ಬೆಂಗಳೂರು
ಸಿದ್ದರಾಮಯ್ಯ ಅವರು ಬಿಜೆಪಿ ಕಡೆ ವಾಲಿದ್ದಾರೆ ಎಂಬ ಬಾಬುರಾವ್ ಚಿಂಚನಸೂರ್ ವ್ಯಾಕ್ಯಾನಕ್ಕೆ ತಕ್ಕ ಉತ್ತರ ನೀಡಿರುವ ಸಿದ್ದರಾಮಯ್ಯ “ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ” ಎಂದಿದ್ದಾರೆ.
“ಬಿಜೆಪಿಯ ಕೆಲವು ನಾಯಕರು ಬಾದಾಮಿಗೆ ನಾವು ರೂ.650 ಕೋಟಿ ಕೊಟ್ಟಿದ್ದೀವಿ ಅಂತ ಪ್ರಚಾರ ಶುರು ಮಾಡಿಕೊಂಡಿದ್ದಾರೆ” ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ಶುಕ್ರವಾರ ಕಲಬುರಗಿಯಲ್ಲಿ ಮಾತನಾಡಿದ್ದ ಬಾಬೂರಾವ್ ಚಿಂಚನಸೂರ, “ಸಿದ್ದರಾಮಯ್ಯ ಬಿಜೆಪಿ ಸೇರಿದರೆ ಕೇಂದ್ರ ಸಚಿವರಾಗಲಿದ್ದಾರೆ. ಅವರನ್ನು ನಾನು ಪಕ್ಷಕ್ಕೆ ಸ್ವಾಗತಿಸುತ್ತೇನೆ” ಎಂದು ಹೇಳಿಕೆ ಕೊಟ್ಟಿದ್ದರು.ಸರಣಿ ಟ್ವೀಟ್‌ಗಳ ಮೂಲಕ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಯಾರೇ ಆಗಲಿ ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದಾಗ ಪದೇ ಪದೇ ಪಕ್ಷ ಬದಲಿಸುವಂತಹ ಸನ್ನಿವೇಶವೇ ಉದ್ಭವಿಸುವುದಿಲ್ಲ” ಎಂದು ಹೇಳಿದ್ದಾರೆ.ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ.
ಕಾನೂನು ವಿದ್ಯಾರ್ಥಿಯಾಗಿ 1972ರಲ್ಲಿ ರಾಜಕೀಯ ಪ್ರವೇಶ ಮಾಡಿದಾಗಿಂದ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ವ್ಯವಸ್ಥೆ ಪರ ಹೋರಾಡುತ್ತಾ ಬಂದಿದ್ದೇನೆ, ಬಿಜೆಪಿ ಈ ಎಲ್ಲಾ ತತ್ವಗಳಿಗೂ ವಿರುದ್ಧವಾಗಿದೆ. ಹೀಗಿರುವಾಗ ಬಿಜೆಪಿ ಸೇರಲು ಸಾಧ್ಯವೇ? ಇದೊಂದು ಮೂರ್ಖತನದ ಪ್ರಚಾರ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.