕೆ.!

ನವದೆಹಲಿ:

     ಪೌರತ್ವ ತಿದ್ದು ಕಾಯ್ದೆ ವಿಚಾರವಾಗಿ ಪರ-ವಿರೋಧಿ ಬಣಗಳ ನಡುವಿನ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ದೆಹಲಿ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ನಾಕಾಬಂದಿ ಹೇರುವಂತೆ ಸಿಎಂ ಕೇಜ್ರಿವಾಲ್ ಆದೇಶ ನೀಡಿದ್ದಾರೆ.

     ಈಶಾನ್ಯ ದೆಹಲಿಯಲ್ಲಿ ಶಾಂತಿ ಮರುಸ್ಥಾಪನೆಗಾಗಿ ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಪ್ರಕಟಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

     ಪ್ರಮುಖವಾಗಿ ದೆಹಲಿ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ನಾಕಾಬಂದಿ ಹೇರುವಂತೆ ಆದೇಶಿಸಲಾಗಿದ್ದು, ಮಂದಿರ, ಮಸೀದಿ ಮೈಕ್‌ಗಳಿಂದ ಶಾಂತಿ ಸಂದೇಶ ಬಿತ್ತರಕ್ಕೆ ಆದೇಶ ನೀಡಲಾಗಿದೆ. ಅಂತೆಯೇ ದೆಹಲಿಯಲ್ಲಿ ಪೊಲೀಸರ ಸಂಖ್ಯೆ ತೀರಾ ಕಡಿಮೆ ಇದ್ದು, ಇದೇ ಕಾರಣಕ್ಕೆ ಪೊಲೀಸರು ಪಥ ಸಂಚಲನ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೆ ಪಥ ಸಂಚಲನದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಪಾಲ್ಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ಮತ್ತು ಹಿಂಸಾಚಾರ ಪೀಡಿತ ಬೀದಿಗಳಲ್ಲಿ ಸ್ಥಳೀಯ ಶಾಸಕರು ಮತ್ತು ಪೊಲೀಸರು ಸಂಚರಿಸಿ ಶಾಂತಿ ಕಾಪಾಡಲು ಜನರಲ್ಲಿ ಮನವಿ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.

     ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ಯಾರಾಮಿಲಿಟರಿ ಪಡೆಯ 35 ಕಂಪನಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೆ ಸ್ಪೆಷಲ್ ಸೆಲ್, ಕ್ರೈಮ್ ಬ್ರಾಂಚ್, ಎಕನಾಮಿಕ್ ಅಫೆನ್ಸ್ ವಿಂಗ್, ಸ್ಥಳೀಯ ಪೊಲೀಸರು ಕೂಡ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

      ಈ ಕುರಿತಂತೆ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಕೇಜ್ರಿವಾಲ್ ಅವರು, ‘ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. ಮೇಲಿನವರ ಆಜ್ಞೆಯನ್ನು ಮಾತ್ರ ಪಾಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಆದರೆ ಕೇಂದ್ರ ಗೃಹ ಇಲಾಖೆ ಈಗ ಬಿಸಿ ಇದ್ದು, ಹಿಂಸಾಚಾರ ನಿಯಂತ್ರಣಕ್ಕೆ ಇದು ದೊಡ್ಡ ತೊಡಕಾಗಿದೆ ಎಂದು ಹೇಳಿದ್ದಾರೆ.

     ಅಂತೆಯೇ ‘ಇತರ ರಾಜ್ಯಗಳಿಂದ ದೆಹಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದರಿಂದ ಹಿಂಸಾಚಾರ ಇನ್ನಷ್ಟು ಹೆಚ್ಚಬಹುದು. ಹೀಗಾಗಿ ದೆಹಲಿಯ ಗಡಿಗಳನ್ನು ಮುಚ್ಚಲಾಗುವುದು. ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗುವುದು. ದೇಗುಲಗಳು ಮತ್ತು ಮಸೀದಿಗಳ ಮೈಕ್‌ಗಳಿಂದ ಶಾಂತಿಪಾಲನೆಗೆ ಸಂದೇಶ ಬಿತ್ತರಿಸಲಾಗುವುದು. ಹಿಂಸಾಚಾರ ಪೀಡಿತ ಬೀದಿಗಳಲ್ಲಿ ಸ್ಥಳೀಯ ಶಾಸಕರು ಮತ್ತು ಪೊಲೀಸರು ಸಂಚರಿಸಿ ಶಾಂತಿ ಕಾಪಾಡಲು ಜನರಲ್ಲಿ ಮನವಿ ಮಾಡಲಿದ್ದಾರೆ. ಬೆಂಕಿ ಅನಾಹುತ ಸಂಭವಿಸಿದ ಕಡೆಗೆ ಅಗ್ನಿಶಾಮಕ ವಾಹನಗಳನ್ನು ತುರ್ತಾಗಿ ಕಳಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link