ಪಾವಗಡ
ತಾಲ್ಲೂಕಿನಲ್ಲಿ ರಾಜಾರೋಷವಾಗಿ ಇಸ್ಪೀಟ್ ಮತ್ತು ಮಟ್ಕಾ ಜೂಜಾಟ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದರೆ ತಪ್ಪಾಗಲಾರದು. ತಾಲ್ಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಗಾನಹಳ್ಳಿ ಬೆಟ್ಟದ ಹತ್ತಿರ ಭಾನುವಾರ ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿರುವ ವಿಚಾರ ತಿಳಿದು ಮಾಧ್ಯಮಗಳಿಂದ ಮಾಹಿತಿ ಸಂಗ್ರಹಿಸಿ ಸ್ಥಳ ಪರಿಶೀಲಿಸಿದಾಗ ಜೂಜಾಟದಲ್ಲಿ ತೊಡಗಿದ್ದ, 30 ಕ್ಕೂ ಹೆಚ್ಚು ಜೂಜುಕೋರರು ಬೈಕ್‍ಗಳನ್ನು ಬಿಟ್ಟು ಮಾಧ್ಯಮದವರನ್ನು ಕಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಸಬ್‍ಇನ್‍ಸ್ಪೆಕ್ಟರ್ ಇಲ್ಲದ ಕಾರಣ ಕಾನ್‍ಸ್ಟೇಬಲ್ ಶಿವರಾಜು ಎಂಬುವರು ಎರಡು ದಿನಗಳ ಕಾಲ ಇಸ್ಪೀಟ್ ಆಡಲು ಅವಕಾಶ ಕೊಟ್ಟಿರುವುದಾಗಿ ಮಾಹಿತಿ ತಿಳಿದು ಬಂದಿದ್ದು, ಜೂಜಾಟ ಆಡಿಸುವುದೆ ಇವರ ಕೆಲಸ ಎಂದು ಈ ಭಾಗದ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದ್ದು, ಆರ್ಲಹಳ್ಳಿ ಮೂರ್ತಿರವರು ಇಸ್ಪೀಟ್ ಆಡಿಸುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಶನಿವಾರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಮಟ್ಕಾ ಮತ್ತು ಇಸ್ಪೀಟ್ ಜೂಜಾಟದ ಬಗ್ಗೆ ಸುದ್ದಿ ಪ್ರಕಟವಾದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮತ್ತೆ ಇಸ್ಪೀಟ್ ಆಡಿಸಲು ಪೊಲೀಸರೆ ಮುಂದಾಗಿದ್ದಾರೆ ಎಂದರೆ ಎಷ್ಟರ ಮಟ್ಟಿಗೆ ಮೇಲಧಿಕಾರಿಗಳ ಭಯವಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಜೂಜಾಟ ಕೇಂದ್ರಗಳನ್ನು ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಿವರಾತ್ರಿ ದಿನದಂದು ವೈ.ಎನ್.ಹೊಸಕೋಟೆ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಇಡೀ ರಾತ್ರಿ ಜೂಜಾಟ ನಡೆದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇದೇ ಠಾಣೆ ವ್ಯಾಪ್ತಿಗೆ ಸೇರಿದ ಚಿಕ್ಕಹಳ್ಳಿ, ನೀಲಮ್ಮನಹಳ್ಳಿ ಹಳ್ಳದಲ್ಲಿ, ಬೊಮ್ಮಗಾನಹಳ್ಳಿ ಬೆಟ್ಟದ ಹತ್ತಿರ ಮತ್ತು ಕೆರೆ ಅಂಗಳದಲ್ಲಿ, ಮೀನುಗುಂಟನಹಳ್ಳಿ ದೊಡ್ಡ ವಿದ್ಯುತ್ ಕಂಬದ ಬಳಿ, ಮರದ ಹತ್ತಿರ ಬೆಳಗ್ಗೆ 8 ರಿಂದ 10 ಗಂಟೆ ತನಕ ಇಸ್ಪೀಟ್ ಆಟ ಆಡಿಸುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಈ ಬಗ್ಗೆ ತುರ್ತುಕ್ರಮ ಕೈ ಗೊಳ್ಳಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/IMG_20200308_181642.gif)