ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ಶಬ್ದಗಳಿವು. ನಿರ್ಭಯಾ ಪ್ರಕರಣದ ತೀರ್ಪು ಹೊರಬಿದ್ದ ನಂತರ ಹಾಗೂ ಈವರೆಗಿನ ಘಟನಾವಳಿಗಳು ಇಂತಹ ಚರ್ಚೆಗೆ ಕಾರಣವಾಗಿವೆ. ಸುಪ್ರೀಂಕೋರ್ಟ್ನಿಂದ ತೀರ್ಪು ಹೊರಬಿದ್ದರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಇಷ್ಟು ದಿನಗಳು ಬೇಕೆ ಎಂಬ ಅಸಮಾಧಾನವಂತೂ ಸಾರ್ವತ್ರಿಕ ವಲಯದಲ್ಲಿ ಚರ್ಚೆಯಾಗುತ್ತಲೆ ಇದೆ. ಅದೀಗ ಅಂತಿಮ ಘಟ್ಟಕ್ಕೂ ಬಂದು ನಿಂತಿದೆ. ಮಾ.19 ರ ವರೆಗೆ ನಡೆಸಿದ ಎಲ್ಲ ಹೋರಾಟದ ಹಾದಿಗಳು ಮುಚ್ಚಿ ಹೋಗಿದ್ದು, ಅತ್ಯಾಚಾರಿಗಳು ಈಗ ನೇಣುಗಂಭ ಏರಲು ಸಿದ್ಧರಾಗಲೇಬೇಕಾದ ಪರಿಸ್ಥಿತಿ ಬಂದೊದಗಿದೆ.
ಗಲ್ಲು ಶಿಕ್ಷೆಯ ಇತಿಹಾಸ ಬಹಳ ಹಳೆಯದು. ರಾಜಕೀಯ ವಿರೋಧಿಗಳನ್ನು ಮತ್ತು ಕ್ರಿಮಿನಲ್ ಅಪರಾಧಿಗಳನ್ನು ಮಟ್ಟ ಹಾಕುವ ಸಲುವಾಗಿ ಬ್ರಿಟೀಷ್ ಆಡಳಿತ ಈ ಕಾನೂನು ಜಾರಿಗೆ ತಂದಿತ್ತು. ಈ ಕಾನೂನನ್ನು ಸ್ವಾತಂತ್ರ್ಯಾ ನಂತರವೂ ಭಾರತ ದಂಡ ಸಂಹಿತೆಯಲ್ಲಿ (1861) ಮುಂದುವರೆಸಲಾಯಿತು. ಆದರೆ ಅತ್ಯಂತ ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರವೆ ಮರಣ ದಂಡನೆ ವಿಧಿಸಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಭಾರತ ದಂಡ ಸಂಹಿತೆಯಲ್ಲಿ ಇರುವ ಈ ಕಾನೂನು ಈಗಿನ ಕಾಲಘಟ್ಟಕ್ಕೆ ಸರಿ ಹೊಂದುವುದೆ ಎಂಬ ಪ್ರಶ್ನೆಗಳು ಆರಂಭವಾಗಿ ಮರಣ ದಂಡನೆ ಶಿಕ್ಷೆಯನ್ನೆ ರದ್ದುಗೊಳಿಸಬೇಕು, ಜೀವಾವಧಿ ಶಿಕ್ಷೆಯನ್ನು ಮಾತ್ರವೆ ಉಳಿಸಿಕೊಳ್ಳಬೇಕು ಎಂಬ ಕೂಗು ಸ್ವಾತಂತ್ರ್ಯಾ ನಂತರದಲ್ಲಿ ಹೆಚ್ಚು ಹೆಚ್ಚು ಕೇಳಿಬರತೊಡಗಿತು. ಸುಪ್ರಿಂಕೋರ್ಟ್ ಮುಂದೆಯೂ ಇಂತಹ ಹಲವು ಪ್ರಸ್ತಾಪಗಳು ಎದುರಾದವು. ಸುಪ್ರಿಂಕೋರ್ಟ್ ಹಲವು ತೀರ್ಪುಗಳನ್ನು ನೀಡುವಾಗ ಮರಣ ದಂಡನೆಯ ಶಿಕ್ಷೆ ಎಂತಹ ಪ್ರಕರಣಗಳಲ್ಲಿ ಇರಬೇಕು ಎಂಬುದನ್ನು ನಿರೂಪಿಸಿದೆ.
ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಗಲ್ಲು ಶಿಕ್ಷೆ ವಿರೋಧಿ ನಿಲುವು ತಳೆದಿತ್ತು. 2015 ರಲ್ಲಿ ಭಾರತದ ಕಾನೂನು ಆಯೋಗವು ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿ, ಮರಣ ದಂಡನೆಯನ್ನು ರದ್ದುಗೊಳಿಸುವಂತೆ ಶಿಫಾರಸ್ಸು ಮಾಡಿತ್ತು. ಆದರೆ ರಾಷ್ಟçದ್ರೋಹ ಮತ್ತಿತರ ಕೆಲವು ಗಂಭೀರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವ ಅವಕಾಶವನ್ನು ವರದಿಯಲ್ಲಿ ತಿಳಿಸಿತ್ತು. 1980 ರಲ್ಲಿ ಭಾರತ ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠವು ಬಚನ್ಸಿಂಗ್ ವಿರುದ್ಧ ಪಂಜಾಬ್ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರವೆ ವಿಧಿಸಬಹುದಾಗಿದೆ ಎಂದು ಹೇಳಿದೆ. ಹೀಗಾಗಿ ಭಾರತದಲ್ಲಿ ಗಲ್ಲು ಶಿಕ್ಷೆ ವಿಧಿಸುವ ಅವಕಾಶಗಳು ಇನ್ನೂ ಜೀವಂತ ಇದ್ದರೂ ಗುರುತರ ಮತ್ತು ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರ ಎಂಬುದು ಇಲ್ಲಿ ಗಮನಾರ್ಹ.
ಎರಡನೆ ಮಹಾ ಯುದ್ಧದ ನಂತರ ವಿಶ್ವಾದ್ಯಂತ ಮರಣ ದಂಡನೆಯನ್ನು ನಿಷೇಧಿಸಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿತ್ತು. 1977 ರಲ್ಲಿ ವಿಶ್ವದ 16 ರಾಷ್ಟ್ರಗಳು ಮರಣ ದಂಡನೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದವು. ಪ್ರಸ್ತುತ 95 ರಾಷ್ಟ್ರಗಳಲ್ಲಿ ಈ ಶಿಕ್ಷೆಯನ್ನು ರದ್ದು ಮಾಡಲಾಗಿದೆ. 58 ರಾಷ್ಟ್ರಗಳಲ್ಲಿ ಈ ಶಿಕ್ಷೆ ಅನುಷ್ಠಾನದಲ್ಲಿದೆ.
ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಈವರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಸಂಖ್ಯೆ 52 ಮಾತ್ರ ಎಂಬ ಅಂಕಿ ಅಂಶಗಳು ಲಭ್ಯವಾಗುತ್ತವೆ. ಪೀಪಲ್ಸ್ ಫ್ರಂಟ್ ಫಾರ್ ಸಿವಿಲ್ ಲಿಬರ್ಟೀಸ್ ನಡೆಸಿರುವ ಸಂಶೋಧನೆಯ ಪ್ರಕಾರ 1953 ರಿಂದ 1963ರ ಅವಧಿಯಲ್ಲಿ 1422 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. 1991 ರಿಂದ ಈವರೆಗೆ ಕಳೆದ 27 ವರ್ಷಗಳಲ್ಲಿ ಗಲ್ಲು ಶಿಕ್ಷೆಗೆ ಜಾರಿಗೊಳಗಾದವರಲ್ಲಿ ನಾಲ್ಕು ಜನ ಮಾತ್ರ ಎಂಬುದನ್ನು ಉಲ್ಲೇಖಿಸಲಾಗಿದೆ. 2004 ರಲ್ಲಿ ಅತ್ಯಾಚಾರ ಅಪರಾಧಿ ಧನಂಜಯ ಚಟರ್ಜಿ, 2012 ರಲ್ಲಿ ಉಗ್ರ ಮಹಮ್ಮದ್ ಅಜ್ವಲ್ ಅಮೀರ್ ಖಾನ್, 2013 ರಲ್ಲಿ ಉಗ್ರ ಅಫ್ಜಲ್ ಗುರು, 2015 ರಲ್ಲಿ ಉಗ್ರ ಹಾಗೂ 1993 ರ ಮುಂಬೈ ಸ್ಪೋಟದ ರೂವಾರಿ ಯಾಕುಬ್ ಮೆನನ್ನನ್ನು ಗಲ್ಲಿಗೇರಿಸಲಾಗಿತ್ತು.
ದೇಶದ ವಿವಿಧ ನ್ಯಾಯಾಲಯಗಳಲ್ಲಿ ಅಪರಾಧದ ಸ್ವರೂಪ ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿರುವ ನೂರಾರು ಪ್ರಕರಣಗಳಿವೆ. ಆದರೆ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್ವರೆಗೆ, ಸುಪ್ರೀಂಕೋರ್ಟ್ವರೆಗೆ ಮೇಲ್ಮನವಿ ಸಲ್ಲಿಸುವ, ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ನಡೆಯುತ್ತಲೆ ಇರುವುದರಿಂದ ಈ ಪ್ರಕರಣಗಳ ಅಂತಿಮ ಘಟ್ಟದ ಸ್ಪಷ್ಟ ಚಿತ್ರಣಗಳು ಲಭ್ಯವಾಗುತ್ತಿಲ್ಲ.
ಭಾರತ ಸಂವಿಧಾನದ 21ನೆ ಪರಿಚ್ಛೇದದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಲಾಗಿದೆ. ಇದು ಅಪರಾಧಿಗಳಿಗೂ ಅನ್ವಯಿಸುತ್ತದೆ. ಯಾವುದೆ ವ್ಯಕ್ತಿಯಾಗಲಿ ಏನೇ ತಪ್ಪು ಮಾಡಿದರೂ ಕಾನೂನಿನ ವಿಧಿ ವಿಧಾನಗಳ ಮೂಲಕವೆ ಶಿಕ್ಷೆಯಾಗಬೇಕು ಎಂಬುದು ಸಂವಿಧಾನದ ಲಿಖಿತ ನಿಯಮ. ಹೀಗಾಗಿ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಮಾತ್ರವೆ ಗಲ್ಲುಶಿಕ್ಷೆ ವಿಧಿಸಲಾಗುತ್ತಿದೆ ಎಂಬುದನ್ನು ನಾವಿಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು.
ಭಾರತ ದಂಡ ಸಂಹಿತೆಯ ಕಲಂ 120 (ಬಿ) –ಗಂಭೀರ ಕ್ರಿಮಿನಲ್ ಅಪರಾಧ ಮತ್ತು ಕ್ರಿಮಿನಲ್ ಪಿತೂರಿ. ಕಲಂ 132 – ಸೈನ್ಯದಲ್ಲಿ ದಂಗೆ ಏಳುವುದು, ಸೆಕ್ಷನ್ 121 – ಭಾರತದ ವಿರುದ್ಧ ಯುದ್ಧ ಪಿತೂರಿ, ಸೆಕ್ಷನ್ 194-ಓರ್ವ ವ್ಯಕ್ತಿಗೆ ಮರಣ ದಂಡನೆ ವಿಧಿಸುವ ಸಲುವಾಗಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವುದು. ಸೆಕ್ಷನ್ 302- ಕೊಲೆ, ಸೆಕ್ಷನ್ 305-ಅಪ್ರಾಪ್ತ ವಯಸ್ಕರ ಆತ್ಮಹತ್ಯೆಗೆ ಸಹಾಯ, ಸೆಕ್ಷನ್ 364 ಎ -ಸುಲಿಗೆ ಮತ್ತು ದಬ್ಬಾಳಿಕೆಗಾಗಿ ಅಪಹರಣ, ಸೆಕ್ಷನ್ 31 ಎ- ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ, ಸೆಕ್ಷನ್ 376ಎ,ಬಿ – 12 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ಸೆಕ್ಷನ್ 396-ಗುಂಪು ಘರ್ಷಣೆಯಲ್ಲಿ ಕೊಲೆಯಾದ ಸಂದರ್ಭದಲ್ಲಿ ಅಷ್ಟೂ ಜನರಿಗೆ ಮರಣ ದಂಡನೆ ಹೊಣೆ, 376ಎ- ಅತ್ಯಾಚಾರ ಮತ್ತು ಕೊಲೆ. ಮೇಲ್ಕಂಡ ಗಂಭೀರ ಮತ್ತು ಇತರೆ ಕೆಲವು ವಿರಳಾತಿ ಸಂದರ್ಭಗಳಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.
ಕಳೆದ 8 ವರ್ಷಗಳಿಂದ ಭಾರತೀಯರು ತೀವ್ರ ಕುತೂಹಲದಿಂದ ಕಾಯುತ್ತಿರುವ ಪ್ರಕರಣವೆ ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆ. 2012 ರ ಡಿಸೆಂಬರ್ 16 ರಂದು ದೆಹಲಿಯ ರಸ್ತೆಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಕಳೆದ ವರ್ಷವೆ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ಕಾಯಂಗೊಳಿಸಿತ್ತು. ಇದಾದ ನಂತರ ನಡೆದ ಬೆಳವಣಿಗೆಗಳು ಎಲ್ಲರಿಗೂ ತಿಳಿದದ್ದೆ. ಕ್ಯೂರೇಟಿವ್ ಅರ್ಜಿ, ಕ್ಷಮಾದಾನ, ಮರು ಅರ್ಜಿ, ಮರು ವಿಚಾರಣೆಗೆ ಕೋರಿಕೆ ಇತ್ಯಾದಿ ಹಲವು ನೆಪಗಳನ್ನೊಡ್ಡಿ ಅರ್ಜಿಯ ಮೇಲೆ ಅರ್ಜಿ ಸಲ್ಲಿಸುತ್ತಲೆ ಬರಲಾಗಿದೆ. ಆದರೆ ಎಲ್ಲ ಅರ್ಜಿಗಳೂ ತಿರಸ್ಕೃತಗೊಳ್ಳುತ್ತಲೆ ಬಂದಿವೆ. ಒಂದಷ್ಟು ಕಾಲ ಸಮಯ ದೂಡಿದ್ದನ್ನು ಬಿಟ್ಟರೆ ಅತ್ಯಾಚಾರಿಗಳಿಗೆ ಬೇರಾವುದೇ ಬೆಳಕು ಸದ್ಯಕ್ಕಂತೂ ಗೋಚರಿಸಲು ಸಾಧ್ಯವೆ ಇಲ್ಲ. ಕಳೆದ 27 ವರ್ಷದಲ್ಲಿ ಭಾರತದಲ್ಲಿ ಗಲ್ಲಿಗೆ ಕೊರಳೊಡ್ಡುತ್ತಿರುವ 5 ನೆ ವಿರಳಾತಿವಿರಳ ಹಾಗೂ ಜನತೆಯ ಗಮನ ಸೆಳೆದ ಪ್ರಕರಣ ಇದಾಗಿದೆ. ಇತಿಹಾಸದ ಪುಟಗಳಲ್ಲಿ ದಾಖಲಾಗುವ ಈ ಪ್ರಕರಣ ಭಾರತೀಯ ಮನಸ್ಸುಗಳಿಗೆ ಒಂದಷ್ಟು ಸಮಾಧಾನವನ್ನು ನೀಡಬಹುದು. ಇನ್ನೊಂದು ವಿಶೇಷತೆ ಎಂದರೆ ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ನಾಲ್ಕು ಜನ ಆರೋಪಿಗಳನ್ನು ಒಟ್ಟಿಗೆ ಗಲ್ಲಿಗೇರಿಸುತ್ತಿರುವ ಏಕೈಕ ಪ್ರಕರಣವೂ ಇದಾಗಿದೆ.