ಚಳ್ಳಕೆರೆ
ತಾಲ್ಲೂಕಿನ ಜನತೆಗೆ ಅಪರೂಪವಾಗಿದ್ದ ಆಲಿಕಲ್ಲು ಮಳೆ ಹಾಗೂ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ನೂರಾರು ಎಕರೆ ಪ್ರದೇಶಗಳಲ್ಲಿ ಕಲ್ಲಂಗಡಿ, ಬಾಳೆ, ಕರಬೂಜ, ಪಪ್ಪಾಯಿ, ಟಮೋಟ ಈರುಳ್ಳಿ ಮುಂತಾದ ಬೆಳೆಗಳಿಗೆ ಹಾನಿಯಾಗಿದ್ದು, ಇದರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ನಾನೇ ನೇರವಾಗಿ ಗ್ರಾಮೀಣ ಭಾಗದ ಜಮೀನುಗಳಿಗೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಮಕ್ಷಮದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ಮೀರಸಾಬಿಹಳ್ಳಿ, ಕರೀಕೆರೆ, ನಾಗಗೊಂಡನಹಳ್ಳಿ, ಕಾಲುವೇಹಳ್ಳಿ, ಹಾಲಗೊಂಡನಹಳ್ಳಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಬೆಳೆಗಳಿಗೆ ಹಾನಿಯಾದ ಬಗ್ಗೆ ರೈತರಿಂದ ಮಾಹಿತಿ ಪಡೆದು ಅಧಿಕಾರಿಗಳಿಗೆ ಸೂಕ್ತ ವರದಿ ತಯಾರಿಸುವಂತೆ ಸೂಚನೆ ನೀಡಿದರು.
ಕಾಲುವೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈರುಳ್ಳಿ ಹಾಗೂ ಟಮೋಟ ಬೆಳೆ ಮಳೆಗೆ ಸಿಕ್ಕಿ ಬೆಲೆ ಇಲ್ಲದೆ, ವ್ಯಾಪಾರವಾಗದೆ ಜಮೀನಲ್ಲಿದ್ದನ್ನು ಕಂಡ ಶಾಸಕರು ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಸಹಾಯಕ ಕೃಷಿ ನಿರ್ದೇಶಕ ಡಾ.ಮೋಹನ್‍ಕುಮಾರ್ ರವರಿಗೆ ಸೂಚನೆ ನೀಡಿ ತಾಲ್ಲೂಕಿನ ಎಲ್ಲಾ ರೈತರಿಗೂ ಸೂಕ್ತ ಪರಿಹಾರ ದೊರಕುವ ನಿಟ್ಟಿನಲ್ಲಿ ಅಧಿಕಾರಿಗಳು ವರದಿ ನೀಡುವಂತೆ ಸೂಚಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕಳೆದ ಸುಮಾರು 20 ದಿನದಿಂದ ಶಾಸಕರು ನಿರಂತರವಾಗಿ ನಗರ ಹಾಗೂ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವುದಲ್ಲದೆ, ಕೊರೋನಾ ನಿಯಂತ್ರಣಕ್ಕೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ದಿನವೂ ಸಹ ಗ್ರಾಮಕ್ಕೆ ಬಂದು ಬೆಳೆಯ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದು, ಎಲ್ಲಾ ರೈತ ಸಮುದಾಯಕ್ಕೆ ತೃಪ್ತಿ ತಂದಿದೆ ಎಂದರು. ಹಾಲಗೊಂಡನಹಳ್ಳಿ ರೈತ ತಿಪ್ಪೇಸ್ವಾಮಿ ಸಹ ತನ್ನ 22 ಎಕರೆ ಪ್ರದೇಶದಲ್ಲಿ ಕರಬೂಜ ಬೆಳೆದಿದ್ದು, ಬೆಲೆ ಇಲ್ಲದೆ ಜಮೀನಲ್ಲೇ ಇರುವ ಬಗ್ಗೆ ಬೇಸರ ವ್ಯಕ್ತ ಪಡಿಸಿ ಶಾಸಕರಿಗೆ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ