ತುಮಕೂರು
ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಕಟ್ಟೆಚ್ಚರ ವಹಿಸಿ ಕರ್ನಾಟಕ ಲೌಕ್‍ಡೌನ್ ಮಾಡಿದ್ದರೂ ಸಹ ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿರುವ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಬೆಳಿಗ್ಗೆಯೇ ಜನ ಮುಗಿ ಬಿದ್ದಿದ್ದು, ವ್ಯಾಪಾರ ವಹಿವಾಟು ಬಲು ಜೋರಾಗಿಯೇ ನಡೆಯಿತು. .
ನಾಳೆ ಯುಗಾದಿ ಹಬ್ಬ ಇರುವುದರಿಂದ ಹಬ್ಬವನ್ನು ಸಾಂಪ್ರದಾಯ ಬದ್ಧವಾಗಿ ಆಚರಿಸಿಕೊಂಡು ಬಂದಿರುವ ಜನ ಬೆಳಿಗ್ಗೆಯೇ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಧಾವಿಸಿ ಹಬ್ಬಕ್ಕೆ ಹೂವು, ಹಣ್ಣ, ತರಕಾರಿ, ಮಾವಿನ ಎಲೆ, ಬೇವಿನ ಸೊಪ್ಪು ಖರೀದಿಯಲ್ಲಿ ತೊಡಗಿದ್ದರು.
ರಾಜ್ಯ ಸರ್ಕಾರ ಎಷ್ಟೇ ಕಟ್ಟೆಚ್ಚರ ನೀಡಿದ್ದರೂ ಸಹ ಜನತೆಗೆ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದೇ ಮುಖ್ಯ ಎಂಬಂತೆ ಇಂದು ಬೆಳಿಗ್ಗೆ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣುಗಳನ್ನು ಖರೀದಿಸುತ್ತಿದ್ದರು.ಹಾಗೆಯೇ ರೈತರು ಸಹ ತಮ್ಮ ಬೆಳೆದಿದ್ದ ಹೂವು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆ ಮಾರಾಟ ಮಾಡಲು ಮುಂಜಾನೆಯೇ ಬಂದಿದ್ದರು.
ಬೆಳಿಗ್ಗೆ 9.30ರ ವರೆಗೆ ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದಲೇ ವ್ಯಾಪಾರ ವಹಿವಾಟು ನಡೆದಿತ್ತು.
ಎಪಿಎಂಸಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಇರುವ ಮಾಹಿತಿ ತಿಳಿದ ತಹಶೀಲ್ದಾರ್ ಮೋಹನಕುಮಾರ್ ಪೊಲೀಸರೊಂದಿಗೆ ಮಾರುಕಟ್ಟೆಗೆ ತೆರಳಿ ಜಮಾಯಿಸಿದ್ದ ಜನರು ಮತ್ತು ರೈತರಿಗೆ ಕೊರೊನಾ ಸೋಂಕು ಹಡುವಿಕೆ ಬಗ್ಗೆ ತಿಳಿ ಹೇಳಿ, ಕೂಡಲೇ ಅಲ್ಲಿಂದ ತಾವು ಹೋಗುವಂತೆ ಸೂಚಿಸಿದರು.
ಜನಸಾಮಾನ್ಯರು ಸಹ ಮಾರುಕಟ್ಟೆಗೆ ಪೊಲೀಸರು ಆಗಮಿಸುತ್ತಿದ್ದಂತೆ ತಾವು ಖರೀದಿಸಿದ್ದ ತರಕಾರಿ ಹೂವು, ಹಣ್ಣುಗಳನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ