93 ಗ್ರಾಮಗಳಲ್ಲಿ ನೀರಿಗೆ ಬರ ಬರುವ ಆತಂಕ

ದಾವಣಗೆರೆ:

    ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ 93 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗುವ ಆತಂಕ ಮನೆ ಮಾಡಿದೆ.

    ಹೌದು… ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರರೇ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್‍ನ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ 93 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂಬುದಾಗಿ ತಿಳಿಸಿದ್ದು, ಇನ್ನೂ ಸ್ವಲ್ಪ ದಿನಗಳಲ್ಲಿಯೇ ಜಿಲ್ಲೆಯ 93 ಗ್ರಾಮಗಳ ಜನತೆ ಮತ್ತು ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ.

    ಜಿಲ್ಲೆಯ ದಾವಣಗೆರೆ ತಾಲೂಕಿನ ಕಾಟೀಹಳ್ಳಿ, ಹುಣಸೆಕಟ್ಟೆ, ಕೆಂಚಮ್ಮನಹಳ್ಳಿ, ಹೊಸಹಟ್ಟಿ ಲಂಬಾಣಿ ತಾಂಡಾ, ಜಮ್ಮಾಪುರ, ಹುಚ್ಚವ್ವನಹಳ್ಳಿ, ನೀರ್ಥಡಿ, ಹೆಮ್ಮನಬೇತೂರು, ಕುರುಡಿ, ಕಿತ್ತೂರು, ಹೆಬ್ಟಾಳು ಸೇರಿದಂತೆ ಜಿಲ್ಲೆಯ ಆರು ತಾಲೂಕುಗಳ 93 ಗ್ರಾಮಗಳಲ್ಲಿ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಜಗಳೂರು ತಾಲೂಕಿನ ಹೆಚ್ಚು ಗ್ರಾಮಗಳು ಈ ಜಲ ಕ್ಷಾಮಕ್ಕೆ ತುತ್ತಾಗುವ ಸಾಧ್ಯತೆ ಇದೆ.

   ಬೇಸಿಗೆಯ ಆರಂಭದಲ್ಲಿಯೇ ಸೂರ್ಯನ ಪ್ರಖರತೆ ಹೆಚ್ಚಾಗಿದ್ದು, ಈ 93 ಗ್ರಾಮಗಳ ಜೊತೆಗೆ ಮತ್ತಷ್ಟು ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಳ್ಳುವ ಸಾಧ್ಯತೆಯು ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಮೀಣ ಕುಡಿಯುವ ನೀರು ವಿಭಾಗದ ಎಂಜಿಯರ್‍ಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ 93 ಗ್ರಾಮಗಳನ್ನು ಗುರುತಿಸಿ, ಕ್ರಿಯಾ ಯೋಜನೆ ತಯಾರಿಸಿ ಈ ಗ್ರಾಮಗಳಲ್ಲಿ ತಲೆ ದೊರುವ ನೀರಿನ ಸಮಸ್ಯೆ ಬಗೆಹರಿಸಲಿಕ್ಕಾಗಿ ಹಾಗೂ ಟ್ಯಾಂಕರ್ ಮತ್ತು ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಸರಬರಾಜು ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link