ಅಂತರ್ಜಲ ಕುಸಿತ: ಮರಳುಗಾಡಾಗಲಿದೆ ಜಿಲ್ಲೆ

ತುಮಕೂರು:

     ಅಂತರ್ಜಲ ಕುಸಿತದ ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯೂ ಒಂದಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈ ಜಿಲ್ಲೆ ಮರಳುಗಾಡಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

     ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಅಟಲ್ ಭೂಜಲ್ ಯೋಜನೆಯ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂತರ್ಜಲ ಸಂರಕ್ಷಣೆ, ಅಭಿವೃದ್ಧಿ ಮತ್ತು ಬಳಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಎಲ್ಲೇ ಆಗಲಿ ಮರಳು ತೆಗೆಯಲು ಅವಕಾಶ ಕೊಡದಂತೆ ನಿರ್ಬಂಧಿಸಲಾಗಿದೆ. ಅಲ್ಲದೆ, ಅನಗತ್ಯ ನೀರು ಕಡಿಮೆ ಮಾಡಿ ವೈಜ್ಞಾನಿಕ ಬಳಕೆಗೆ ಅರಿವು ಮೂಡಿಸಬೇಕಿದೆ. ಇಂತಹ ಕಾರ್ಯಕ್ರಮಗಳ ಮೂಲಕವೇ ಅಂತರ್ಜಲ ವೃದ್ಧಿಸಲು ಸಾಧ್ಯವಿದೆ ಎಂದರು.

    ಅಂತರ್ಜಲ ವೃದ್ಧಿಯಾಗದೆ ಎಲ್ಲಿಂದಲೋ ನೀರು ತಂದು ಕೆರೆಗಳನ್ನು ತುಂಬಿಸುತ್ತೇನೆ ಎಂದರೆ ಆಗುವುದಿಲ್ಲ. ಬದಲಾಗಿ ಅಂತರ್ಜಲ ವೃದ್ಧಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಕಳೆದ 20 ವರ್ಷಗಳ ಹಿಂದೆ ತೆರೆದ ಬಾವಿಗಳನ್ನು ಕಾಣಬಹುದಾಗಿತ್ತು. ಬೋರ್‍ವೆಲ್‍ಗಳು ಹೆಚ್ಚಾದಂತೆಲ್ಲಾ 1500 ಅಡಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಇದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಈ ಹಿನ್ನೆಲೆಯಲ್ಲಿ ಅತಿಯಾದ ನೀರು ಬಳಕೆಯ ತೋಟ ಮಾಡುವುದನ್ನು ಕಡಿಮೆ ಮಾಡಬೇಕು. ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಯುವ ಕಡೆಗೆ ಗಮನ ಹರಿಸಬೇಕು. ರಾಜ್ಯದ 14 ಜಿಲ್ಲೆಗಳ ಹಲವು ತಾಲ್ಲೂಕುಗಳಲ್ಲಿ ನೀರಿನ ಬಳಕೆ ಅತಿ ಹೆಚ್ಚಾಗಿದೆ ಎಂದರು.

     ಸಂಸದ ಜಿ.ಎಸ್.ಬಸವರಾಜು ಮಾತನಾಡಿ ತಂತ್ರಜ್ಞಾನ ಹೆಚ್ಚಾದಂತೆ ಅಂತರ್ಜಲ ಮಟ್ಟವೂ ಕುಸಿದಿದೆ. ಕೋಲಾರ ಜಿಲ್ಲೆಯಲ್ಲಿ ಮಿತ ನೀರಿನ ಬಳಕೆಯೊಂದಿಗೆ ಅತಿ ಹೆಚ್ಚು ತರಕಾರಿ ಬೆಳೆಯುತ್ತಾರೆ. ಅವರಿಗೆ ನೀರು ಸಿಕ್ಕರೆ ಅರ್ಧ ದೇಶಕ್ಕೆ ತರಕಾರಿ ಬೆಳೆದುಕೊಡುತ್ತಾರೆ. ಅಂತರ್ಜಲ ಮಟ್ಟ ಕುಸಿದಿರುವ ಕಾರಣಕ್ಕೆ ಫ್ಲೋರೈಡ್‍ಯುಕ್ತ ನೀರು ಬರುವಂತಾಗಿದೆ ಎಂದರು.

    ಅಂತರ್ಜಲ ಕುಸಿತದ ರಾಜ್ಯಗಳಲ್ಲಿ ರಾಜಸ್ತಾನದ ನಂತರ ಕರ್ನಾಟಕವೂ ಆ ಪಾಲಿಗೆ ಸೇರಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆ ನೀಗಿಸಲು ಸಮುದ್ರಕ್ಕೆ ಹೋಗುವ 2000 ಟಿಎಂಸಿ ಸಂರಕ್ಷಿಸುವ ಕೆಲಸ ಆಗಬೇಕಿದೆ. ಆ ನೀರನ್ನು ಬಳಸಿಕೊಳ್ಳುವ ಕಡೆಗೆ ಚಿಂತನೆ ನಡೆಸಬೇಕು. ಈ ಬಾರಿ ಉತ್ತಮ ಮಳೆಯಾಗಿ ಹೇಮಾವತಿ ಡ್ಯಾಂನಲ್ಲಿ ಉತ್ತಮ ನೀರಿದೆ. ಆದರೆ ನೀರಿದೆ ಎನ್ನುವ ಕಾರಣಕ್ಕೆ ಯಥೇಚ್ಛವಾಗಿ ಬಳಸಬಾರದು. ನಮ್ಮ ರೈತರಿಗೆ ಈ ಬಗ್ಗೆ ತಿಳವಳಿಕೆ ನೀಡಬೇಕು. ನಮ್ಮ ದೇಶದಲ್ಲಿ ಹೆಚ್ಚು ಸ್ವಾತಂತ್ರ ಇರುವುದರಿಂದ ಕಾನೂನನ್ನು ಉಲ್ಲಂಘಿಸುತ್ತಿದ್ದೇವೆ. ಮುಂದೆ ಕಡಿಮೆ ನೀರು ಖರ್ಚು ಮಾಡುವಂತಹ ಕಾನೂನು ತರಬೇಕಾದ ಪರಿಸ್ಥಿತಿ ಇದೆ ಎಂದರು.

    ಕೇಂದ್ರ ಸರ್ಕಾರ ಹಾಗೂ ನೀತಿ ಆಯೋಗದ ವರದಿ ಪ್ರಕಾರ ರಾಜಸ್ತಾನ ಕರ್ನಾಟಕ ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಈ ಯೋಜನೆ ಸಿಕ್ಕಿದೆ. ಸಮುದ್ರ ಪಾಲಾಗುವ ನೀರನ್ನು ಬಳಸಲು ಅನೇಕ ಅಡಚಣೆಗಳಿವೆ. ಇಸ್ರೇಲ್ ಮಾದರಿಯಲ್ಲಿ ಕೃಷಿ ನಡೆಸಿದರೆ ಮಾತ್ರ ನೀರು ಉಳಿಸಲು ಸಾಧ್ಯ. ಪ್ರಾಥಮಿಕ ಶಿಕ್ಷಣದಿಂದಲೇ ನೀರಿನ ಲಭ್ಯತೆ, ಬಳಕೆಯ ಬಗ್ಗೆ ಅರಿವು ಮೂಡಿಸಬೇಕಿದೆ. ರಾಜ್ಯದಲ್ಲಿ ಹನಿ ನೀರಾವರಿ ಮೂಲಕ ಕೃಷಿ ಸೇರಿದಂತೆ ಅಗತ್ಯಕ್ಕೆ 2800 ಟಿಎಂಸಿ ನೀರಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಮುದ್ರ ಪಾಲಾಗುವ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ ಎಂದರು.

    ವಿ.ಪ. ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಅಂತರ್ಜಲ ಕುಸಿತದಿಂದ ರಾಜ್ಯದಲ್ಲಿ 3 ಲಕ್ಷ ಕೊಳವೆ ಬಾವಿಗಳು ನಷ್ಟವಾಗಿವೆ. ಇದಕ್ಕಾಗಿ 4 ಸಾವಿರ ಲಕ್ಷ ಕೋಟಿ ಹಣವನ್ನು ಬಳಸಲಾಗಿದೆ. ನೀರಿನ ಬಳಕೆಯ ಬಗ್ಗೆ, ಮರುಪೂರ್ಣ ಬಗ್ಗೆ ಚಿಂತಿಸದೆ ಹೋದರೆ ಮುಂದೆ ನೀರಿಗಾಗಿ ಯುದ್ಧ ಮಾಡಬೇಕಾದ ಪರಿಸ್ಥಿತಿ ಬರಲಿದೆ ಎಂದರು.

   ಅತಿ ಹೆಚ್ಚು ಅಂತರ್ಜಲ ಬಳಕೆ ಜಿಲ್ಲೆಗಳಲ್ಲಿ ತುಮಕೂರು ಸಹ ಸೇರ್ಪಡೆಯಾಗಿದೆ. ಆ ಕಾರಣಕ್ಕಾಗಿ ಇದನ್ನು ಡಾರ್ಕ್ ಜೋನ್ ಎಂದು ಪರಿಗಣಿಸಲಾಗಿದೆ. ಇಲ್ಲಿ ಅಂತರ್ಜಲ ತೆಗೆಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಪಾವಗಡದ ಪ್ರದೇಶಗಳಲ್ಲಿ 1500 ಅಡಿ ಆಳ ಹೋದರೂ ನೀರು ಸಿಗುತ್ತಿಲ್ಲ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಅಂತರ್ಜಲ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ.ಟಿ.ಕಾಂತರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭ ಕಲ್ಯಾಣ್ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link