ಬಳ್ಳಾರಿ/ಬೆಂಗಳೂರು:
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಆಗದಂತೆ ವರ್ಗಾವಣೆ ನೀತಿಗೆ ತಿದ್ದುಪಡಿ ತಂದು, ಎಲ್ಲ ಕಾಲೇಜುಗಳಲ್ಲಿ ಅಧ್ಯಾಪಕರು ಇರುವಂತೆ ನೋಡಿಕೊಳ್ಳಲಾಗುವುದು,”ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಬುಧವಾರ ಭೇಟಿ ನೀಡಿ, ಅಲ್ಲಿ ಹೊಸದಾಗಿ ನಿರ್ಮಿಸಿರುವ ಗ್ರಂಥಾಲಯ, ಸಾಮಾಜಿಕ ವಿಜ್ಞಾನ, ಸಾಮಾಜಿಕ ಕಾರ್ಯ ಹಾಗೂ ಮಹಿಳಾ ಅಧ್ಯಯನದ ಕಟ್ಟಡ ಉದ್ಘಾಟಿಸಿ ಸಚಿವರು ಮಾತನಾಡಿದರು.
“ಅಧ್ಯಾಪಕರು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆ ಆಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ಬಗೆಹರಿಸುವ ಕೆಲಸ ಆಗುತ್ತಿದೆ. ವರ್ಗಾವಣೆ ನೀತಿಗೆ ತಿದ್ದುಪಡಿ ತಂದು ಮುಂದಿನ ಮಾರ್ಚ್ನಲ್ಲೇ ಅನುಮೋದನೆ ಪಡೆಯಲಾಗುವುದು. ಇದರಿಂದ ಎಲ್ಲ ಕಾಲೇಜುಗಳಿಗೆ ಅಧ್ಯಾಪಕರ ನಿಯೋಜನೆ ಸರಿಯಾದ ರೀತಿಯಲ್ಲಿ ಆಗಲಿದೆ,”ಎಂದು ಅವರು ತಿಳಿಸಿದರು.
“ಹೊಸ ಶಿಕ್ಷಣ ನೀತಿ ಪ್ರಕಾರ, ಪ್ರತಿ ಕಾಲೇಜು ಸ್ವಾಯತ್ತವಾಗಬೇಕು. ಅದಕ್ಕಾಗಿ ಕಾಲೇಜಿನಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ಜತೆಗೆ ಹೊಸ ಮಾನದಂಡಗಳ ಅನ್ವಯ ಸುಧಾರಣೆಗಳನ್ನು ತರಬೇಕು. ಶಿಕ್ಷಣದ ಗುಣಮಟ್ಟ ಸುಧಾರಿಸಿದಾಗ ಮಾತ್ರ ಉಳಿದೆಲ್ಲ ಕ್ಷೇತ್ರಗಳಲ್ಲಿ ಸುಧಾರಣೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ತರಬೇತಿ ಹಾಗೂ ತರಬೇತು ದಾರರಿಗೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವವಿದ್ಯಾಲಯಗಳ ಆಡಳಿತ ಸರಿ ಆಗಬೇಕು, ಇಲ್ಲದಿದ್ದರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗದು. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಕಲ್ಯಾಣ ಕರ್ನಾಟಕದ ಭಾಗದ ಶೈಕ್ಷಣಿಕ ಬೇಡಿಕೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲು ಯಡಿಯೂರಪ್ಪ ನೇತೃತ್ವದ ಸರ್ಕಾರ ಬದ್ಧ,”ಎಂದು ಅವರು ಭರವಸೆ ನೀಡಿದರು.
ಮಾಂಟೆಸರಿ ಮಾದರಿಯ ಅಂಗನವಾಡಿ
“3-6 ವರ್ಷದ ಅವಧಿಯಲ್ಲಿ ಮಕ್ಕಳ ಮೆದುಳಿನ ಬೆಳವಣಿಗೆ ಆಗುವುದು, ಆಗ ಅವರಿಗೆ 10-15 ಭಾಷೆ ಕಲಿಯುವ ಸಾಮರ್ಥ್ಯ ಇರುತ್ತದೆ. ಹಾಗಾಗಿ ನಮ್ಮ ಅಂಗನವಾಡಿ ಕೇಂದ್ರಗಳು ಮಾಂಟೆಸರಿ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು, ಇದರಿಂದ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ದೊರೆಯುವುದು. ಅಂಗನವಾಡಿಗಳು ಮಾಂಟೆಸರಿ ಮಾದರಿಯಲ್ಲಿ ಕಾರ್ಯನಿರ್ವಹಿಸಿ ದಾಗ ಮುಂದಿನ 10-15 ವರ್ಷಗಳಲ್ಲಿ ಆಗುವ ಬದಲಾವಣೆಗೆ ಮಕ್ಕಳು ಒಗ್ಗಿಕೊಳ್ಳಬಹುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನಿಧಿ ಬಳಸಿಕೊಂಡು ಅಂಗನವಾಡಿಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ,”ಎಂದರು.
ಯೂನಿಫೈಡ್ ಸಿಸ್ಟೆಮ್
“ರಾಜ್ಯದ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆಗೆ ಏಕೀಕೃತ ವ್ಯವಸ್ಥೆ (ಯೂನಿಫೈಡ್ ಯೂನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟೆಮ್) ರೂಪಿಸಲಾಗುವುದು. ಇದರಲ್ಲೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ಆನ್ಲೈನ್ ವೇದಿಕೆಯೂ ಇರಲಿದೆ. ಇ-ಆಡಳಿತದ ಮೂಲಕ ಈ ವ್ಯವಸ್ಥೆ ಜಾರಿ ತಂದು ಮೌಲ್ಯಮಾಪನ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸದ್ಭಳಕೆ ಆಗಬೇಕು,”ಎಂದು ಅವರು ಹೇಳಿದರು.
ಯುವ ಸಬಲೀಕರಣ ಕೇಂದ್ರ
“ನಮ್ಮ ಸರ್ಕಾರ ಆರಂಭಿಸಿರುವ ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರತಿ ಶಾಲೆಯಲ್ಲೂ ಒಬ್ಬ ಸಮಾಲೋಚಕರನ್ನು ನೇಮಿಸಿಕೊಳ್ಳಲಾಗುವುದು. ಪ್ರೌಢಶಾಲೆ ಮಟ್ಟದಲ್ಲೇ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು. ಇಂಟರ್ನ್ಶಿಪ್, ಅಪ್ರೆಂಟಿಸ್ಶಿಪ್, ಪ್ರಾಜೆಕ್ಟ್ ಹಾಗೂ ಮುಂದಿನ ವೃತ್ತಿ ಜೀವನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಗುತ್ತಿದೆ. ಪದವಿ ಮುಗಿಸಿ ಕೆಲಸ ಹುಡುಕುವ ಬದಲು, ವಿದ್ಯಾರ್ಥಿ ದೆಸೆಯಲ್ಲಿ ಮುಂದಿನ ಉದ್ಯೋಗಕ್ಕೆ ಅಗತ್ಯ ಕೌಶಲ್ಯ ಕಲಿಯುಲು ಅವಕಾಶ ಕಲ್ಪಿಸಲಾಗುವುದು. ಜತೆಗೆ, ಕಾಲೇಜುಗಳಲ್ಲಿ ಈಗಾಗಲೇ ‘ಪ್ಲೇಸ್ಮೆಂಟ್ ಸೆಲ್’ಗಳಿದ್ದರೆ ಅವುಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು,”ಎಂದು ಅವರು ವಿವರಿಸಿದರು.
ಇ-ಪೋರ್ಟಲ್
“ದೇಶ ಕಟ್ಟಬೇಕು ಅಂದರೆ ಎಲ್ಲ ವೃತ್ತಿಯಲ್ಲೂ ನಾವು ಇರಬೇಕು. ಎಲೆಲ್ಲಿ ಅವಕಾಶ ಇದೆ ಎನ್ನುವುದರ ಮಾಹಿತಿ ಇರಬೇಕು. ನಿರ್ಣಯ ತೆಗೆದುಕೊಳ್ಳುವುದು ನಿಮ್ಮ ಕೆಲಸವಾದರೆ ಅದರ ಬಗ್ಗೆ ಮಾಹಿತಿ ನೀಡುವುದು ಕರ್ತವ್ಯ ನಮ್ಮದು. ಈ ನಿಟ್ಟಿನಲ್ಲಿ ಉದ್ದಿಮೆಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶಕರ ಪಟ್ಟಿ ಇರುವ ಆನ್ಲೈನ್ ವೇದಿಕೆ ಸೃಷ್ಟಿಸಲಾಗುವುದು. ತುಂಬಾ ಜನಕ್ಕೆ ಎಲ್ಲೆಲ್ಲಿ ಇಂಟರ್ನ್ಶಿಪ್, ಪ್ರಾಜೆಕ್ಟ್ ಮಾಡಲು ಅವಕಾಶ ಇದೆ, ಉದ್ಯೋಗಾವಕಾಶಗಳು ಎಲ್ಲಿವೆ ಎಂಬ ಮಾಹಿತಿ ಇರುವುದಿಲ್ಲ. ಹಿಂದೆ ಎಂಪ್ಲಾಯ್ಮೆಂಟ್ ಎಕ್ಸ್ ಚೇಂಜ್ ಅಂತ ಆ ಮೂಲಕ ಉದ್ಯೋಗ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈಗ ಇ-ಪೋರ್ಟಲ್ ಈ ಎಲ್ಲ ಮಾಹಿತಿಯನ್ನು ಒದಗಿಸಲಿದೆ,”ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ