ಹುಳಿಯಾರು
ಪತ್ರಿಕೆಯ ವರದಿಯ ಪರಿಣಾಮ ಹುಳಿಯಾರಿನ ಡಿಸಿಸಿ ಬ್ಯಾಂಕ್ ಹಿಂಭಾಗ ಸ್ಥಗಿತಗೊಂಡಿದ್ದ ಹರಿಜನ-ಗಿರಿಜನ ಯೋಜನೆಯ ಚರಂಡಿ ಕಾಮಗಾರಿಯು ಪುನರ್ ಆರಂಭವಾಗಿದ್ದು ಬಿರುಸಿಯಿಂದ ಕಾಮಗಾರಿ ನಡೆಯುತ್ತಿದೆ.
ಡಿಸಿಸಿ ಬ್ಯಾಂಕ್‍ನಿಂದ ಬೀರದೇವರ ಕಟ್ಟೆಯ ಕಡೆಗೆ ಹೋಗುವ ರಸ್ತೆ ತೀರ ಹದಗೆಟ್ಟು ಓಡಾಡಲು ಅಸಾಧ್ಯ ಎನ್ನುವಂತ್ತಾಗಿತ್ತು. ಅಲ್ಲದೆ ಇಲ್ಲಿನ ಮನೆಗಳ ಬಚ್ಚಲು ನೀರು ರಸ್ತೆಗೆ ಬಿಡುತ್ತಿದ್ದರಿಂದ ಸೊಳ್ಳೆಗಳ ಆಶ್ರಯ ತಾಣವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿತ್ತು.
ಈ ವಿಚಾರ ತಿಳಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಎಸ್‍ಸಿಪಿಟಿಎಸ್‍ಪಿ ಯೋಜನೆಗೆ ರಸ್ತೆಯನ್ನು ಸೇರಿಸಿ ಕಳೆದ 15 ದಿನಗಳ ಹಿಂದಷ್ಟೆ ಕಾಮಗಾರಿಗೆ ಚಾಲನೆ ನೀಡಿದರು. ಆರಂಭದಲ್ಲಿ ಒಂದು ಭಾಗದ ಚರಂಡಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು ಇದಕಿದ್ದ ಹಾಗೆ ಸ್ಥಗಿತಗೊಳಿಸಿದವರು 1 ವಾರವಾದರೂ ಆರಂಭ ಮಾಡಿರಲಿಲ್ಲ.
ಪರಿಣಾಮ ಮೇಲ್ಭಾಗದ ಮನೆಯ ಕೊಳಚೆ ನೀರು ಹೊಸ ಚರಂಡಿ ಮೂಲಕ ಹರಿದು ಬಂದು ಸ್ಥಗಿತವಾಗಿರುವ ಚರಂಡಿಯ ಮನೆಯ ಮುಂದೆ ನಿಲ್ಲುತ್ತಿದೆ. ಪರಿಣಾಮ ಇಲ್ಲಿನ ನಿವಾಸಿಗಳಿಗೆ ದುರ್ನಾತ ಬೀರುತ್ತಿದ್ದು ಮನೆಯಲ್ಲಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಇನ್ನೊಂದು ಭಾಗದಲ್ಲಿ ಚರಂಡಿಗೆ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದರಿಂದ ಮಕ್ಕಳು, ವೃದ್ಧರು ಓಡಾಡಲು ಭಯಪಡುವಂತ್ತಾಗಿತ್ತು.
ಪರಿಣಾಮ ಇಲ್ಲಿನ ನಿವಾಸಿ ಡೈವರ್ ವರುಣ್ ಅವರು ಕಾಮಗಾರಿ ಪುನಃ ಆರಂಭಿಸಿ ಕೊಳಚೆ ನೀರಿನ ದುರ್ನಾತ ತಪ್ಪಿಸುವ ಜೊತೆಗೆ ಸುಗಮ ಸಂಚಾರಕ್ಕೆ ನೆರವಾಗುವಂತೆ ಪತ್ರಿಕೆಯ ಮೂಲಕ ಪಿಡಬ್ಲ್ಯೂಡಿ ಎಂಜಿನಿಯರ್ ಅವರಲ್ಲಿ ಮನವಿ ಮಾಡಿದ್ದರು. ಪತ್ರಿಕೆಯ ವರದಿಯ ಪರಿಣಾಮ ಸ್ಥಗಿತಗೊಂಡಿದ್ದ ಕಾಮಗಾರಿಯು ಪುನಃ ಆರಂಭವಾಗಿದ್ದು ಬಿಸಿಲನ್ನೂ ಲೆಕ್ಕಿಸದೆ ಬರದಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ