ವೈ.ಎನ್.ಹೊಸಕೋಟೆ :
ಗ್ರಾಮದ ಮಸೀದಿ ರಸ್ತೆಯಲ್ಲಿ ಕೋಳಿ ಅಂಗಡಿಗಳು ಕೇಂದ್ರೀಕರಣಗೊಂಡಿದ್ದು ಅವುಗಳನ್ನು ಶಾಶ್ವತವಾಗಿ ಗ್ರಾಮದ ಹೊರವಲಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕರು ಅರ್ಜಿ ನೀಡಿ ಗ್ರಾಮಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.
ಗ್ರಾಮದ ಸಿ ವಿಭಾಗದಲ್ಲಿರುವ ಮಸೀದಿ ರಸ್ತೆ ಮತ್ತು ಮೊಹರಂ ಮಂದಿರ ಪ್ರದೇಶದಲ್ಲಿ ಹಲವಾರು ಕೋಳಿ ಅಂಗಡಿಗಳು ತೆರೆಯಲಾಗಿದೆ. ಪ್ರತಿನಿತ್ಯ ನೂರಾರು ಕೋಳಿಗಳ ಮಾಂಸ ವ್ಯಾಪಾರ ಮಾಡುವ ಮಾಲೀಕರು ಕೋಳಿಯ ತುಪ್ಪಟ ಮತ್ತು ತ್ಯಾಜ್ಯಗಳನ್ನು ಮನೆಗಳ ನೀರು ಹಾದುಹೋಗುವ ಚರಂಡಿಗಳಲ್ಲಿ ಹಾಕುತ್ತಿದ್ದಾರೆ. ಇದರಿಂದ ಚರಂಡಿಗಳು ತುಂಬಿ ಗಲೀಜು ಕಟ್ಟಿಕೊಳ್ಳುತ್ತಿವೆ. ಸೊಳ್ಳೆ ನೊಣಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.
ಈ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಮುದುಕರು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರಲಾಗುತ್ತಿದೆ. ಕೊರೋನಾ ಮತ್ತು ಹಕ್ಕಿಜ್ವರ ಹರಡುತ್ತಿರುವ ಈ ಸಂದರ್ಭದಲ್ಲಿ ಕೋಳಿ ವ್ಯಾಪಾರದಿಂದ ಹೆಚ್ಚು ಅಪಾಯ ಆಗಬಹುದು. ಹಾಗಾಗಿ ಗ್ರಾಮಪಂಚಾಯಿತಿಯವರು ಕೋಳಿ ಅಂಗಡಿಗಳನ್ನು ಇಲ್ಲಿಂದ ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಸುಮಾರು 72 ಜನ ಸಾರ್ವಜನಿಕರು ಅರ್ಜಿಗೆ ಸಹಿ ಮಾಡಿ ಒತ್ತಾಯಿಸಿದ್ದಾರೆ.
ಪಿಡಿಓ ತಿಪ್ಪಣ್ಣ ಈ ಬಗ್ಗೆ ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಕೋಳಿ ಅಂಗಡಿಗಳನ್ನು ತೆರೆಯದಂತೆ ಈ ಮೊದಲೇ ಸೂಚಿಸಲಾಗಿದೆ. ಪ್ರಸ್ತುತ ಸಾರ್ವಜನಿಕರು ನೀಡಿರುವ ಅರ್ಜಿಯನ್ನು ಪರಿಗಣಿಸಿ ಎಲ್ಲಾ ಕೋಳಿ ಅಂಗಡಿ ಮಾಲೀಕರಿಗೆ ಕೋಳಿ ವ್ಯಾಪಾರ ಮಾಡದಂತೆ ನೋಟೀಸು ನೀಡಿಲಾಗಿದೆ. ಒಂದು ವೇಳೆ ಸರ್ಕಾರಿ ಆದೇಶವನ್ನು ಪಾಲಿಸದೆ, ಕೋಳಿ ಅಂಗಡಿ ತೆರೆದು ವ್ಯಾಪಾರ ಮಾಡಿದರೆ ಇಪ್ಪತ್ತೈದು ಸಾವಿರದವರೆಗೆ ದಂಡ ವಿಧಿಸಲಾಗುವುದು. ಅಂಗಡಿಗಳ ಸ್ಥಳಾಂತರದ ಬಗ್ಗೆ ಕೊರೋನಾ ಸಮಸ್ಯೆ ಮುಗಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








