ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಜ್ಜುಗೊಳಿಸಿ : ಜಿ.ಪಂ.ಅಧ್ಯಕ್ಷರ ತಾಕೀತು

ಚಿತ್ರದುರ್ಗ

    ಬೇಸಿಗೆ ಕಾಲ ಬಂದಿರುವುದರಿಂದ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿ, ಈಗಲೆ ಸಮರ್ಪಕವಾಗಿರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೆ ಬೇಸಿಗೆ ಕಾಲ ಬಂದಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಈಗಲೆ ಪರಿಶೀಲಿಸಿಕೊಳ್ಳಬೇಕು.

    ಸಂಪೂರ್ಣ ಕೆಟ್ಟು ಹೋಗಿರುವ ಹಾಗೂ ದುರಸ್ತಿ ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದು, ದುರಸ್ತಿ ಮಾಡಿಸಬೇಕು ಎಂದು ತಾಕೀತು ಮಾಡಿದರು ಬೇಸಿಗೆಯ ಅವಧಿಯಲ್ಲಿ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದಲ್ಲಿ, ಕೂಡಲೆ ಅದಕ್ಕೆ ಸ್ಪಂದಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಹೊಸ ಬೋರ್‍ವೆಲ್ ಕೊರೆಯಿಸಬೇಕು.ಬೇಸಿಗೆ ಕಾಲದಲ್ಲಿ ಜಿಲ್ಲೆಯ ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಬಾರದು, ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಈಗಲೆ ಸಿದ್ಧಪಡಿಸಿಕೊಂಡು, ಪರಿಹಾರಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು

    ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ 2019-20 ನೇ ಸಾಲಿಗೆ ಬಿಡುಗಡೆಯಾಗಿರುವ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾರ್ಚ್ ಅಂತ್ಯದ ಒಳಗೆ ಬಳಕೆಯಾಗಲೇಬೇಕು. ಖರ್ಚಾಗದೆ ಯಾವುದೇ ಕಾರಣಕ್ಕೂ ವಾಪಸ್ಸು ಹೋಗಬಾರದು. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದಿರುವ ಹಾಗೂ ಅನುದಾನ ವ್ಯರ್ಥಕ್ಕೆ ಕಾರಣರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು

   ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವು ರಾಜ್ಯದಲ್ಲಿ 6ನೇ ಸ್ಥಾನ ಪಡೆದಿತ್ತು. ಈ ಬಾರಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನ ಅಲಂಕರಿಸಬೇಕು. ಕೊರೊನಾ ವೈರಸ್ ಆತಂಕ ಇರುವುದರಿಂದ ಶೀಘ್ರವಾಗಿ ಪರೀಕ್ಷೆ ಮುಗಿಸಿ, ವಿದ್ಯಾರ್ಥಿಗಳಿಗೆ ರಜೆ ಘೋಷಿಸಬೇಕು ಎಂದು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿಗೆ ತಿಳಿಸಿದರು.

   ಇದಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್ ರೆಡ್ಡಿ, ಎಸ್‍ಎಸ್‍ಎಲ್‍ಸಿಯಲ್ಲಿ ಗುಣಮಟ್ಟದ ಫಲಿತಾಂಶಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ರಾತ್ರಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ. ಹೊಸದುರ್ಗ-10, ಚಳ್ಳಕೆರೆ-10, ಹಿರಿಯೂರು -7 ಸೇರಿದಂತೆ ಜಿಲ್ಲೆಯ ವಿವಿಧೆಡೆ ರಾತ್ರಿ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಉತ್ತಮವಾಗಿ ನಡೆಯುತ್ತಿವೆ. ರಾಜ್ಯದ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಎಲ್ಲ ಶಾಲೆಗಳ ಫಲಿತಾಂಶವನ್ನು ತರಿಸಿಕೊಂಡಿದ್ದು, “ಸಿ” ಗ್ರೇಡ್ ಪಡೆದ (ಅನುತ್ತೀರ್ಣವಾಗುವ) ವಿದ್ಯಾರ್ಥಿಗಳ ಪಟ್ಟಿಯನ್ನು ತಯಾರಿಸಿ, ಅಂತಹ ವಿದ್ಯಾರ್ಥಿಗಳಿಗೆ ವಿಷಯ ಪರಿಣಿತರಿಂದ ಹೋಬಳಿ ಕೇಂದ್ರಗಳಲ್ಲಿ ವಿಶೇಷ ಬೋಧನೆ ಕೇಂದ್ರಕ್ಕೆ ಚಾಲನೆ ನೀಡುವ ಯೋಚನೆ ಇದೆ. ಇನ್ನೂ ಮೂರು ದಿನಗಳಲ್ಲಿ ವಿಶೇಷ ಬೋಧನೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು

  ಜಿಲ್ಲೆಯಲ್ಲಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 16 ರೊಳಗೆ ಪರೀಕ್ಷೆ ಮುಗಿಸಬೇಕು. 06 ರಿಂದ 9ನೇ ತರಗತಿಗೆ ಮಾರ್ಚ್ 17 ರಿಂದ 23 ರೊಳಗೆ ಪರೀಕ್ಷೆ ಮುಗಿಸಿ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಈಗಾಗಲೆ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಔಷಧಿಗಳ ಪಟ್ಟಿಯನ್ನು ಪ್ರದರ್ಶಿಸಬೇಕು:

   ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗಡೆ ಔಷಧಿ ಖರೀದಿಸುವಂತೆ ವೈದ್ಯರು ಚೀಟಿ ಬರೆದುಕೊಡುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿದೆ. ಇಷ್ಟೆಲ್ಲಾ ಆದರೂ ಅಧಿಕಾರಿಗಳು ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳು ಹಾಗೂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಮತ್ತು ಲಭ್ಯ ಇಲ್ಲದಿರುವ ಔಷಧಿಗಳ ಪಟ್ಟಿಯನ್ನು ಮಾಹಿತಿ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ವಿಶಲಾಕ್ಷಿ ನಟರಾಜ್ ಹೇಳಿದರು

   ರೋಗಿಗಳ ಚೀಟಿಯಲ್ಲಿ ವೈದ್ಯರ ಹೆಸರು, ರೋಗದ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಹಾಗೂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಔಷಧಿಯನ್ನು ಬರೆದುಕೊಡಬೇಕು. ಬಡರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಪ್ರಭಾರಿ ಸಿಇಒ ವಿನೋತ್ ಪ್ರಿಯಾ ಡಿಹೆಚ್‍ಒ ಡಾ.ಫಾಲಾಕ್ಷ ಅವರಿಗೆ ಸೂಚನೆ ನೀಡಿದರು.

ಕರಪತ್ರದ ಮೂಲಕ ಜಾಗೃತಿ ಮೂಡಿಸಿ:

   ಜಿಲ್ಲೆಯ ಎಲ್ಲ ಕೃಷಿ ಹೊಂಡಗಳಿಗೆ ಮೀನುಮರಿ ಬಿಟ್ಟು ಅದರ ಪೋಷಣೆ ಕಾರ್ಯ ಮಾಡಬೇಕು. ಮೀನುಗಾರಿಕೆ ಇಲಾಖೆಯಲ್ಲಿ ಮೀನುಗಾರರಿಗೆ ರೈತರಿಗೆ ಲಭ್ಯವಿರುವ ಯೋಜನೆಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ತಿಳಿಸಿದರು.

   ಅಕ್ಷರ ದಾಸೋಹದಡಿ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಆಹಾರ ಧಾನ್ಯ ಸಂಗ್ರಹಣಾ ಸ್ಥಳಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು ಎಂದು ಅಧಿಕಾರಿಗಳಿಗೆ ಡಿ.ಕೆ.ಶಿವಮೂರ್ತಿ ಸೂಚಿಸಿದರು.

   ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಮುಖ್ಯ ಯೋಜನಾಧಿಕಾರಿ ಶಶಿಧರ್, ಯೋಜನಾ ನಿರ್ದೇಶಕ ಮುಬೀನ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link