ರಾಗಿ ಖರೀದಿಗಿಲ್ಲ ಕೊರೊನಾ ಬೀತಿ

ಹುಳಿಯಾರು:

      ಕೊರೊನಾ ಬೀತಿಯಿಂದ ರಾಜ್ಯದಲ್ಲಿ ವ್ಯಾಪಾರ ವ್ಯವಹಾರ ಅಸ್ಥವ್ಯಸ್ಥವಾಗಿದ್ದರೂ ಹುಳಿಯಾರಿನಲ್ಲಿ ಮಾತ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ನಡೆಯುತ್ತಿರುವ ರಾಗಿ ಖರೀದಿಯು ನಿರಾತಂಕವಾಗಿ ನಡೆಯುತ್ತಿದೆ.

     ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು ಇದುವರೆಗೆ 2288 ಮಂದಿ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ನಿತ್ಯ ಅರವತ್ತೆಪ್ಪತ್ತು ರೈತರಿಂದ ರಾಗಿ ಖರೀದಿಯಾಗುತ್ತಿದ್ದು ಈಗಾಗಲೇ 1441 ರೈತರಿಂದ 31,793 ಕ್ವಿಂಟಲ್ ರಾಗಿ ಖರೀದಿಯಾಗಿದೆ. ಪ್ರತಿನಿತ್ಯ ರೈತರು ಟ್ರಾಕ್ಟರ್ ಮತ್ತು ಟೆಂಪೋಗಳಲ್ಲಿ ರಾಗಿಯನ್ನು ತರುತ್ತಿದ್ದು ಯಾವುದೇ ಅಡ್ಡಿ ಆತಂಕವಿಲ್ಲದೆ ಖರೀದಿ ಪ್ರಕ್ರಿಯೆ ನಡೆಯುತ್ತಿದೆ.

     ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ರಾಗಿ ಪ್ರಮುಖವಾದ ಬೆಳೆಯಾಗಿದ್ದು 2015-16 ರಲ್ಲಿ 23,868 ಹೆಕ್ಟರ್, 2016-17 ರಲ್ಲಿ 18,390 ಹೆಕ್ಟರ್, 2017-18 ರಲ್ಲಿ 17,400 ಹೆಕ್ಟರ್, 2018-19 ರಲ್ಲಿ 19,700 ಹೆಕ್ಟರ್, 2019-10 ರಲ್ಲಿ 25,920 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. ಹಾಗಾಗಿ ಸರ್ಕಾರ ನೋಂದಣಿ ಅವಧಿಯನ್ನು ಮಾರ್ಚ್ 31 ರವರೆಗೂ ವಿಸ್ತರಿಸಿರುವುದರಿಂದ ನಿತ್ಯ ನಲವತ್ತೈವತ್ತು ಮಂದಿ ರೈತರು ನೋಂದಣಿ ಮಾಡಿಸುತ್ತಿದ್ದು ಇನ್ನೂ ಸಾವಿರಾರು ಮಂದಿ ನೋಂದಣಿ ಮಾಡಿಕೊಳ್ಳುವ ರೈತರಿದ್ದಾರೆ.

     ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಕ್ವಿಂಟಲ್‍ಗೆ 1800 ರೂನಿಂದ 2,200 ರೂ. ವರೆಗೆ ಮಾರಾಟವಾಗುತ್ತಿರುವುದರಿಂದ ಸರ್ಕಾರದ ಪ್ರತಿ ಕ್ವಿಂಟಲ್‍ಗೆ 3150 ರೂ. ಬೆಂಬಲ ಬೆಲೆಗೆ ರಾಗಿ ಮಾರಲು ರೈತರು ಉತ್ಸುಕತೆ ತೋರುತ್ತಿದ್ದಾರೆ. ರಾತ್ರಿಯೇ ಮಾರುಕಟ್ಟೆಯಲ್ಲಿ ರಾಗಿ ತಂದು ಸರತಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಬೆಳಗ್ಗೆಯವರೆವಿಗೂ ಕಾದು ಮಾರುತ್ತಿದ್ದಾರೆ.

    ಖರೀದಿ ಪ್ರಕ್ರಿಯೆಯೂ ಸಹ ಬಿರುಸಿನಿಂದ ನಡೆಯುತ್ತಿದ್ದು ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಹಮಾಲಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಆದರೆ ಈಗ ಮಾರ್ಚಿ 31 ರ ನಂತರ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸುವ ಗಾಳಿ ಸುದ್ದಿ ರೈತರ ನಿದ್ದೆಗೆಡಿಸಿದೆ. ಹೊಸದಾಗಿ ನೊಂದಣಿ ಮಾಡಿಸುವವರಿರಲಿ ಈಗಾಗಲೇ ನೊಂದಣಿ ಮಾಡಿಸಿರುವವರ ಪೈಕಿ ಅರ್ಧದಷ್ಟು ರೈತರಿಂದ ಮಾತ್ರ ರಾಗಿ ಖರೀದಿಸಿದ್ದು ನಿತ್ಯ ಐವತ್ತರವತ್ತು ಮಂದಿ ಎಂದರೂ ಹತ್ತು ದಿನಕ್ಕೆ ಐನೂರ ರಿಂದ ಆರನೂರು ರೈತರ ರಾಗಿ ಮಾತ್ರ ಖರೀದಿಸಬಹುದಾಗಿದೆ. ಹಾಗಾಗಿ ನೊಂದಣಿ ಮಾಡಿಸಿರುವ ಎಲ್ಲಾ ರೈತರ ರಾಗಿ ಖರೀದಿ ಮಾಡಿ ನಂತರ ಸ್ಥಗಿತಗೊಳಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link