ಬೆಂಗಳೂರು
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್‍ಗಳನ್ನು ಹೆಚ್ಚಿಸಬೇಕಾದ ಅಗತ್ಯವಿರುವುದರಿಂದ ಭಾರತೀಯ ರೈಲ್ವೆಯು 5000 ಪ್ರಯಾಣಿಕ ಕೋಚ್‍ಗಳನ್ನು ಕೋವಿಡ್-19 ರೋಗಿಗಳ ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿದೆ. ರಾಜ್ಯದಲ್ಲೂ ಐಸೋಲೇಷನ್ ವಾರ್ಡ್ ಗಳ ಸಿದ್ಧತೆ ಭರದಿಂದ ಸಾಗುತ್ತಿದೆ.
ಈ ಕೋಚ್‍ಗಳ ಮಾದರಿಯನ್ನು ಭಾರತೀಯ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು, ಭಾರತೀಯ ರೈಲ್ವೆಯ ವೈದ್ಯಕೀಯ ಇಲಾಖೆ ಹಾಗೂ ಆಯುಷ್ಮಾನ್ ಭಾರತ್ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ದಿಪಡಿಸಲಾಗಿದೆ.
ಈ ಕೋಚ್‍ಗಳನ್ನು ಐಸೋಲೇಷನ್ ವಾರ್ಡ್‍ಗಳಲ್ಲಿ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳ ಅಗತ್ಯತೆಯನ್ನು ಪರಿಗಣಿಸಿ, ಮಾರ್ಪಡಿಸಲಾಗುತ್ತದೆ. ಈ ಕೋಚ್‍ಗಳು ಮೊಬೈಲ್ ಮತ್ತು ಲಾಪ್‍ಟಾಪ್ ಚಾರ್ಜರ್ ಪಾಯಿಂಟ್‍ಗಳನ್ನು, ಸೊಳ್ಳೆ ಪರದೆ ಮುಂತಾದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ತಂಗಲು ಸ್ಥಳಾವಕಾಶ ಸಹ ನೀಡಲಾಗಿದೆ. ಪ್ರತಿ ಕೋಚ್ ಎಂಟು ರೋಗಿಗಳಿಗೆ ಅಗತ್ಯವಿರುವ ಸವಲತ್ತುಗಳನ್ನು ಹೊಂದಿರುತ್ತದೆ.
ನೈರುತ್ಯ ರೈಲ್ವೆಯು 312 ಪ್ರಯಾಣಿಕರ ಕೋಚ್‍ಗಳನ್ನು ಐಸೋಲೇಷನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಲು ಗುರಿ ಹೊಂದಿದ್ದು,. ದಿನವೊಂದಕ್ಕೆ ಸರಾಸರಿ 20 ಕೋಚ್‍ಗಳನ್ನು ಪರಿರ್ತಿಸುವ ಕ್ಷಮತೆಯನ್ನು ನೈರುತ್ಯ ರೈಲ್ವೆಯು ಹೊಂದಿದೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ 138 ಮೈಸೂರಿನಲ್ಲಿ 138 ಹಾಗೂ ಬೆಂಗಳೂರಿನಲ್ಲಿ 36 ಕೋಚ್‍ಗಳನ್ನು ಪರಿವರ್ತಿಸುವ ಕಾಮಗಾರಿಯು ಜಾರಿಯಲ್ಲಿದೆ. ಒಟ್ಟಾರೆ 312 ಕೋಚ್‍ಗಳಲ್ಲಿ ಈಗಾಗಲೇ, 39 ಕೋಚ್‍ಗಳನ್ನು ಪರಿವರ್ತನೆಗೊಳಿಸಲಾಗಿದೆ.
ಸುಮಾರು 2500 ಮಂದಿಯನ್ನು ಪ್ರತ್ಯೇಕಿಸಲು ಈ ಕೋಚ್‍ಗಳು ನೆರವಿಗೆ ಬರುತ್ತವೆ. ಈ ಕೋಚ್‍ಗಳನ್ನು ರೈಲ್ವೆ ಸಂಪರ್ಕ ಹೊಂದಿರುವ ಯಾವುದೇ ಪ್ರದೇಶಕ್ಕೆ ಸ್ಥಳಾಂತರಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಮೂಲಸೌಲಭ್ಯ ಅಭಿವೃದ್ದಿ ಇಲಾಖೆ ಹಾಗೂ ನೈರುತ್ಯ ರೈಲ್ವೆಯು ಈ ಕೋಚ್‍ಗಳನ್ನು ಅಗತ್ಯದ ಸಂದರ್ಭದಲ್ಲಿ ಬಳಸಲು ಯೋಜಿಸಿದೆ ಎಂದು ಮೂಲಸೌಲಭ್ಯ ಅಭಿವೃದ್ದಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ