ನಕಾಶೆಯಲ್ಲಿ ರಸ್ತೆ ಇದ್ದರೂ ಸವರ್ಣೀಯರಿಂದ ಅಡ್ಡಿ
ತುಮಕೂರು
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಯಲಪೇನಹಳ್ಳಿ ಗ್ರಾಮದ 9 ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಸುಮಾರು 45 ಎಕರೆ ಜಮೀನಿಗೆ ಹೋಗಲು ನಕ್ಷೆಯಲ್ಲಿ ದಾರಿ ಇದೆ. ಆದರೂ ದಾರಿಯನ್ನು ಬಿಡದೆ ಗ್ರಾಮದ ಸವರ್ಣೀಯರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಆದ್ದರಿಂದ ರಸ್ತೆ ತೆರವುಗೊಳಿಸಿ ಕೊಡುವಂತೆ ಎಚ್.ಸಿದ್ದಗಂಗಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಪೇನಹಳ್ಳಿ ಗ್ರಾಮದ 9 ದಲಿತ ಕುಂಟುಂಬಗಳಿಗೆ 1940 ರ ಡಿಸೆಂಬರ್ 24 ರಂದು ಅಂದಿನ ಸರಕಾರ 45 ಎಕರೆ ಜಮೀನನ್ನು ಮಂಜೂರು ಮಾಡಿದೆ. ಸದರಿ ಜಮೀನಿಗೆ ಹೋಗಲು ಗ್ರಾಮದ ಸರ್ವೆ ನಂಬರ್ 81 ರಿಂದ 87 ರವರೆಗೆ ಹಾಗೂ 46 ರಲ್ಲಿ ಬಂಡಿ ರಸ್ತೆಯನ್ನು ಗುರುತಿಸಿ, ನಕಾಶೆ ಮಾಡಿದ್ದಾರೆ. ಆದರೆ ಗ್ರಾಮದ ಕೆಲ ಪ್ರಭಾವಿ ವ್ಯಕ್ತಿಗಳು ದಲಿತರು ತಮ್ಮ ಭೂಮಿಗೆ ಹೋಗಲು ಅಗತ್ಯವಿರುವ ರಸ್ತೆಯನ್ನು ಬಿಡದೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.
ಈ ಬಗ್ಗೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿ, ರಸ್ತೆ ತೆರವು ಗೊಳಿಸಿಕೊಡುವಂತೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತವು ಇತ್ತ ಗಮನಹರಿಸಿ, ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ರಸ್ತೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, 2018 ರಲ್ಲಿ ಎಸಿಬಿಗೆ ಹಾಗೂ ದಲಿತರ ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ದೂರು ದಾಖಲಾಗದ ನಂತರ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಸರ್ವೇ ಇಲಾಖೆಯವರು 17-12-2018 ರಲ್ಲಿ ಅಳತೆ ಮಾಡಿ, ನಕಾಶೆಯ ಪ್ರಕಾರ ಬಂಡಿ ರಸ್ತೆ ಗುರುತಿಸಿ, ಸ್ಕೇಚ್ ನೀಡಿದ್ದರೂ, ಇದುವರೆಗೂ ಸದರಿ ರಸ್ತೆಯನ್ನು ಶಿರಾ ತಹಸೀಲ್ದಾರ್ ತೆರವುಗೊಳಿಸಿಲ್ಲ. ಈ ಬಗ್ಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೂ ದೂರು ನೀಡಲಾಗಿದೆ. ಈ ವೇಳೆ ಸವರ್ಣೀಯರು ದಲಿತರಲ್ಲಿಯೆ ಕೆಲವರನ್ನು ದೂರುದಾರರ ವಿರುದ್ದ ಎತ್ತಿಕಟ್ಟಿ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಧಮಕಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದಗಂಗಪ್ಪ ದೂರಿದರು.
ಯಲಪೇನಹಳ್ಳಿ ದಲಿತರಿಗೆ ಮಂಜೂರಾಗಿರುವ ಜಮೀನಿಗೆ ಹೋಗಿ ಬರಲು ರಸ್ತೆ ಇಲ್ಲದ ಪರಿಣಾಮ ಸದರಿ ಜಮೀನಿನಲ್ಲಿ ಕೃಷಿ ಕಾರ್ಯಗಳು ಸ್ಥಗಿತಗೊಂಡಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಜಮೀನು ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ಕಾನೂನು ರೀತಿ ಕ್ರಮ ಕೈಗೊಂಡು, ದಲಿತರು ತಮ್ಮ ಜಮೀನುಗಳಿಗೆ ಹೋಗಲು ನಕಾಶೆಯಂತೆ ದಾರಿ ತೆರವು ಮಾಡಿಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕುಟುಂಬ ಸಮೇತ ದನ, ಕರು, ಪಕ್ಷಿಗಳೊಂದಿಗೆ ಜಿಲ್ಲಾಧಿಕಾರಿಗಳ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ದೂರುದಾರ ಎಚ್.ಸಿದ್ದಗಂಗಪ್ಪ ಸ್ಪಷ್ಟಪಡಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ