ಬೆಂಗಳೂರು
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ಡ್ಡೌನ್ ಮಾಡಲಾಗಿರುವ ಪಾದರಾಯನಪುರ ಹಾಗೂ ಬಾಪೂಜಿ ನಗರಗಳಲ್ಲಿ ಪೊಲೀಸರು ಡ್ರೋಣ್ ಕ್ಯಾಮರಾ ಕಣ್ಗಾವಲು ಹಾಕಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪಾದರಾಯನಪುರ ಹಾಗೂ ಬಾಪೂಜಿ ನಗರದ ಎಲ್ಲ ಬಡಾವಣೆಗಳಲ್ಲಿ ಅತ್ಯಾಧುನಿಕ ಡ್ರೋಣ್ ಕ್ಯಾಮರಾ ಹಾರಾಟ ನಡೆಸಿದ್ದು, ಮನೆಯಿಂದ ಹೊರ ಬರುವವರ ಮಾಹಿತಿಯನ್ನು ಕೂಡಲೇ ಪೊಲೀಸರಿಗೆ ರವಾನಿಸಲಿದೆ.ಸೀಲ್ಡ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಸುತ್ತಾಡುವವರ ಮಾಹಿತಿ ನೀಡಿದ ತಕ್ಷಣ ಅಲ್ಲಿಗೆ ಧಾವಿಸುವ ಪೊಲೀಸರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದು, ಒಂದು ವೇಳೆ ಹೊರ ಬಂದವರ ಮೇಲೆ ಸೀಲ್ಡ್ಡೌನ್ ಉಲ್ಲಂಘನೆಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎರಡೂ ಪ್ರದೇಶದ ಎಲ್ಲ ರಸ್ತೆಗಳನ್ನು ಬ್ಲಾಕ್ ಮಾಡಲಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸೀಲ್ಡ್ಡೌನ್ ಇದ್ದರೂ ಇಂದು ಬೆಳಿಗ್ಗೆ ಉಚಿತ ಹಾಲು ಪಡೆಯಲು ಜನತೆ ಮುಗಿ ಬಿದ್ದಿದ್ದು, ಅವರನ್ನು ಚದುರಿಸಿ ಮನೆಗೆ ಕಳುಹಿಸಿ ಮನೆ ಬಾಗಿಲಿಗೆ ಹಾಲಿನ ವ್ಯವಸ್ಥೆ ಮಾಡಲಾಗಿದೆ.
ವಾರ್ಡ್ನಲ್ಲಿರುವ ಎಲ್ಲ ಮೆಡಿಕಲ್ ಸ್ಟೋರ್ಗಳೂ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಯನ್ನು ಬಂದ್ ಮಾಡಲಾಗಿದ್ದು, ಇಡೀ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತ ಕಟ್ಟೆಚ್ಚರ ವಹಿಸಿದ್ದಾರೆ.ಆದರೂ ಜನರು ಮಾತ್ರ ಎಂದಿನಂತೆ ಕುಂಟು ನೆಪಗಳನ್ನು ಹೇಳುತ್ತಾ ಬಡವಾಣೆಗಳಲ್ಲಿ ತಿರುಗಾಡುತ್ತಿದ್ದರೆ, ಕೆಲವರು ಉಚಿತ ಹಾಲು ಪಡೆಯಲು ಮುಗಿಬೀಳುತ್ತಿದ್ದು ಅವರುಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ
ಪಾದರಾಯನಪುರದ ವಾರ್ಡ್ ನಂಬರ್ 134, 135, 136 ಜನರು ಎಂದಿನಂತೆ ಮನೆಯಿಂದ ಹೊರ ಬರುತ್ತಿದ್ದಾರೆ. ಸೀಲ್ಡೌನ್ ಆಗಿದ್ದರೂ ಜನರು ಮಾತ್ರ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿಲ್ಲ. ವಾಹನಗಳಲ್ಲಿ ಜನ ಹೊರಗೆ ಬಂದು ಬೆಂಗಳೂರಿನ ಬೇರೆ ಏರಿಯಾಗಳತ್ತ ಹೊರಟ್ಟಿದ್ದಾರೆ. ಇನ್ನು ಖಾಸಗಿ ವಾಹನಗಳು ಮತ್ತು ಆಟೋ ಚಾಲಕರು ಲಾಕ್ಡೌನ್ ಲಾಭ ಪಡೆಯಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದಾರೆ.
ಇನ್ನು ಬಾಪೂಜಿ ನಗರದಲ್ಲಿ ಜನರು ಉಚಿತ ಹಾಲು ಪಡೆಯಲು ಬಂದು ಕ್ಯೂ ನಿಂತಿರುವ ದೃಶ್ಯಗಳು ಶನಿವಾರ ಬೆಳಗ್ಗೆ ಕಂಡುಬಂದವು. ಹಾಲು ಪಡೆಯಬೇಕೆಂದು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುತ್ತಿಲ್ಲ. ಬಾಪೂಜಿ ನಗರದ ಬಹುತೇಕರಿಗೆ ಉಚಿತ ಹಾಲು ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಪೋರೇಟರ್ ಅಜ್ಮಲ್ ಬೇಗ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
