ಹೈಕಮಾಂಡ್ ಸೂಚನೆ ತಿರಸ್ಕರಿಸಿದ ಡಿ ಕೆ ಶಿವಕುಮಾರ್

ಬೆಂಗಳೂರು

     ಆಪರೇಷನ್ ಕಮಲ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಮಧ್ಯಪ್ರದೇಶದ ಕಾಂಗ್ರೆಸ್ ಸಚಿವರು ಹಾಗೂ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವಂತೆ ಪಕ್ಷದ ಹೈಕಮಾಂಡ್ ವರಿಷ್ಟರು ನೀಡಿದ ಸೂಚನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಿರಸ್ಕರಿಸಿದ ಬೆಳವಣಿಗೆ ನಡೆದಿದೆ.

     ಪಕ್ಷ ಸಂಕಷ್ಟದಲ್ಲಿದ್ದಾಗಲೆಲ್ಲ ವರಿಷ್ಟರು ತಮಗೆ ವಹಿಸಿದ ಟಾಸ್ಕ್ ಅನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಹೈಕಮಾಂಡ್ ನೀಡಿದ ಸಿಗ್ನಲ್ ರಿಸೀವ್ ಮಾಡಲು ಒಪ್ಪಿಲ್ಲ.ನಾನೀಗ ಕೆಪಿಸಿಸಿ ಅಧ್ಯಕ್ಷನೂ ಅಲ್ಲ,ಶಾಸಕಾಂಗ ಪಕ್ಷದ ನಾಯಕನೂ ಅಲ್ಲ.ಕೇವಲ ಶಾಸಕ.ಹೀಗಾಗಿ ಮಧ್ಯಪ್ರದೇಶದಿಂದ ಬಂದಿರುವ ಸಚಿವರು,ಶಾಸಕರ ಮನವೊಲಿಸುವ ಕೆಲಸಕ್ಕೆ ಕೈ ಹಾಕುವ ಶಕ್ತಿ ನನಗಿಲ್ಲ ಎಂದು ಡಿಕೆಶಿ ಏಕ್‍ದಂ ಉಲ್ಟಾ ಹೊಡೆದಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದಲ್ಲಿ ಗುರುತರ ಜವಾಬ್ದಾರಿ ಹೊತ್ತವರಿದ್ದಾರೆ.ಹೀಗಾಗಿ ಈ ಕೆಲಸವನ್ನು ಅವರಿಗೆ ಹೇಳಿ.ಪದೇ ಪದೇ ನನಗೆ ಹೇಳಿದರೆ ಹಲವು ಕಿರುಕುಳಗಳಿಗೆ ಗುರಿಯಾಗುತ್ತಾ ಕೂರುವ ನನ್ನ ಗತಿ ಏನು?ಅಂತ ಹೈಕಮಾಂಡ್ ವರಿಷ್ಟರಿಗೆ ಡಿಕೆಶಿ ನೇರವಾಗಿ ಪ್ರಶ್ನಿಸಿದ್ದಾರೆ.

     ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕೈ ಪಾಳೆಯದ ಶಾಸಕರನ್ನು ಬೆಂಗಳೂರಿನಲ್ಲಿಟ್ಟು ನೋಡಿಕೊಂಡ ಕಾರಣಕ್ಕಾಗಿ ಹಿಂಸೆ ಅನುಭವಿಸಿದೆ.ಮಹಾರಾಷ್ಟ್ರ ಕಾಂಗ್ರೆಸ್‍ನಲ್ಲಿ ನಡೆದ ವಿದ್ಯಮಾನಗಳಿಗೆ ಸ್ಪಂದಿಸಿದೆ.ಕರ್ನಾಟಕದಲ್ಲಿ ಸರ್ಕಾರ ಉರುಳಿಸುವ ಯತ್ನ ನಡೆದಾಗ ಮುಂಬೈಗೆ ಹೋಗಿದ್ದ ನಮ್ಮ ಶಾಸಕರನ್ನು ಕರೆತರಲು ಬೀದಿಯಲ್ಲಿ ಕುಳಿತೆ.

      ಆದರೆ ಈಗ ಯಾವ ಹೊಣೆ ನನ್ನ ಮೇಲಿದೆ?ಎಂದು ಬೀದಿಗೆ ಇಳಿಯಲಿ.ನಾನು ಕೆಪಿಸಿಸಿ ಅಧ್ಯಕ್ಷನೂ ಅಲ್ಲ,ಶಾಸಕಾಂಗ ಪಕ್ಷದ ನಾಯಕನೂ ಅಲ್ಲ ಎಂದು ಡಿಕೆಶಿ ವರಿಷ್ಟರಿಗೆ ಹೇಳಿದ್ದು ಆ ಮೂಲಕ ಪ್ರದೇಶ ಕಾಂಗ್ರೆಸ್ ನಾಯಕತ್ವದ ವಿಷಯದಲ್ಲಿ ನಡೆಯುತ್ತಿರುವ ಆಂತರಿಕ ಕದನಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

      ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಒಂದು ಗುಂಪು,ಅವರು ಬೇಡ.ಎಂ.ಬಿ.ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಮತ್ತೊಂದು ಗುಂಪು.ಇವರಿಬ್ಬರೂ ಬೇಡ.ಬದಲಿಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಎಂದು ಮತ್ತೊಂದು ಗುಂಪು ರಂಪ ಮಾಡುತ್ತಿರುವುದು ರಹಸ್ಯದ ಸಂಗತಿಯಲ್ಲ.

      ಈ ಮಧ್ಯೆಯೇ ಮಧ್ಯಪ್ರದೇಶ ಕಾಂಗ್ರೆಸ್‍ನಲ್ಲಿ ಎದ್ದ ತಲ್ಲಣ ಸರ್ಕಾರ ಉರುಳುವಂತೆ ಮಾಡುವ ಮಟ್ಟಕ್ಕೆ ಹೋಗಿದ್ದು ಆರು ಮಂದಿ ಸಚಿವರು ಸೇರಿದಂತೆ ಸುಮಾರು ಇಪ್ಪತ್ತು ಮಂದಿ ಶಾಸಕರು ಬೆಂಗಳೂರಿನ ದೇವನಹಳ್ಳಿ ಸಮೀಪದ ನಂದಿ ಬೆಟ್ಟದ ಸಮೀಪದಲ್ಲಿರುವ ರೆಸಾರ್ಟ್‍ನಲ್ಲಿ ತಂಗಿದ್ದಾರೆ.

     ಹೇಗಾದರೂ ಮಾಡಿ ಇವರನ್ನು ಭೇಟಿ ಮಾಡಿ.ಮನವೊಲಿಸಿ.ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಸಧ್ಯದಲ್ಲೇ ಮುಖ್ಯಮಂತ್ರಿ ಪಟ್ಟ ಸಿಗಲಿದೆ ಎಂದು ಹೇಳಿ.ಈ ಕೆಲಸ ಮಾಡಿದರೆ ಮಧ್ಯಪ್ರದೇಶದಲ್ಲಿ ನಮ್ಮ ಸರ್ಕಾರ ಉಳಿಯುತ್ತದೆ ಎಂದು ವರಿಷ್ಟರು ಡಿಕೆಶಿಗೆ ಫೋನ್ ಕರೆ ಮಾಡಿದ ಸಂದರ್ಭದಲ್ಲಿ ಈ ವಿದ್ಯಮಾನ ನಡೆದಿದೆ ಎಂದು ಮೂಲಗಳು ಹೇಳಿವೆ.

     ಆದರೆ ವರಿಷ್ಟರ ಮಾತಿಗೆ ಡಿಕೆಶಿ ಅಡ್ಡೇಟು ಹೊಡೆದಿದ್ದು ಪರೋಕ್ಷವಾಗಿ ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರದಂತೆ ತಡೆಯುತ್ತಿರುವವರ ವಿರುದ್ಧದ ತಮಗಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ.ಈ ಮಧ್ಯೆ ಮಧ್ಯಪ್ರದೇಶದಿಂದ ವಲಸೆ ಹೋಗಿರುವ ಸಚಿವರು,ಶಾಸಕರ ಮನವೊಲಿಸುವಂತೆ ಹೈಕಮಾಂಡ್ ವರಿಷ್ಟರು ರಾಜ್ಯ ಕಾಂಗ್ರೆಸ್‍ನ ಕೆಲ ನಾಯಕರಿಗೆ ಹೇಳಿದರೂ:ಇಲ್ಲಿರುವುದು ಬಿಜೆಪಿ ಸರ್ಕಾರ.ನಾವೇನಾದರೂ ಆ ಕೆಲಸಕ್ಕೆ ಮುಂದಾದರೆ ಹೈಡ್ರಾಮಾ ನಡೆಯುತ್ತದೆ ಎಂದು ಹೇಳಿದರೆನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link