ಜಿನಿವಾ:
ಕೊರೋನಾವನ್ನು ರಾಜಕೀಯವಾಗಿ ಬಳಸಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಕೊರೋನಾ ವೈರಸ್ ಸೋಂಕು ನಿಭಾಯಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಪಕ್ಷಪಾತ ಅನುಸರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರೇ ಇದೀಗ ಹೇಳಿಕೆ ನೀಡಿದ್ದಾರೆ.ಕೊರೋನಾ ಸೋಂಕನ್ನು ನಿವಾರಿಸಲು ಎಲ್ಲರೂ ಒಟ್ಟಾಗಿ ಹೋರಾಡಬೇಕೆ ಹೊರತು ಪರಸ್ಪರ ದೂಷಣೆಯಲ್ಲಿ ಈ ಸಂದರ್ಭದಲ್ಲಿ ತೊಡಗಿಕೊಳ್ಳಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಾಗಿರುವ ಟೆಡ್ರೊಸ್ ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾ ದೇಶಗಳು ಒಗ್ಗಟ್ಟಿನಿಂದ ಈ ಸಾಂಕ್ರಾಮಿಕ ವಿರುದ್ಧ ಹೋರಾಡಬೇಕು. ವಿಶ್ವ ಆರೋಗ್ಯ ಸಂಸ್ಥೆ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿದೆ. ವಿಶ್ವದ ಎಲ್ಲಾ ದೇಶಗಳ ರಾಜಕೀಯ ಪಕ್ಷಗಳ ಗಮನ ಜನರ ಸುರಕ್ಷತೆ ಆಗಬೇಕು. ವೈರಸ್ ವಿಷಯದಲ್ಲಿ ರಾಜಕೀಯ ಮಾಡಿ ಸಮಯ ಹಾಳು ಮಾಡಬೇಡಿ. ವಿಶ್ವಸಂಸ್ಥೆಯಿಂದ ಹೆಚ್ಚಿನ ಅನುದಾನ, ಸಹಕಾರ ಬೇಕಾದರೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಟ್ರಂಪ್ ಗೆ ಪರೋಕ್ಷವಾಗಿ ಬುದ್ಧಿಮಾತು ಹೇಳಿದ್ದಾರೆ.