ಚಿತ್ರದುರ್ಗ;
ಕೊರೋನಾ ತಡೆಗಟ್ಟಲು ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಕೋಟೆನಾಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಮುಂಜಾನೆಯಿಂದಲೇ ಇಡೀ ಜಿಲ್ಲೆ ಅಕ್ಷರಶಃ ಸ್ಥಬ್ದವಾಗಿತ್ತು. ದಿನವೀಡಿ ಜನರು ಮನೆಯಿಂದ ಹೊರ ಬರಲಿಲ್ಲ. ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನತೆ ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸಿದರು
ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮದ ಭಾಗವಾಗಿ ಭಾನುವಾರ ಬೆಳಿಗ್ಗೆಯಿಂದಲೇ ಪ್ರಧಾನಿ ಮೋದಿ ಜನತಾ ಕಫ್ರ್ಯೂಗೆ ಕರೆ ನೀಡಿದ್ದರು. ಹೀಗಾಗಿ ಜನರು ಸಕಾರಾತ್ಮಕವಾಗಿ ಸ್ಪಂದಿಸಿ ಮನೆಯಿಂದ ಹೊರಬರದೆ ತಮ್ಮನ್ನು ತಾವೇ ದಿಗ್ಬಂಧನ ವಿಧಿಸಿಕೊಂಡು ಕರೋನಾ ತಡೆಗೆ ಸಾತ್ ನೀಡಿದರು
ಬೆಳಿಗ್ಗೆಯಿಂದಲೇ ನಗರದಲ್ಲಿ ವ್ಯಾಪಾರ ವಹಿವಾಟು ಕೂಡ ಬಂದ್ ಆಗಿದ್ದು, ಹೋಟೇಲ್, ಬಾರ್ ಅಂಡ್ ರೆಸ್ಟೊರೆಂಟ್, ಮಳಿಗೆಗಳು ಬಾಗಿಲು ಮುಚ್ಚಿದ್ದವು. ಕೆಎಸ್‍ಆರ್‍ಟಿಸಿ ಬಸ್, ಖಾಸಗಿ ಬಸ್‍ಗಳು ಸಂಚರಿಸಲಿಲ್ಲ. ಆಟೋ ರೀಕ್ಷಾಗಳು, ಟೆಂಪೊ ಕೂಡಾ ಬೀದಿಗಿಳಿಯಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಸಹ ಲಾರಿ ಇನ್ನಿತರೆ ವಾಹನಗಳ ಸಂಚಾರ ಬಹುತೇಕ ಇರಲಿಲ್ಲ.
ಕೊರೋನಾ ಭೀತಿ ಹಿನ್ನಲೆಯಲ್ಲಿ ಜನರೂ ಸಹ ಮನೆಬಿಟ್ಟು ಹೊರಬರಲಿಲ್ಲ. ಮನೆಯಲ್ಲಿದ್ದುಕೊಂಡೇ ಇಡೀ ದಿನ ಕಳೆದರು. ನಗರದ ಪ್ರಮುಖ ರಸ್ತೆಗಳು, ಸದಾ ಜನರಿಂದ ತುಂಬಿರುತ್ತಿದ್ದ ಸಂತೇ ಮೈದಾನ, ಮೆದೇಹಳ್ಳಿ ರಸ್ತೆ, ವಾಸವಿ ಮಹಲ್ ರಸ್ತೆ, ಲಕ್ಷ್ಮೀ ಬಜಾರ್‍ಗಳಲ್ಲೂ ಜನ ಸುಳಿದಾಡಲಿಲ್ಲ.
ಪ್ರವಾಸಿ ತಾಣ, ದೇವಸ್ಥಾನ, ಮಂದಿರಗಳು ಬಂದ್ ಆಗಿದ್ದವು. ತರಕಾರಿ, ಹೂವಿನ ಮಾರುಕಟ್ಟೆ, ದಿನಸಿ ಅಂಗಡಿಗಳೂ ಬಂದ್ ಆಗಿದ್ದವು. ಕೆಎಸ್‍ಆರ್‍ಟಿ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರೂ ಇರಲಿಲ್ಲ. ಆದರೆ ಎಂದಿನಂತೆ ಮೆಡಿಕಲ್ ಸ್ಟೋರ್‍ಗಳು ಮಾತ್ರ ಬಾಗಿಲು ತೆರೆದಿದ್ದವು. ಉಳಿದಂತೆ ಬಹುತೇಕ ಕ್ಲಿನಿಕ್‍ಗಳು ಸಹ ಭಾಗಿಲು ಮುಚ್ಚಿದ್ದವು ಹಳ್ಳಿಗಳಲ್ಲೂ ಸಹ ಕರೋನ ತಡೆಗೆ ಕರೆ ನೀಡಿದ್ದ ಜನತಾ ಕಫ್ರ್ಯೂಗೆ ವಾಪಕ ಬೆಂಬಲ ದೊರೆತಿದೆ. ಕೊರೋನಾ ವೈರಸ್ ಕುರಿತು ಜಿಲ್ಲಾಡಳಿತ ಸಾಕಷ್ಟು ಜಾಗೃತಿ ಮೂಡಿಸಿದ್ದು, ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿತ್ತು. ಈ ಕಾರಣಕ್ಕಾಗಿ ಗ್ರಾಮೀಣ ಜನರು ಸಹ ಮನೆಯಿಂದ ಹೊರಬರಲಿಲ್ಲ.
ಚಪ್ಪಾಳೆ ತಟ್ಟಿ ಬೆಂಬಲ
ಜನತಾ ಕಫ್ರ್ಯೂ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಮನೆಯಲ್ಲಿದ್ದ ಜನರು ಸಂಜೆಯಾಗುತ್ತಲೇ ಹೊರ ಬಂದು ಕುಟುಂಬದ ಸದಸ್ಯರೊಂದಿಗೆ ಚಪ್ಪಾಳೆ ತಟ್ಟುವುದರ ಮೂಲಕ ತಮ್ಮ ಬೆಂಬಲ ಮತ್ತು ಕೃತಜ್ಞತೆ ಸೂಚಿಸಿದರು
ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ತಮ್ಮ ನಿವಾಸದ ಆವರಣದಲ್ಲಿ ಕುಟುಂಬ ಸದಸ್ಯರೊಂದಿಗೆ ಚಪ್ಪಾಳೆ ತಟ್ಟುವ ಮೂಲಕ ಕರೋನಾ ತಡೆಗೆ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೆಯೇ ಹೊಳಲ್ಕೆರೆಯ ಶಾಸಕ ಎಂ.ಚಂದ್ರಪ್ಪ ಅವರು ಸಹ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂಜೆ ತಮ್ಮ ನಿವಾಸ ಬಳಿ ಚಪ್ಪಾಳೆ ತಟ್ಟುವುದರ ಮೂಲಕ ಕರೋನ ವಿರುದ್ದದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಎಂ.ಸಿ.ರಘುಚಂದನ್ ಸಹ ಇದಕ್ಕೆ ಬೆಂಬಲ ಸೂಚಿಸಿದರು
ಮೋದಿ ನೀಡಿದ್ದ ಕರೆಯ ಹಿನ್ನಲೆಯಲ್ಲಿ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇಡೀ ದಿನ ಮನೆಯಲ್ಲಿಯೇ ಉಳಿದುಕೊಂಡರು ನಗರದ ವಿವಿಧ ಪ್ರತಿಷ್ಠಿತ ಬಡಾವಣೆಗಳಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಬಿಜೆಪಿಯ ಕಾರ್ಯಕರ್ತರು ತಮ್ಮ ತಮ್ಮ ನಿವಾಸದ ಬಳಿ ಚಪ್ಪಾಳೆ ತಟ್ಟಿ ಕರೋನಾ ವಿರುದ್ದದ ಹೋರಾಟಕ್ಕೆ ಬೆಂಬಲ ಸೂಚಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ