ಚಿತ್ರದುರ್ಗ :
ಬೆಂಬಲ ಬೆಲೆ ಯೋಜನೆಯಡಿ ಕಡಲೆ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ನಗರದ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ಗುರುವಾರ ಚಾಲನೆ ನೀಡಿದರು.
ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎನ್ನುವ ರೈತರ ಬೇಡಿಕೆಗೆ ಇದೀಗ ಮನ್ನಣೆ ದೊರೆತಿದೆ. ಚಿತ್ರದುರ್ಗ ಸೇರಿದಂತೆ ಜಿಲ್ಲೆಯಲ್ಲಿ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು 10 ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಗುರುವಾರ ರೈತ ಭವನದಲ್ಲಿ ಕಡಲೆ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು.
ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಈ ಬಾರಿ ಮುಂಗಾರು ವಿಫಲಗೊಂಡಿತ್ತು, ಆದರೆ ಹಿಂಗಾರು ರೈತರ ಕೈ ಹಿಡಿದ ಪರಿಣಾಮ, ಜಿಲ್ಲೆಯಲ್ಲಿ ರಾಗಿ ಹಾಗೂ ಕಡಲೆ ಬೆಳೆ ಉತ್ತಮವಾಗಿ ಬಂದಿದೆ. ಕಡಲೆ ಬೆಳೆಗೆ ರೂ. 4875 ರೂ. ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದೆ ಎಂದರು
ಕಡಲೆ ಬೆಳೆಯನ್ನು ಪ್ರತಿ ರೈತರಿಗೆ 1 ಎಕರೆಗೆ 3 ಕ್ವಿಂಟಾಲ್‍ನಂತೆ 3 ಎಕರೆಗೆ ಗರಿಷ್ಠ 10 ಕ್ವಿಂ. ಮಾತ್ರ ಖರೀದಿಸಲು ಸರ್ಕಾರ ಆದೇಶಿಸಿದ್ದು, ಗರಿಷ್ಠ ಮಿತಿಯನ್ನು 20 ಕ್ವಿಂ. ಗೆ ಹೆಚ್ಚಿಸುವಂತೆ ಈಗಾಗಲೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಳೆದ ವಾರ ಒಂದೇ ದಿನ 15 ಸಾವಿರ ಕ್ವಿಂ. ಕಡಲೆ ಎಪಿಎಂಸಿ ಯಲ್ಲಿ ಆವಕವಾಗಿತ್ತು. ಖರೀದಿಯಾದ ಕಡಲೆ ಛತ್ತೀಸ್‍ಗಡಕ್ಕೆ ಹೋಗಿದೆ ಎಂಬ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ರೈತರು ಕನಿಷ್ಟ 40 ರಿಂದ 50 ಚೀಲ ಕಡಲೆ ಬೆಳೆದಿದ್ದಾರೆ. ಹೀಗಾಗಿ ಖರೀದಿ ಗರಿಷ್ಟ ಮಿತಿ ಹೆಚ್ಚಿಸುವಂತೆ ತಾವೂ ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.
ರಾಗಿ ನೊಂದಣಿ ಮಾ. 15 ಕ್ಕೆ ವಿಸ್ತರಣೆ :
ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೆ ಹೊಸದುರ್ಗ ಮತ್ತು ಚಿಕ್ಕಜಾಜೂರಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿತ್ತು. ಇದೀಗ ರೈತರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಚಿತ್ರದುರ್ಗ ಎಪಿಎಂಸಿಯಲ್ಲಿಯೂ ಹೆಚ್ಚುವರಿಯಾಗಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.
ರಾಗಿಗೆ ಪ್ರತಿ ಕ್ವಿಂ. ಗೆ ರೂ. 3150 ನಿಗದಿಪಡಿಸಲಾಗಿದೆ. ರಾಗಿ ಮಾರಾಟಕ್ಕೆ ನೊಂದಣಿಗೆ ಫೆ. 29 ಕೊನೆಯ ದಿನವಾಗಿ ನಿಗದಿಪಡಿಸಲಾಗಿತ್ತು. ಇದೀಗ ಸರ್ಕಾರ ಇದನ್ನು ಮಾ. 15 ರವರೆಗೂ ವಿಸ್ತರಿಸಿದೆ. ರಾಗಿ ಮಾರಾಟಕ್ಕೆ ಮಾ. 31 ಕೊನೆಯ ದಿನವಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ತೊಗರಿ ಬೆಳೆಯೂ ಉತ್ತಮವಾಗಿದ್ದು, ಮೆಕ್ಕೆಜೋಳ ಕಳೆದ ವರ್ಷ ರೂ. 2300 ವರೆಗೂ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. ಇದೀಗ ಮಾರುಕಟ್ಟೆಯಲ್ಲಿ 1600 ರಿಂದ 1700 ರೂ. ಬೆಲೆ ಇರುವುದಾಗಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಹಾಗೂ ಮೆಕ್ಕೆಜೋಳ ಬೆಳೆಯನ್ನು ಖರೀದಿಸಲು, ಖರೀದಿ ಕೇಂದ್ರ ಪ್ರಾರಂಭಿಸಲು ಅವಕಾಶ ಮಾಡಿಕೊಡುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಜಿ.ಆರ್. ರಾಜಪ್ಪ ಅವರು ಮಾಹಿತಿ ನೀಡಿ, ಕಡಲೆ ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಚಿತ್ರದುರ್ಗ, ಮಾಡನಾಯಕನಹಳ್ಳಿ, ರಾಮಜೋಗಿಹಳ್ಳಿ, ಐಮಂಗಲ, ಮರಡಿಹಳ್ಳಿ, ಹೊಸದುರ್ಗ ರೋಡ್, ರಾಮಗಿರಿ, ಮೊಳಕಾಲ್ಮುರು (ರಾಂಪುರ ಬ್ರಾಂಚ್), ಚಿಕ್ಕಮಧುರೆ ಹಾಗೂ ಬಬ್ಬೂರಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ರೈತರು ರೈತ ಸಂಪರ್ಕ ಕೇಂದ್ರದಿಂದ ಫ್ರೂಟ್ಸ್ ಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ತೆಗೆದುಕೊಂಡು ಆಯಾ ಸಹಕಾರ ಸಂಘಕ್ಕೆ ಹೋಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಎಸ್.ಆರ್. ಗಿರೀಶ್ ಅವರು ಮಾತನಾಡಿ, ರೈತರು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಬಯಸಿದಲ್ಲಿ, ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಫ್ರೂಟ್ಸ್ ದತ್ತಾಂಶದಿಂದ ಪಡೆದ ನೊಂದಣಿ ಸಂಖ್ಯೆಯಿಂದ ಖರೀದಿ ಕೇಂದ್ರದಲ್ಲಿ ಬೆಳೆ ಮಾರಾಟಕ್ಕೆ ನೊಂದಣಿ ಮಾಡಿಕೊಳ್ಳಬೇಕು. ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ನೀಡಬೇಕು. ಸ್ವಚ್ಛ ಹಾಗೂ ಒಣಗಿದ ಬೆಳೆ ತರಬೇಕು. ರೈತರು ದಾಖಲೆಗಳನ್ನು ಸರಿಯಾಗಿ ನೀಡಬೇಕು. ಈ ಬಾರಿ ಖರೀದಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದರು.
ರೈತ ಮುಖಂಡ ಶಂಕರಪ್ಪ ಮಾತನಾಡಿ, ರೈತರು ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದರ ಕುಸಿತವಾದಲ್ಲಿ, ಸರ್ಕಾರ ಮದ್ಯ ಪ್ರವೇಶಿಸಿ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೂಲಕ ರೈತರ ಹಿತ ಕಾಯಬೇಕು. ಇದಕ್ಕಾಗಿ ಸದ್ಯದಲ್ಲಿಯೇ ಮಂಡನೆಯಾಗಲಿರುವ ಬಜೆಟ್‍ನಲ್ಲಿ 10 ಸಾವಿರ ಕೋಟಿ ರೂ. ಗಳನ್ನು ಆವರ್ತ ನಿಧಿಯಾಗಿ ಕಾಯ್ದಿರಿಸಬೇಕು. ಕಳೆದ ಬಾರಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ ರೈತರಿಗೆ 5-6 ತಿಂಗಳಾದರೂ ಹಣ ಬಂದಿರಲಿಲ್ಲ. ಈ ಬಾರಿ ಆ ರೀತಿ ಆಗಬಾರದು. ಬೆಳೆಗಳ ಗ್ರೇಡ್ ಹಾಗೂ ತೂಕದಲ್ಲಿ ರೈತರಿಗೆ ಅನ್ಯಾಯವಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಶಶಿಕುಮಾರ್, ಜಂಟಿಕೃಷಿ ನಿರ್ದೇಶಕ ಸದಾಶಿವ, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂಧನ್, ಎಪಿಎಂಸಿ ಜಂಟಿನಿರ್ದೇಶಕ ಮಹೇಶ್ ಎಪಿಎಂಸಿ ಉಪಾಧ್ಯಕ್ಷ ಪಂಪಣ್ಣ, ಸೇರಿದಂತೆ ರೈತ ಮುಖಂಡರುಗಳಾದ ಸುರೇಶ್‍ಬಾಬು, ಬಸವರೆಡ್ಡಿ, ತಿಮ್ಮಣ್ಣ, ಈಶ್ವರಪ್ಪ, ಸಿದ್ದಲಿಂಗಪ್ಪ, ಶರಣಪ್ಪ, ಮಹೇಶ್ವರಯ್ಯ, ನಾಗರಾಜಪ್ಪ, ಶಿವಪ್ರಕಾಶ್ ಸೇರಿದಂತೆ ಹಲವರು ರೈತ ಮುಖಂಡರು, ರೈತರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ