ಚಳ್ಳಕೆರೆ
ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯ ಮೀಸರಾಬಿಹಳ್ಳಿ, ಚನ್ನಮ್ಮನಾಗತಿಹಳ್ಳಿ, ಚೌಳೂರು ಗ್ರಾಮ ಪಂಚಾಯಿತಿ ಹಾಗೂ ಜಾಜೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಟಿ.ರಘುಮೂರ್ತಿ ಭಾನುವಾರ ಸರಣಿ ಸಭೆ ನಡೆಸಿ ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮೀರಸಾಬಿಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಟಿ.ರಘುಮೂರ್ತಿ, ಈಗಾಗಲೇ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸ್ವಚ್ಚ ಸೂಚನೆ ನೀಡಿ, ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಸೂಚನೆ ನೀಡಲಾಗಿದೆ. ಕೊರೋನಾ ವೈರಾಣು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಿದಲ್ಲಿ ಮಾತ್ರ ಇದರ ನಿಯಂತ್ರಣ ಸಾಧ್ಯವಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಅಂತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕಿದೆ. ಕಳೆದ ಸುಮಾರು 10 ದಿನಗಳಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರವಾಗಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಈ ವೈರಾಣು ವಿರುದ್ದ ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ನಾನು ಸಹ ನನ್ನಿವಾಳ, ದೊಡ್ಡೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ಇದರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಚೌಳೂರು ತಾಲ್ಲೂಕು ಪಂಚಾಯಿತಿ ಸದಸ್ಯ ಸಮರ್ಥರಾಯ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ ಆರೋಗ್ಯ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಗಳು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರೂ ಗ್ರಾಮೀಣ ಭಾಗದ ಬಹುತೇಕ ಜನತೆಗೆ ಕೊರೋನಾ ವೈರಾಣು ಅಪಾಯದ ಬಗ್ಗೆ ಹೆಚ್ಚು ತಿಳಿದಿಲ್ಲ. ಆರೋಗ್ಯ ಇಲಾಖೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಜನರ ಮನಪರಿವರ್ತನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾವಂತ ಯುವಕ, ಯುವತಿಯರು ಈ ಬಗ್ಗೆ ಜಾಗೃತಿಗೊಳಿಸುವಲ್ಲಿ ಮುಂದಾಗಬೇಕೆಂದರು. ಕೊರೋನಾ ವೈರಾಣು ನಿಯಂತ್ರಣಕ್ಕೆ ಪಕ್ಷ ಭೇದ ಮರೆತು ಎಲ್ಲರೂ ದೇಶದ ಹಿತಕ್ಕಾಗಿ ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು ಎಂದರು.
ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಮೀರಸಾಬಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪಕ್ಕತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಕವಿತಾ, ಪಿಡಿಒ ಶಶಿರಾಜ್, ಚನ್ನಮನಾಗತಿಹಳ್ಳಿ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ನಾಗರಾಜು, ಪಿಡಿಒ ಓಬಣ್ಣ, ಚೌಳೂರು ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮಬಾಗೂರಪ್ಪ, ಉಪಾಧ್ಯಕ್ಷೆ ದುರುಗಮ್ಮಶಿವಣ್ಣ, ಪಿಡಿಒ ಮುತ್ತುರಾಜ್, ಜಾಜೂರು ಪಂಚಾಯಿತಿ ಅಧ್ಯಕ್ಷೆ ಭೀಮಕ್ಕ, ಉಪಾಧ್ಯಕ್ಷೆ ಓಬಕ್ಕ, ಪಿಡಿಒ ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








