ದಾವಣಗೆರೆ
ಇಲ್ಲಿಯ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಎ.ನಾಗರಾಜರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಕಾಂಗ್ರೆಸ್‍ನ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆ, ಈಗಾಗಲೇ ನಗರಸಭೆಯ ಉಪಾಧ್ಯಕ್ಷರಾಗಿ, ಪಾಲಿಕೆಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಎ.ನಾಗರಾಜ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ದಾವಣಗೆರೆಯ ಮತದಾರ ಪ್ರಭುಗಳು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡಿದ್ದರೂ ಸಹ ಬಿಜೆಪಿಯವರು ಮೋಸ, ಒಳ ಸಂಚು ನಡೆಸಿ, ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಇಂತಹ ಕುತಂತ್ರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಹಿಂಬಾಗಿಲಿನಿಂದ ಭಾರತೀಯ ಜನತಾ ಪಾರ್ಟಿಯವರು ಪಾಲಿಕೆಯ ಗದ್ದುಗೆ ಏರಿದ್ದಾರೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲೂ ಬಿಜೆಪಿ ಹೀಗೆಯೇ ವಾಮಮಾರ್ಗದ ಮೂಲಕ ಅಧಿಕಾರ ಪಡೆದಿರುವುದು ಮತ್ತು ಪಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದ ಅವರು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಮ್ಮ ಪಕ್ಷದ ಸದಸ್ಯರು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಂಡೇ ಜನಪರವಾಗಿ ಮಹಾನಗರದ ಅಭಿವೃದಿಶ್ರಮಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ದಾವಣಗೆರೆ ಜಿಲ್ಲೆಯ ಬಗ್ಗೆ ಕನಿಷ್ಟ ಕಾಳಜಿ ಇಲ್ಲ. ಎಲ್ಲೆಡೆ ಕೊರೋನಾ ವೈರಸ್ ಭೀತಿ ಹೆಚ್ಚಾಗಿದೆ. ಜೊತೆಗೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಿದ್ದರೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಈಶ್ವರಪ್ಪ ಬಂದು ಸಭೆ ನಡೆಸಿಲ್ಲ ಎಂದು ಆರೋಪಿಸಿದರು.
ಕಳೆದ 3-4 ತಿಂಗಳಿನಿಂದ ಜಿಲ್ಲಾ ಸಚಿವ ಈಶ್ವರಪ್ಪ ಜಿಲ್ಲೆಗೆ ಭೇಟಿ ನೀಡಿದ ನಿದರ್ಶನವಿಲ್ಲ. ಇದಕ್ಕೆಲ್ಲಾ ಸಂಸದ ಜಿ.ಎಂ.ಸಿದ್ದೇಶ್ವರ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಾರಣವಾಗಿದ್ದಾರೆ. ಎಲ್ಲಾ ಸಭೆಗಳನ್ನೂ ಈ ಇಬ್ಬರು ನಡೆಸುತ್ತಿರುವುದಕ್ಕೆ ಜಿಲ್ಲಾ ಸಚಿವರು ತಮ್ಮ ಕೆಲಸವೇನೂ ಇಲ್ಲಿ ಇಲ್ಲವೆಂಬ ಕಾರಣಕ್ಕೆ ಅಸಡ್ಡೆ ತೋರುತ್ತಿರಬಹುದು ಎಂದು ಲೇವಡಿ ಮಾಡಿದರು.
ನಗರ, ಜಿಲ್ಲೆಯಲ್ಲಿ ಎಲ್ಲಾ ಕಾಮಗಾರಿಗಳೂ ಪರ್ಸಂಟೇಜ್ ದಂಧೆಯಾಗಿವೆ. ತಮಗೇನೂ ಲಾಭವಿಲ್ಲವೆಂಬ ಕಾರಣಕ್ಕೆ ಈಶ್ವರಪ್ಪ ಇತ್ತ ತಲೆ ಹಾಕುತ್ತಿಲ್ಲ. ರೇಣುಕಾಚಾರ್ಯ ಕಾಂಗ್ರೆಸ್ಸಿನ ಹಿರಿಯ ಶಾಸಕ ರಮೇಶಕುಮಾರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಬ್ಲ್ಯಾಕ್‍ಮೇಲ್ ಮಾಡಿ ರಾಜಕಾರಣ ಮಾಡುವವರು ನಿಷ್ಟಾವಂತರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ, ಸದಸ್ಯರಾದ ಅಬ್ದುಲ್ ಲತೀಫ್, ಮಂಜುನಾಥ ಗಡಿಗುಡಾಳ್, ಜಿ.ಡಿ.ಪ್ರಕಾಶ, ಪಕ್ಷದ ಮುಖಂಡರಾದ ಕೆ.ಜಿ.ಶಿವಕುಮಾರ, ಮುಜಾಹಿದ್ ಪಾಷಾ, ಶ್ರೀಕಾಂತ ಬಗರೆ, ಯುವರಾಜ, ಸುರೇಂದ್ರ ಸಿಂಗ್, ಅಲಿ ರಹಮತ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ