ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಬರಗಾಲದ ದುಸ್ಥಿತಿಯಲ್ಲಿರುವ ಈ ಭಾಗದ ಲಕ್ಷಾಂತರ ಜನರ ಕುಡಿಯುವ ನೀರಿನ ಆಧಾರ ತಾಣವಾದ ವೇದಾವತಿ ನದಿಪಾತ್ರದಲ್ಲಿ ಕೆಲವು ರಾಜಕೀಯ ಪಟ್ಟಭದ್ರಶಕ್ತಿಗಳು ಆಳಾವಾಗಿ ನದಿಯ ಒಡಲನ್ನು ಅಗೆದಿದ್ದು, ಜಲ ಸಂಪೂರ್ಣವಾಗಿ ಬತ್ತಿಹೋಗಲು ಕಾರಣವಾಗಿದೆ. ಕುಡಿಯುವ ನೀರಿಗೂ ಸಹ ಜನ, ಜಾನುವಾರುಗಳು ಪರಿತಪಿಸುವ ದುಸ್ಥಿತಿ ಉಂಟಾಗಿದ್ದು, ಸರ್ಕಾರ ವೇದವಾತಿ ನದಿ ಪಾತ್ರಕ್ಕೆ ನೀರು ಹರಿಸುವಂತೆ ಒತ್ತಾಯಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ನೆಹರೂ ವೃತ್ತದಲ್ಲಿ ವೇದಾವತಿ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ವೇದಾವತಿ ನದಿಪಾತ್ರಕ್ಕೆ ನೀರು ಹರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಪಾದಯಾತ್ರೆ ಕೈಗೊಂಡಿದ್ದು, ಪಾದಯಾತ್ರೆಯಲ್ಲಿ ರೈತ ಸಂಘ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದು, ವೇದಾವತಿ ನದಿಪಾತ್ರದಲ್ಲಿ ನೀರು ಹರಿಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗಿದೆ. ರೈತರ ಹಿತದೃಷ್ಠಿಯಿಂದ ಈ ಪಾದಯಾತ್ರೆ ಕೈಗೊಂಡಿದ್ದು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲವೆಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಮಾತನಾಡಿ, ಇಂದು ರೈತರಿಗೆ ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಲು ಅಪೇಕ್ಷೆ ಪಡುತ್ತಾರೆ. ಆದರೆ, ರೈತರ ಸ್ಥಿತಿ ಹೀಗಿದೆ ಎಂದರೆ ಆ ಭಾಗದ ಎಲ್ಲಾ ಪಂಪ್ ಸೆಟ್‍ಗಳು ಒಣಗಿವೆ, ಅಂತರ್ಜಲ ಸಂಪೂರ್ಣವಾಗಿ ಮಾಯವಾಗಿದೆ. ಆ ಭಾಗದ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕ್ಷಾಮ ಉಂಟಾಗಿದೆ. ಆದ್ದರಿಂದ ವೇದಾವತಿ ನದಿ ಸಂರಕ್ಷಣಾ ಸಮಿತಿ ಉತ್ತಮ ನಿರ್ಧಾರ ಕೈಗೊಂಡು ರೈತರಿಗಾಗಿ ಈ ಪಾದಯಾತ್ರೆ ಮುಂದುವರೆಸಿದ್ದು, ಇಂತಹ ಜನಪರ ಹೋರಾಟಗಳಿಗೆ ಸಂಪೂರ್ಣ ಸಹಕಾರ ನೀಡುವ ಜವಾಬ್ದಾರಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಮೇಲಿದೆ ಎಂದರು. ರೈತರ ಉಳಿವೆ ನಮ್ಮ ಉಳಿವು ಎಂದರು.
ಹೋರಾಟ ಸಮಿತಿಯ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಸಾವಿರಾರು ರೈತರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರು ಈ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ ಸ್ವಯಂ ಪ್ರೇರಿತವಾಗಿ ನಮ್ಮೊಡನೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಕೆಲವರು ಇದು ರಾಜಕೀಯ ದುರುದ್ದೇಶಕ್ಕೆ ಪಾದಯಾತ್ರೆ ಎಂದು ಟೀಕಿಸುತ್ತಾರೆ. ಆದರೆ, ನಮಗೆ ಜನರ ಹಿತವನ್ನು ಕಾಯುವುದು ಮುಖ್ಯವಾದ ಕೆಲಸ. ನಮ್ಮ ಮೇಲೆ ಯಾವುದೇ ರೀತಿಯ ಟೀಕೆಟಿಪ್ಪಣಿ ಬಂದರೂ ಗಮನಕೊಡದೆ ರೈತರ ಬದುಕನ್ನು ಹಸನುಪಡಿಸಲು ನಾವು ಹೋರಾಟ ಮಾಡುತ್ತೇವೆಂದರು.
ಈ ಸಂದರ್ಭದಲ್ಲಿ ಬಾಳೆಮಂಡಿರಾಮದಾಸ್, ಮೋಹನ್‍ಕುಮಾರ್, ದಿನೇಶ್‍ರೆಡ್ಡಿ, ರೈತ ಮುಖಂಡರಾದ ಹಿರೇಹಳ್ಳಿ ಯರ್ರಿಸ್ವಾಮಿ, ಚನ್ನಕೇಶವ, ತಿಪ್ಪೇಸ್ವಾಮಿ, ಶ್ರೀಕಂಠಪ್ಪ, ಆರ್.ಡಿ.ಮಂಜುನಾಥ, ಮಾರುತಿ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮುಂತಾದವರು ಇದ್ದರು. ಪಾವಗಡ ರಸ್ತೆಯ ರೈಲ್ವೆ ಗೇಟ್ ಬಳಿ ಬಂದ ಪಾದಯಾತ್ರೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
