ತರಕಾರಿ ವಹಿವಾಟು ಇಳಿಮುಖ, ಹೂ-ಹಣ್ಣು ವ್ಯಾಪಾರ ಸ್ಥಗಿತ

ತುಮಕೂರು

      ತುಮಕೂರು ನಗರದ ಶಿರಾಗೇಟ್ ಹೊರವಲಯ ಇರುವ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆಯಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತರಕಾರಿ ವಹಿವಾಟು ಇಳಿಮುಖವಾಗಿದೆ. ಹಣ್ಣು ಮತ್ತು ಹೂವಿನ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿದೆ.

     ಲಾಕ್‍ಡೌನ್ ಹಿನ್ನೆಲೆಯಲ್ಲಿ ಯುಗಾದಿ ಹಬ್ಬವಿದ್ದರೂ ಅಂತಹ ಭರಾಟೆ ಕಂಡಿರಲಿಲ್ಲ. ಇದೀಗ ನಿರ್ಬಂಧಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೊಳ್ಳುವವರ ಮತ್ತು ಮಾರುವವರ ಸಂಖ್ಯೆ ಕಡಿಮೆಯಾಗಿರುವ ಕಾರಣ ಒಟ್ಟಾರೆ ತರಕಾರಿ ಮಾರಾಟದ ವಹಿವಾಟಿನಲ್ಲಿ ಇಳಿಮುಖ ಕಂಡಿದೆ.

     ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯನ್ನು ತೆರೆದಿರಬೇಕೇ? ಅಥವಾ ಮುಚ್ಚಬೇಕೇ? ಎಂಬ ಬಗ್ಗೆ ಎ.ಪಿ.ಎಂ.ಸಿ. ಆಡಳಿತ ಮತ್ತು ವ್ಯಾಪಾರಸ್ಥರ ಮಧ್ಯೆ ಚರ್ಚೆ ನಡೆದು, ಅಂತಿಮವಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಿಕೊಂಡು ವ್ಯಾಪಾರ ಮಾಡುವವರು ಮಾಡಬಹುದೆಂಬ ತೀರ್ಮಾನಕ್ಕೆ ಬರಲಾಗಿದೆ. ಅದರಂತೆ ಪ್ರಸ್ತುತ ತರಕಾರಿ ಮಾರುಕಟ್ಟೆ ಚಾಲ್ತಿಯಲ್ಲಿದೆ.

ಮಾಸ್ಕ್ ಧರಿಸದಿದ್ದರೆ ಒಳಕ್ಕೆ ಪ್ರವೇಶವಿಲ್ಲ

    ಇದೀಗ ಈ ಮಾರುಕಟ್ಟೆಯು ಮುಂಜಾನೆ 6 ಗಂಟೆಯಿಂದ ತೆರೆದಿರುತ್ತದೆ. ಬೆಳಗ್ಗೆ 9 ಗಂಟೆಯವರೆಗೂ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆಯಿಂದಲೂ ತೆರೆದಿರುತ್ತಾದರೂ, ಚಿಕ್ಕಪುಟ್ಟ ಚಿಲ್ಲರೆ ವ್ಯಾಪಾರಸ್ಥರು ಬಂದು ಖರೀದಿಸುತ್ತಿದ್ದಾರೆ. ಇನ್ನು ಈ ಮಾರುಕಟ್ಟೆಯನ್ನು ಯಾರೇ ಪ್ರವೇಶಿಸುವುದಿದ್ದರೂ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

     ಹೀಗಾಗಿ ಇಲ್ಲಿನ ಎಲ್ಲ ವ್ಯಾಪಾರಿಗಳು ಮತ್ತು ಗ್ರಾಹಕರು ಮಾಸ್ಕ್ ಧರಿಸಿರುತ್ತಾರೆ. ಪೊಲೀಸ್ ಸಿಬ್ಬಂದಿ ಗೇಟ್‍ಗಳಲ್ಲೇ ತಡೆದು, ಮಾಸ್ಕ್ ಇದ್ದವರನ್ನು ಮಾತ್ರ ಒಳಕ್ಕೆ ಬಿಡುತ್ತಿದ್ದಾರೆ. ಮಾರುಕಟ್ಟೆಯೊಳಗೆ ಗುಂಪುಗೂಡಲು ಅವಕಾಶ ಕೊಡುತ್ತಿಲ್ಲ. ಪ್ರತಿ ಅಂಗಡಿ ಮುಂದೆ ಗುರುತು ಹಾಕಲಾಗಿದ್ದು, ಅಂತರವನ್ನು ಕಾಯ್ದುಕೊಂಡೇ ಗ್ರಾಹಕರು ತರಕಾರಿ ಖರೀದಿಸುತ್ತಿದ್ದಾರೆ. ತಮ್ಮ-ತಮ್ಮ ಅಂಗಡಿಗಳ ಆವರಣವನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳುವಂತೆ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ.

ಮಾರುಕಟ್ಟೆಯಲ್ಲಿ ದರ

      ಪ್ರಸ್ತುತ ಮಾರುಕಟ್ಟೆಯಲ್ಲಿ ಶನಿವಾರದಂದು ಒಂದು ಕೆ.ಜಿ.ಗೆ ಟೊಮೋಟೋ-20 ರೂ., ಹುರಳಿಕಾಯಿ-20 ರಿಂದ 25 ರೂ., ಪಡವಲಕಾಯಿ-20 ರೂ., ಹೀರೇಕಾಯಿ-30 ರೂ., ಆಲೂಗಡ್ಡೆ-25 ರಿಂದ 30 ರೂ., ಕೊತ್ತಂಬರಿ ಸೊಪ್ಪು-40 ರೂ., ವಿವಿಧ ರೀತಿಯ ಸೊಪ್ಪುಗಳು- 50 ರಿಂದ 60 ರೂ., ಕ್ಯಾರೆಟ್-50 ರೂ, ಮೆಣಸಿನಕಾಯಿ-40 ರೂ. ದರ ಇದ್ದುದು ಕಂಡುಬಂದಿತು.

ಎಲ್ಲವೂ ಸ್ಥಳೀಯ ತರಕಾರಿಗಳು

      ಇಲ್ಲಿನ ಹಿರಿಯ ತರಕಾರಿ ವ್ಯಾಪಾರಿ ಹಾಗೂ ಮಾಜಿ ಕಾರ್ಪೊರೇಟರ್ ಟಿ.ಎಚ್. ವಾಸುದೇವ್ ಅವರು ಹೇಳುವ ಪ್ರಕಾರ, ಈಗ ಮಾರುಕಟ್ಟೆಯಲ್ಲಿ ಸ್ಥಳೀಯ ಬೆಳೆಗಾರರಿಂದ ಬಂದ ತರಕಾರಿಗಳೇ ಇವೆ. ತುಮಕೂರು ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳು, ಹೊನ್ನುಡಿಕೆ, ಗುಬ್ಬಿ, ನಿಟ್ಟೂರು, ಸೀತಕಲ್ಲು, ಕೊರಟಗೆರೆ, ಕೋಳಾಲ, ಮಾವತ್ತೂರು, ಊರ್ಡಿಗೆರೆ, ಡಾಬಸ್‍ಪೇಟೆ, ತ್ಯಾಮಗೊಂಡ್ಲು, ಕುಲುವನಹಳ್ಳಿ ಮೊದಲಾದ ಸ್ಥಳಗಳ ರೈತಾಪಿಗಳು ತಾವು ಬೆಳೆದ ಮೂಲಂಗಿ, ಕ್ಯಾರೆಟ್, ಹುರುಳಿಕಾಯಿ, ಮೆಣಸಿನಕಾಯಿ, ಹೀರೇಕಾಯಿ, ಸೊಪ್ಪು ಮೊದಲಾದ ಉತ್ಪನ್ನಗಳನ್ನು ಇಲ್ಲಿಗೆ ತಂದು ಮಾರುತ್ತಿದ್ದಾರೆ.

ಹೊರಗಡೆಯವು ಈಗಿಲ್ಲ

      ಲಾಕ್‍ಡೌನ್ ಕಾರಣದಿಂದ ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಕಡೆಯಿಂದ ಬರುತ್ತಿದ್ದ ಮೆಣಸಿನಕಾಯಿ, ಕ್ಯಾರೆಟ್, ಬೀಟ್‍ರೂಟ್, ನವಿಲುಕೋಸು ಮೊದಲಾದವು ಈಗ ಇಲ್ಲಿಗೆ ಬರುತ್ತಿಲ್ಲ. ಇನ್ನು ಆಂಧ್ರಪ್ರದೇಶದ ಕಡೆಯಿಂದ ಬರುತ್ತಿದ್ದ ಗೋರಿಕಾಯಿ, ಕಡಲೆಕಾಯಿ, ಬೆಂಡೇಕಾಯಿ, ತೊಂಡೆಕಾಯಿ, ಟೊಮ್ಯಾಟೊ ಮೊದಲಾದವು ಸಹ ಈಗ ಇಲ್ಲಿಗೆ ಸರಬರಾಜಾಗುತ್ತಿಲ್ಲ.

ಖರೀದಿಗೆ ಜನರು ಬರುತ್ತಿಲ್ಲ

      ತರಕಾರಿಯು ದೈನಂದಿನ ಬಳಕೆಯ ವಸ್ತು. ಪ್ರತಿಯೊಬ್ಬರಿಗೂ ಇದು ಬೇಕೇ ಬೇಕು. ಹೀಗಾಗಿ ಮಾರುಕಟ್ಟೆಯನ್ನು ಸರ್ಕಾರದ ನಿರ್ಬಂಧಗಳನ್ನು ಪಾಲಿಸಿಕೊಂಡು ತೆರೆದಿದ್ದರೂ, ಖರೀದಿಸಲು ಜನರು ಮೊದಲಿನಂತೆ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ರೈತರು ತಂದ ಉತ್ಪನ್ನಗಳು ಉಳಿಯುವಂತಾಗುತ್ತಿದೆ ಎಂದು ಮತ್ತೋರ್ವ ಹಿರಿಯ ತರಕಾರಿ ವ್ಯಾಪಾರಿ ಹಾಗೂ ಮಾಜಿ ನಗರಸಭಾಧ್ಯಕ್ಷ ಟಿ.ಎಚ್.ಜಯರಾಮ್ ಅವರು ಅಭಿಪ್ರಾಯಪಡುತ್ತಾರೆ.

ಹೂ-ಹಣ್ಣು ಮಾರಾಟ ಬಂದ್

     ಇದೀಗ ಈ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಯುಗಾದಿ ಹಬ್ಬದ ಬಳಿಕ ಇವೆರಡರ ಮಾರಾಟವನ್ನು ಇಲ್ಲಿ ನಿರ್ಬಂಧಿಸಲಾಗಿದೆ. ಹೂವು ಜೀವನಾವಶ್ಯಕ ವಸ್ತುವೇನೂ ಅಲ್ಲ ಎಂಬ ಕಾರಣದಿಂದ ಹೂವಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪ್ರಸ್ತುತ ಈ ಬೃಹತ್ ಮಾರುಕಟ್ಟೆ ಪ್ರಾಂಗಣದಲ್ಲಿ ಕೇವಲ 100 ರಿಂದ 150 ರಷ್ಟು ತರಕಾರಿ ವ್ಯಾಪಾರಿಗಳು ಮಾತ್ರ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯ ಗ್ರಾಹಕರ ಜೊತೆಗೆ ವಿವಿಧ ಬಡಾವಣೆಗಳ ಸಣ್ಣಪುಟ್ಟ ವ್ಯಾಪಾರಿಗಳು ಬಂದು ತರಕಾರಿ ಖರೀದಿಸಿ ಒಯ್ಯುತ್ತಿರುವುದು ಕಂಡುಬರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link