ತಿಪಟೂರು
ಎಲ್ಲಾ ಪಕ್ಷಗಳೂ ರೈತ ವಿರೋಧಿಯಾಗಿವೆ, ಅವರು ರೈತರಿಗೆ ನ್ಯಾಯ ಒದಗಿಸಲು ವಿಫಲವಾಗಿವೆ. ರೈತರು ಸಂಘಟಿತರಾಗಿ ಹೋರಾಟದ ಮೂಲಕ ಮಾತ್ರ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಅಲ್ಲಿಯವರೆಗೂ ಧರಣಿಯನ್ನು ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಸ್.ದೇವರಾಜು ಕರೆ ನೀಡಿದರು.
ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಸಂತ್ರಸ್ತರ ಜಮೀನಿನಲ್ಲಿ (ಹಳೆ ಬೈಪಾಸ್ ಮಾರ್ಗ ದಲ್ಲಿ) ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರಸ್ತೆಯಾಗಿ ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಂಡು ರೈತರಿಗೆ ನ್ಯಾಯುಯುತ ಬೆಲೆ ನೀಡದೆ, ಮಾತುಕತೆಗಳಿಗೆ ಬದ್ಧವಾಗಿರದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತವು ಪೊಲೀಸ್ ಸರ್ಪಗಾವಲಿನಲ್ಲಿ ರೈತರನ್ನು ಬೆದರಿಸಿ ಕಾಮಗಾರಿ ನಡೆಸಿ ರೈತರನ್ನು ಒಕ್ಕಲೆಬ್ಬಿಲು ಪ್ರಯತ್ನಿಸುತ್ತಿದೆ ಎಂದು ಹರಿಹಾಯ್ದರು.
ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕ ಮತ್ತು ರೈತ-ಕೃಷಿಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿಯ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೈತರಿಗೆ ಮಾಡುತ್ತಿರುವ ವಂಚನೆ ಹಾಗೂ ಜಿಲ್ಲಾಡಳಿತದ ಕಾರ್ಪೊರೆಟ್ ಪರದೋರಣೆಯನ್ನು ಬಿಡಬೇಕು.
ಕಲ್ಲೇಗೌಡನಪಾಳ್ಯದಲ್ಲಿ ಅಲೈನ್ಮೆಂಟ್ ತಪ್ಪಾಗಿರುವುದರ ಸಂಬಂಧ ಪ್ರಕರಣ ನ್ಯಾಯಲಯದಲ್ಲಿ ಇನ್ನೂ ನಡೆಯುತ್ತಿದ್ದು ಮತ್ತು ನ್ಯಾಯಾಲಯವು ಕಾಮಗಾರಿಗೆ ಅನುಮತಿ ನೀಡಿಲ್ಲದಿದ್ದರೂ ರೈತರನ್ನು ಬೆದರಿಸಿ, ಪೊಲೀಸ್ ಬಂದೋಬಸ್ತ್ನಲ್ಲಿ ಕಾಮಗಾರಿಗೆ ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೈಕೋರ್ಟ್ಗೆ ಈ ಭಾಗದಲ್ಲಿ ಕೆಲಸವಾಗಿದೆಯೆಂದು ಮತ್ತು ಕೇವಲ 6 ರೈತರು ಮಾತ್ರ ವಿರೋಧಿಸುತ್ತಿದ್ದಾರೆಂದು ಸುಳ್ಳು ಮಾಹಿತಿ ನೀಡಿದೆ.
ವಾಸ್ತವದಲ್ಲಿ ಬೈಪಾಸ್ ಹಾದು ಹೋಗುವ ಎಂಟು ಹಳ್ಳಿಗಳ ಎಲ್ಲಾ ಸಂತ್ರಸ್ತರು ಬೈಪಾಸ್ ಅನ್ನು ವಿರೋಧಿಸುತ್ತಿದ್ದಾರೆ ಮತ್ತು ನ್ಯಾಯಯುತ ಬೆಲೆ ಕೊಡದಿದ್ದರೆ ಬೈಪಾಸ್ ಬೇಡವೆಂದು ಘೋಷಿಸಿದ್ದಾರೆ. ಹೀಗೆ ರೈತರ ಬದುಕನ್ನು ಮಣ್ಣುಪಾಲು ಮಾಡುವ ಕೆಲಸ ನಡೆಯುತ್ತಿದೆ.
ರೈತರ ಹಿತಕಾಪಾಡಬೇಕಾದ ಜಿಲ್ಲಾಡಳಿತ ಕಾರ್ಪೊರೆಟ್ ಕಂಪೆನಿಯ ಸೇವೆಗೈಯ್ಯುತ್ತಿರುವುದು ದುರಂತ. ಜನ ಪ್ರತಿನಿಧಿಗಳೂ ಸಹ ಬೇಡವಾದ ವಿಷಯಗಳಲ್ಲಿ ಮುಳುಗಿ ರೈತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ ಅವರು ಆರ್ಎಫ್ಸಿಟಿಎಲ್ಎಆರ್ಆರ್ -2013ರ ಕಾಯ್ದೆಯ ಪ್ರಕಾರ ಮೊದಲನೆ ಹಾಗೂ ಎರಡನೆ ಶೆಡ್ಯೂಲ್ ಪ್ರಕಾರಎಲ್ಲಾ ಪರಿಹಾರಗಳನ್ನು ನೀಡಿದ ಮೇಲೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು, ಅಲ್ಲಿಯವರೆಗೂ ರೈತರು ಜಮೀನನ್ನು ಬಿಡಬಾರದು ಎಂದು ಕರೆನೀಡಿದರು.
ಹಸಿರು ಸೇನೆಯ ತಾಲೂಕು ಅಧ್ಯಕ್ಷರು ಮತ್ತು ಸಂತ್ರಸ್ತರ ಹೋರಾಟ ಸಮಿತಿಯ ನಾಯಕ ಟಿ.ಎಸ್.ದೇವರಾಜು ಪೊಲೀಸ್ ಬೆಂಬಲ ದೊಂದಿಗೆ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿದರು. ಅವರು ಯಾವುದೇ ಅಧಿಕಾರಿ ರೈತರ ಅನುಮತಿಯಿಲ್ಲದೆ ಜಮೀನಿಗೆ ಕಾಲಿಡಬಾರದು. ಕಾನೂನು ರೈತರ ಪರವಾಗಿದ್ದರೂ ಅದನ್ನು ಉಲ್ಲಂಘಿಸುತ್ತಿರುವುದು ಅನ್ಯಾಯ.
ರೈತರ ಬದುಕಿಗೆ ಆಧಾರವಾಗಿರುವ ಭೂಮಿಯನ್ನು ಕಸಿದುಕೊಂಡು ಪುಡಿಗಾಸಿನ ಪರಿಹಾರಕೊಡುವುದನ್ನು ಒಪ್ಪುವುದಿಲ್ಲವೆಂದರು.ಧರಣಿಯಲ್ಲಿ ನಂಜಾಮರಿ, ಸಿ.ದಯಾನಂದ, ಸಿದ್ದಲಿಂಗಮೂರ್ತಿ, ಮಲ್ಲಿಕಾರ್ಜುನ, ಸದಾಶಿವಯ್ಯ, ಬಸವರಾಜು, ಶೇಖರಯ್ಯ, ಕೆ.ಷಡಕ್ಷರಿ, ಶಿವನಂಜಪ್ಪ, ತೀರ್ಥಕುಮಾರ, ಎಸ್.ದಯಾನಂದ, ಎಚ್.ಸಿ.ಷಡಕ್ಷರಿ, ನಿರಂಜನಮೂರ್ತಿ, ಉಮೇಶ್, ಗೌರಮ್ಮ, ಸಿದ್ದಗಂಗಮ್ಮ, ನರಸಿಂಹಮೂರ್ತಿ, ಮಾಲಮ್ಮ, ನಂಜುಂಡಪ್ಪ, ವಿಕಾಸ, ಕಲ್ಲಪ್ಪ, ಶಶಿಧರ್, ಲೋಕೇಶ್, ಚನ್ನಬಸಪ್ಪ, ಕಾಂತರಾಜು, ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ