ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಡಳಿತ ಪಕ್ಷದ ಶಾಸಕರು

ಬೆಂಗಳೂರು

     ಐಟಿ-ಬಿಟಿಯವರಿಗೆ,ಡಾಕ್ಟರು,ಎಂಜಿನಿಯರುಗಳಿಗೆ ಬರಬಹುದು ಎಂಬ ಹೆದರಿಕೆಯಿಂದ ಕೊರೋನಾ ವೈರಸ್ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೀರಿ.ಬಡ-ಬಗ್ಗರು ಸತ್ತರೆ ಸಾಯಲಿ ಎಂದು ಮಂಗನಕಾಯಿಲೆಯನ್ನು ತಡೆಗಟ್ಟಲು ಮನಸ್ಸು ಮಾಡುವುದಿಲ್ಲ ಎಂದು ಆಡಳಿತಾರೂಢ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.

    ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಸಚಿವ,ಶಾಸಕ ಹರತಾಳು ಹಾಲಪ್ಪ:ಕೊರೋನಾ ವೈರಸ್‍ನ್ನು ತಡೆಟ್ಟಲು ಸರ್ಕಾರ ಏನೆಲ್ಲ ಕ್ರಮ ಕೈಗೊಳುತ್ತಿದೆ.ಅದರೆ ಮಂಗನಕಾಯಿಲೆ ಬಂದು ವರ್ಷದಲ್ಲಿ ಹದಿನೈದು ಮಂದಿ ಸತ್ತರೆ ಯಾವ ಕ್ರಮ ಕೈಗೊಳ್ಳುತ್ತಿಲ್ಲ.ಸರಿಯಾದ ಉತ್ತರ ನೀಡದಿದ್ದರೆ ಈ ಸದನದಲ್ಲೇ ಧರಣಿ ನಡೆಸುತ್ತೇನೆ ಎಂದು ಆಕ್ರೋಶ ಎಚ್ಚರಿಕೆ ನೀಡಿದರು.

   ಈ ಹಂತದಲ್ಲಿ ಅದಕ್ಕೆ ಧ್ವನಿಗೂಡಿಸಿದ ಆರಗ ಜ್ಞಾನೇಂದ್ರ:ಮಂಗನ ಕಾಯಿಲೆ ಬಂದವರು ನಾಯಿ-ನರಿಗಳಂತೆ ಸಾಯುತ್ತಿದ್ದಾರೆ.ಆದರೆ ಅದನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆಸಕ್ತಿ ಇಲ್ಲ.ಅವರಿಗೆ,ಅವರ ಹೆಂಡತಿ,ಮಕ್ಕಳಿಗೆ ಮಂಗನಕಾಯಿಲೆ ಬಡಿಯಬೇಕು.ಆಗ ಸರಿಯಾಗುತ್ತಾರೆ ಎಂದರು.

   ಶೂನ್ಯ ವೇಳೆಯಲ್ಲಿ ಅರಂಭವಾದ ಈ ಚರ್ಚೆ ಜುಗಲ್ ಬಂಧಿಯ ರೂಪ ಪಡೆಯಿತಲ್ಲದೆ ಒಬ್ಬರಾದ ನಂತರ ಮತ್ತೊಬ್ಬರು ಸರ್ಕಾರವನ್ನು ಏರಿದ ಧ್ವನಿಯಲ್ಲಿ ಟೀಕಿಸತೊಡಗಿದಾಗ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಕ್ಕಾ ಬಿಕ್ಕಿಯಾಗುವಂತೆ ಮಾಡಿತು.
ಹರತಾಳು ಹಾಲಪ್ಪ ಮಾತನಾಡಿ,ಕೊರೋನಾ ವೈರಸ್ ಬಗ್ಗೆ ಇಷ್ಟೆಲ್ಲ ಕ್ರಮ ಕೈಗೊಳ್ಳುತ್ತಿದ್ದೀರಿ.ಆದರೆ ಶಿವಮೊಗ್ಗ,ಉತ್ತರ ಕನ್ನಡ,ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ವ್ಯಾಪಿಸಿರುವ ಮಂಗನಕಾಯಿಲೆಗೆ ಪರಿಹಾರ ಕಂಡು ಕೊಳ್ಳುವ ದಿಸೆಯಲ್ಲಿ ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

     ಐಟಿ-ಬಿಟಿಯವರಿಗೆ,ಡಾಕ್ಟರು,ಎಂಜಿನಿಯರುಗಳಿಗೆ ಬರಬಹುದು ಎಂಬ ಕಾರಣಕ್ಕಾಗಿ ಕೊರೋನಾ ತಡೆಗಟ್ಟಲು ಹೊರಟ ನಿಮಗೆ ಬಡ-ಬಗ್ಗರ ಸಾವಿಗೆ ಕಾರಣವಾಗುತ್ತಿರುವ ಮಂಗನಕಾಯಿಲೆಯ ಬಗ್ಗೆ ಯಾಕಿಷ್ಟು ತಾತ್ಸಾರ?ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದೂವರೆ ವರ್ಷದಿಂದ ನಾನು ಈ ವಿಷಯವನ್ನು ಪದೇ ಪದೇ ಪಸ್ತಾಪಿಸುತ್ತಿದ್ದೇನೆ.ಆದರೆ ಆರೋಗ್ಯ ಇಲಾಖೆಯವರು ಯಾವ ಕ್ರಮ ಕೈಗೊಳ್ಳುತ್ತಿಲ್ಲ.ಉನ್ನತಾಧಿಕಾರಿಗಳನ್ನು ನೋಡಲು ಹೋದರೆ ಸಿಗುತ್ತಲೂ ಇಲ್ಲ ಎಂದರು.

   ಕುಮಾರಸ್ವಾಮಿಯವರ ಸರ್ಕಾರ ಮಂಗನಕಾಯಿಲೆ ಪತ್ತೆ ಮಾಡಲು ಲ್ಯಾಬ್ ಸ್ಥಾಪನೆ ಮಾಡಿ ಎಂದು ಐದು ಕೋಟಿ ರೂಪಾಯಿ ನೀಡಿತ್ತು.ಇದುವರೆಗೆ ಆ ಲ್ಯಾಬ್ ನಿರ್ಮಾಣ ಕಾರ್ಯ ಆಗಿಲ್ಲ ಎಂದು ದೂರಿದರು.ನೆನ್ನೆಯೂ ಮಂಗನ ಕಾಯಿಲೆ ಬಂದು ಒಬ್ಬ ವ್ಯಕ್ತಿ ಸತ್ತಿದ್ದಾನೆ.ಆದರೆ ಈ ಕಾಯಿಲೆಗೆ ತುತ್ತಾದವರಿಗೆ ಸರಿಯಾದ ಚಿಕಿತ್ಸೆ ಕೂಡಾ ಸಿಗುತ್ತಿಲ್ಲ.ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಯಿಲೆಗೆ ತುತ್ತಾದವರನ್ನು ಸಾಗಿಸಲು ಆಂಬುಲೆನ್ಸ್ ಇತ್ತು.ಮಣಿಪಾಲದಲ್ಲಿ ಚಿಕಿತ್ಸೆ ಸಿಗುತ್ತಿತ್ತು.ಆದರೆ ಈಗ ಅದ್ಯಾವುದೂ ಇಲ್ಲ.ಚಿಕಿತ್ಸೆಗೆ ಕೊಡಬೇಕಾದ ಹಣ ನೀಡದ ಕಾರಣಕ್ಕಾಗಿ ಮಣಿಪಾಲ್ ಆಸ್ಪತ್ರೆಯವರು ರೋಗಿಗಳನ್ನು ವಾಪಸ್ ಕಳಿಸುತ್ತಿದ್ದಾರೆ.ಆಸ್ಪತ್ರೆಯವರಿಗೆ ಎಂಟು ಲಕ್ಷ ರೂಪಾಯಿಗಳನ್ನು ಸರ್ಕಾರ ಕೊಡಬೇಕು.

    ನೆನ್ನೆ ಸತ್ತ ವ್ಯಕ್ತಿಯನ್ನುಮೊದಲು ಅಲ್ಲಿ ಸೇರಿಸಲು ಹೋದರೆ ಅವರು ವಾಪಸ್ ಕಳಿಸಿದರು.ಅವರು ಕಳಿಸಿದರು ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರೆ ಅದೋ ಸಾವಿನ ಕೂಪ.ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರೆ ಡೆಡ್ ಬಾಡಿ ವಾಪಸ್ ಬರುವುದು ಖಂಡಿತ.ಅದು ಮುಖ್ಯಮಂತ್ರಿಗಳ ಜಿಲ್ಲೆ.ಅಲ್ಲೇ ಪರಿಸ್ಥಿತಿ ಹೀಗಿದೆ ಎಂದರೆ ಗತಿ ಏನು?ಅಂತ ಅವರು ಪ್ರಶ್ನಿಸಿದಾಗ ಆರಗ ಜ್ಞಾನೇಂದ್ರ ಮೇಲೆದ್ದು ನಿಂತು ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

     ಅಲ್ಲಿ ಜನ ನಾಯಿ-ನರಿಗಳಂತೆ ಸಾಯುತ್ತಿದ್ದಾರೆ.ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ .ಅವರಿಗೆ,ಅವರ ಹೆಂಡತಿ,ಮಕ್ಕಳಿಗೆ ಈ ರೋಗ ಬಂದು ಬಡಿಯಲಿ.ಆಗ ಇದರ ಗಂಭೀರತೆ ಅವರಿಗೆ ಅರ್ಥವಾಗುತ್ತದೆ ಎಂದಾಗ ಪಕ್ಷ ಭೇಧವಿಲ್ಲದೆ ಎಲ್ಲ ಪಕ್ಷಗಳವರೂ ನಿಂತು ಬೆಂಬಲಿಸಿದರು.

    ಕಾಂಗ್ರೆಸ್‍ನ ಕೃಷ್ಣ ಭೈರೇಗೌಡ,ಶಿವಾನಂದಪಾಟೀಲ್ ಸೇರಿದಂತೆ ಹಲವರು,ಪದೇ ಪದೇ ಸರ್ಕಾರದ ಗಮನಕ್ಕೆ ತಂದರೂ ಈ ಪರಿಸ್ಥಿತಿ ಇದೆ ಎಂದರೆ ಏನು ಮಾಡಬೇಕು?ಅಂತ ಕೇಳಿದರು.ಈ ಸಂದರ್ಭದಲ್ಲಿ ಎದ್ದು ನಿಂತ ಆರೋಗ್ಯ ಸಚಿವ ಬಿ.ಶ್ರೀರಾಮುಲು,ಮಂಗನ ಕಾಯಿಲೆ ತಡೆಗಟ್ಟಲು ಸಾಗರದಲ್ಲಿ ಲ್ಯಾಬ್ ನಿರ್ಮಾಣ ಮಾಡಲಾಗುವುದು.ಇದಕ್ಕಾಗಿ ಆರು ಎಕರೆ ಭೂಮಿಯನ್ನು ಗುರುತಿಸಲಾಗಿದೆ.ಹಾಗೆಯೇ ಈ ರೋಗವನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

 

Recent Articles

spot_img

Related Stories

Share via
Copy link