ತುಮಕೂರು
ತುಮಕೂರು ನಗರದಲ್ಲಿ ಪ್ರಸ್ತುತ ನಾಲ್ಕು ಇಂದಿರಾ ಕ್ಯಾಂಟೀನ್‍ಗಳಿದ್ದು, ಇದೀಗ ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಇಲ್ಲಿಗೆ ಉಪಹಾರ ಹಾಗೂ ಊಟಕ್ಕೆ ಬರುವ ಗ್ರಾಹಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ನಗರದಲ್ಲಿ ಒಟ್ಟು ನಾಲ್ಕು ಇಂದಿರಾ ಕ್ಯಾಂಟೀನ್‍ಗಳಿವೆ. ರೈಲು ನಿಲ್ದಾಣದ ರಸ್ತೆಯಲ್ಲಿ, ಕ್ಯಾತಸಂದ್ರದಲ್ಲಿ, ಶಿರಾಗೇಟ್‍ನಲ್ಲಿ ಮತ್ತು ಜೆ.ಸಿ. ರಸ್ತೆಯಲ್ಲಿ (ಕಲಾಕ್ಷೇತ್ರದ ಪಕ್ಕ) ಇಂದಿರಾ ಕ್ಯಾಂಟೀನ್‍ಗಳಿವೆ. ರೈಲು ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ಹೊಂದಿಕೊಂಡಂತೆ ಊಟ ಮತ್ತು ಉಪಹಾರ ತಯಾರಿಸುವ ಮಾಸ್ಟರ್ ಕಿಚನ್ ಇದೆ. ಇಲ್ಲಿ ಆಹಾರ ತಯಾರಾಗಿ ಎಲ್ಲ ಕ್ಯಾಂಟೀನ್‍ಗಳಿಗೆ ಕಂಟೈನರ್‍ಗಳಲ್ಲಿ ಸರಬರಾಜಾಗಲಿದೆ. ಆದರೆ ಲಾಕ್‍ಡೌನ್ ಕಾರಣದಿಂದ ಇದೀಗ ಇವೆಲ್ಲ ಬಹುತೇಕ ಖಾಲಿ -ಖಾಲಿ ಆಗುತ್ತಿದೆ. ಜನ-ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಹಾಗೂ ಕೂಲಿ ಕಾರ್ಮಿಕರೆಲ್ಲ ತಮ್ಮ ಊರುಗಳತ್ತ ನಿರ್ಗಮಿಸಿರುವುದರಿಂದ ಇಂದಿರಾ ಕ್ಯಾಂಟೀನ್ ಬಳಸುವವರ ಸಂಖ್ಯೆ ಕ್ಷೀಣಿಸಿದೆ.
“ಬೆಳಗ್ಗೆ 7-30 ರಿಂದ 10 ಗಂಟೆಯವರೆಗೂ ಉಪಹಾರ ಲಭಿಸುತ್ತದೆ. ಆದರೆ ಈಗ ಪ್ರತಿ ಕ್ಯಾಂಟೀನ್‍ನಲ್ಲಿ ಗರಿಷ್ಟ 50 ಸಂಖ್ಯೆಯ ಉಪಹಾರ ವಿಕ್ರಯವಾಗುತ್ತಿದೆ. ಅಂದರೆ ನಾಲ್ಕು ಕ್ಯಾಂಟೀನ್‍ಗಳಿಂದ ಗರಿಷ್ಟ 200 ಸಂಖ್ಯೆಯಷ್ಟು ಉಪಹಾರ ವಿತರಣೆಗೊಳ್ಳುತ್ತಿದೆ. ಮಧ್ಯಾಹ್ನ 12-30 ರಿಂದ 2-30 ರವರೆಗೆ ಮತ್ತು ರಾತ್ರಿ 7 ರಿಂದ 9 ಗಂಟೆಯವರೆಗೆ ಊಟ ವಿತರಣೆಯಾಗುತ್ತದೆ. ಈಗ ಪ್ರತಿ ಕ್ಯಾಂಟೀನ್‍ನಲ್ಲಿ ಸರಾಸರಿ 20 ರಿಂದ 30 ರಷ್ಟು ಮಾತ್ರ ಊಟ ವಿತರಣೆಗೊಳ್ಳುತ್ತಿದೆ.
ಅಂದರೆ ನಾಲ್ಕು ಕ್ಯಾಂಟೀನ್‍ಗಳಿಂದ ಮಧ್ಯಾಹ್ನ ಮತ್ತು ರಾತ್ರಿ ಸರಾಸರಿ 80 ರಿಂದ 120 ರಷ್ಟು ಮಾತ್ರ ಊಟವು ವಿತರಣೆ ಆಗುತ್ತಿದೆ. ಲಾಕ್‍ಡೌನ್‍ಗೆ ಮೊದಲಿದ್ದ ಪರಿಸ್ಥಿತಿಗಿಂತ ಈಗ ಜನದಟ್ಟಣಿ ಕಡಿಮೆಯಾಗಿದೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತುಮಕೂರು ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ ಮಾಹಿತಿ ನೀಡಿದರು.
“ಕ್ಯಾಂಟೀನ್‍ಗೆ ಬರುವವರ ಸಂಖ್ಯೆ ಕಡಿಮೆಯಾಗಿದ್ದರೂ, ಉಪಹಾರ ಮತ್ತು ಊಟದ ಮೆನುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮೊದಲಿನಂತೆಯೇ ಆಹಾರ ತಯಾರಾಗುತ್ತಿದೆ” ಎಂದೂ ಅವರು ಹೇಳಿದ್ದಾರೆ.ಕ್ಯಾಂಟೀನ್‍ಗೆ ಬರುವವರ ಸಂಖ್ಯೆ ಕಡಿಮೆಯಾಗಿರುವಂತೆಯೇ ಕ್ಯಾಂಟೀನ್ ಒಳಗೆ ಕೆಲಸ ನಿರ್ವಹಿಸುವವರ ಸಂಖ್ಯೆಯೂ ಕಡಿಮೆ ಇದೆ. ನಗರದಲ್ಲಿ ಹೋಟೆಲ್‍ಗಳು ಇನ್ನೂ ಸೇವೆ ಆರಂಭಿಸಿಲ್ಲದಿರುವ ಕಾರಣದಿಂದ, ಉಪಹಾರ ಮತ್ತು ಊಟಕ್ಕೆ ಹೋಟೆಲ್‍ಗಳನ್ನೇ ಅವಲಂಬಿಸಿದ್ದವರು ಅನಿವಾರ್ಯವಾಗಿ ಈಗ ಇಂದಿರಾ ಕ್ಯಾಂಟೀನ್‍ಗಳಿಗೆ ಬರುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
