ತುಮಕೂರು
ತುಮಕೂರು ತಾಲ್ಲೂಕು ಅಜ್ಜಗೊಂಡನಹಳ್ಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೋಮವಾರ ಬೆಳಗ್ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಅಲ್ಲಿದ್ದು, ಇಡೀ ಘಟಕವನ್ನು ಸಮಗ್ರವಾಗಿ ವೀಕ್ಷಿಸಿದರು. ಅಲ್ಲಿನ ವ್ಯವಸ್ಥೆಗಳನ್ನು ಗಮನಿಸಿದ ಅವರು, ಆಗಬೇಕಾಗಿರುವ ಸೌಲಭ್ಯಗಳ ಬಗ್ಗೆ ಮತ್ತು ಕೈಗೊಳ್ಳಬೇಕಾದ ಸುರಕ್ಷತೆಗಳ ಬಗ್ಗೆ ಜೊತೆಯಲ್ಲಿದ್ದ ಮಹಾನಗರ ಅಧಿಕಾರಿಗಳ ಜೊತೆ ಚರ್ಚಿಸಿದರು.
ಮಹಾನಗರ ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಹೇಶ್, ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಾದ ಆಶಾ ಮತ್ತು ರಾಯ್ಕರ್, ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಾದ ವಸಂತ್ ಮತ್ತು ಅಶ್ವಿನ್, ಪರಿಸರ ಇಂಜಿನಿಯರ್‍ಗಳಾದ ಕೃಷ್ಣಮೂರ್ತಿ ಮತ್ತು ಮೃತ್ಯುಂಜಯ, ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಹಾಗೂ ಘಟಕ ನಿರ್ವಹಣೆ ಗುತ್ತಿಗೆದಾರ ಕಂಪನಿಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಆಯುಕ್ತರಿಗೆ ವಿವಿಧ ಮಾಹಿತಿಗಳನ್ನು ನೀಡಿದರು.
ಘಟಕದ ನಿರ್ವಹಣೆಯ ಒಂದು ವರ್ಷದ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ಗಣೇಶ್ ಶಂಕರ್ ಎನ್ವಿರಾನ್‍ಮೆಂಟಲ್ ಸಲ್ಯೂಷನ್ಸ್ ಕಂಪನಿಯ ಅವಧಿಯು ಪೂರ್ಣಗೊಂಡಿದ್ದು, ಪಾಲಿಕೆಯು ಹೊಸ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಸುತ್ತಿದೆ. ಅವೆಲ್ಲವೂ ಪೂರ್ಣವಾಗುವವರೆಗೂ ಇದೇ ಕಂಪನಿಯು ನಿರ್ವಹಣೆಯನ್ನು ಮುಂದುವರೆಸಲಿದೆ. ಇತ್ತೀಚೆಗೆ ಘಟಕದಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡು ಪ್ಲಾಸ್ಟಿಕ್ ರಾಶಿ ಹೊತ್ತಿ ಉರಿದ ಘಟನೆಯ ಹಿನ್ನೆಲೆಯಲ್ಲಿ ಆಯುಕ್ತರ ಈ ಭೇಟಿ ಮಹತ್ವ ಪಡೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
