ತುಮಕೂರು
ತುಮಕೂರು ನಗರದ ಶಿರಾಗೇಟ್ ಹೊರವಲಯ ಇರುವ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆಗೆ ಮಂಗಳವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಅವರ ಜೊತೆ ದಿಢೀರ್ ಭೇಟಿ ನೀಡಿ, ಮಾರುಕಟ್ಟೆ ಹೊರಗೆ ರಸ್ತೆ ಬದಿ ಕಸದ ರಾಶಿ ಬೀಳಲು ಕಾರಣವಾಗಿರುವ ಏಜೆನ್ಸಿಯೊಂದಕ್ಕೆ 10,000 ರೂ. ದಂಡ ವಿಧಿಸಿದ ಪ್ರಸಂಗ ಜರುಗಿದೆ.
ಆಯುಕ್ತರ ಜೊತೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್ ಮೃತ್ಯುಂಜಯ, ಆ ವಾರ್ಡ್‍ನ ಹೆಲ್ತ್ ಇನ್ಸ್‍ಪೆಕ್ಟರ್ ಪ್ರಸನ್ನ ಅವರುಗಳಿದ್ದರು. ಬೆಳಗ್ಗೆ 7-30 ರ ಹೊತ್ತಿಗೆ ಆಯುಕ್ತರ ತಂಡವು ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿತು. ಮಾರುಕಟ್ಟೆ ಒಳಗೆ ಮೂವರು ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದುದು ಪತ್ತೆಯಾದ ಹಿನ್ನೆಲೆಯಲ್ಲಿ ಆ ಮೂವರಿಗೆ ತಲಾ 1,000 ರೂ.ಗಳಂತೆ ದಂಡ ವಿಧಿಸಲಾಯಿತು. ಬಳಿಕ ಎ.ಪಿ.ಎಂ.ಸಿ. ಹೊರಭಾಗದಲ್ಲಿ ರಸ್ತೆ ಬದಿ ಕಸದ ರಾಶಿ ಬಿದ್ದಿದ್ದುದನ್ನು ಪರಿಶೀಲಿಸಲಾಯಿತು.
ಎ.ಪಿ.ಎಂ.ಸಿ. ಮಾರುಕಟ್ಟೆಯೊಳಗೆ ಕಸದ ನಿರ್ವಹಣೆಗಾಗಿ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದು, ಸದರಿ ಏಜೆನ್ಸಿಯು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಹೊರಗೆ ಕಸದ ರಾಶಿ ಬೀಳುತ್ತಿದೆ ಎಂಬ ತೀರ್ಮಾನಕ್ಕೆ ಬಂದ ಆಯುಕ್ತರು, ಸದರಿ ಏಜೆನ್ಸಿಗೆ 10,000 ರೂ. ದಂಡ ವಿಧಿಸಿದರು. ಈ ಸಂದರ್ಭದಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತೆಂದೂ, ಅವರು ಸದರಿ ಏಜೆನ್ಸಿಗೆ ದಂಡ ವಿಧಿಸಲು ಸಮ್ಮತಿಸಿದರೆಂದೂ ತಿಳಿದುಬಂದಿದೆ.
ಇದಾದ ಬಳಿಕ ಬಟವಾಡಿಯ ಎ.ಪಿ.ಎಂ.ಸಿ. ಆವರಣಕ್ಕೆ ಬರುವ ದಾರಿಯಲ್ಲಿ ಸಿಟ್ರಿಯಾ ಹೋಟೆಲ್ ಮುಂಭಾಗ ಕಸ ಇದ್ದುದನ್ನು ನೋಡಿ, ಸದರಿ ಹೋಟೆಲ್‍ಗೆ 5,000 ರೂ. ದಂಡ ವಿಧಿಸಲಾಯಿತು ಎಂದು ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ತಿಳಿಸಿದರು.
ಬಟವಾಡಿ ಎ.ಪಿ.ಎಂ.ಸಿ. ಆವರಣವನ್ನೂ ಈ ಸಂದರ್ಭದಲ್ಲಿ ಆಯುಕ್ತರು ಮತ್ತು ಇತರರು ಪರಿಶೀಲಿಸಿದರು. ಬೆಳಗ್ಗೆ 7-30 ರಿಂದ 10-30 ರವರೆಗೆ ಈ ಪರಿಶೀಲನೆ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








