ಜಿನಿವಾ:
ಈ ಹಿಂದೆ ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ಸಮುದಾಯಿಕ ಪ್ರಸರಣ ಹಂತ ತಲುಪಿದೆ ಎಂದು ಪ್ರಕಟಿಸಿ 135 ಕೋಟಿ ಮಂದಿ ಭಾರತೀಯರಲ್ಲಿ ತಲ್ಲಣ ಮೂಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ಈಗ ತಾನು ತಪ್ಪಾಗಿ ಅಂದಾಜು ಮಾಡಿದ್ದಾಗಿ, ತಾನು ಮಾಡಿದ್ದು ಪ್ರಮಾದ ಎಂದು ಒಪ್ಪಿಕೊಂಡು, ಭಾರತ ಇನ್ನೂ ಸುರಕ್ಷಿತ ವಲಯದಲ್ಲಿಯೇ ಇದೆ ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ ಕೊರೋನಾ ವೈರಾಣು ಹರಡುವಿಕೆ ಸಮುದಾಯ ಪ್ರಸರಣ(ಮೂರನೇ ಹಂತ) ಮಟ್ಟಕ್ಕೆ ತಲುಪಿಲ್ಲ ಎಂದು ಶುಕ್ರವಾರ ಬಿಡುಗಡೆಗೊಳಿಸಿರುವ ತನ್ನ ಪರಿಷ್ಕೃತ ವರದಿಯಲ್ಲಿ ತಿಳಿಸಿದೆ.
ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಾಣುವನ್ನು ಗುರುತಿಸುವಲ್ಲಿ ವಿಳಂಬದ ಜತೆಗೆ, ಇಡೀ ಜಗತ್ತಿನ ದೇಶಗಳನ್ನು ಜಾಗೃತಗೊಳಿಸುವ ಸಕಾಲಿಕ ಕ್ರಮ ಕೈಗೊಳ್ಳುವಲ್ಲಿ ಬಹುತೇಕ ವಿಫಲಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ, ಇನ್ನೂ ತನ್ನ ತಪ್ಪುಗಳನ್ನು ಮುಂದುವರಿಸುತ್ತಲೇ ಇದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ಷಮತೆ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸುತ್ತಿರುವಾಗಲೇ, ಸಂಸ್ಥೆಯ ಕಾರ್ಯಕ್ಷಮತೆ ಯಾವ ರೀತಿಯಲ್ಲೂ ಸುಧಾರಣೆ ಕಂಡುಬಂದಿಲ್ಲ ಎಂಬ ಸೂಚನೆಗಳು ಕಂಡುಬರುತ್ತಿವೆ. ವಾರದ ಹಿಂದೆ ಭಾರತ ವಿಷಯದಲ್ಲಿ ತಪ್ಪು ವರದಿ ನೀಡಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಈಗ ತಪ್ಪೊಪ್ಪಿಕೊಂಡಿದೆ.
ಭಾರತದಲ್ಲಿ ಸೋಂಕು ಸಮುದಾಯ ಪ್ರಸರಣ ಹಂತ ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಿಂದಿನ ವರದಿಯಲ್ಲಿ, ಸಮುದಾಯ ಪ್ರಸರಣ ಹಂತ ತಲುಪಿದೆ ಎಂದು ಹೇಳಿರುವುದು ತಪ್ಪು ಎಂದು ಒಪ್ಪಿಕೊಂಡಿದೆ. ತನ್ನ ಪರಿಷ್ಕೃತ ವರದಿಯಲ್ಲಿ ಭಾರತದ ಕೆಲ ಪ್ರದೇಶಗಳಲ್ಲಿ ಮಾತ್ರ ಕೊರೋನಾ ಸೋಂಕು ಕಂಡುಬಂದಿದೆ ಎಂಬ ಸ್ಪಷ್ಟೀಕರಣ ನೀಡಿದೆ. ಆದರೆ, ಭಾರತಕ್ಕೆ ಕೊರೋನಾದಿಂದ ಬೆದರಿಕೆಯಿಲ್ಲ ಎಂದು ಭಾವಿಸುವುದು ತಪ್ಪು ಎಂದು ಸ್ಪಷ್ಟಪಡಿಸಿದೆ.
ಈ ಹಂತದಲ್ಲಿ ಕೊರೋನಾ ವೈರಾಣು ಸಂಪೂರ್ಣ ನಿಗ್ರಹಿಸಬೇಕೆಂದು ಅದು ಸೂಚಿಸಿದೆ. ಲಾಕ್ ಡೌನ್ ಜತೆಗೆ ಇನ್ನಿತರ ಕಠಿಣ ನಿಯಂತ್ರಣ ಕ್ರಮಗಳನ್ನು ಕಟ್ಟು ನಿಟ್ಟಾಗಿ ಕೆಲ ಸಮಯದವರೆಗೆ ಮುಂದುವರಿಸಿದರೆ, ಕೊರೋನಾ ವೈರಾಣು ಹರಡುವಿಕೆ ಮೂರನೇ ಹಂತ ತಲುಪುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.