ದಾವಣಗೆರೆ:
ಕೊರೋನಾ ಸೋಂಕು ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಲಾಕ್‍ಡೌನ್ ವಿಸ್ತರಿಸಿದ ಬೆನ್ನಲ್ಲೇ ಇಷ್ಟು ದಿನಗಳ ಕಾಲ ಗೃಹಬಂಧನದಲ್ಲಿದ್ದು, ಚಡಪಡಿಸುತ್ತಿದ್ದ ಜನರು ಬುಧವಾರ ನಗರದ ರಸ್ತೆಯಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬುಧವಾರ ಬೆಳಿಗ್ಗೆಯಿಂದಲೇ ಸಾರ್ವಜನಿಕರು ನಗರದ ಪ್ರಮುಖ ರಸ್ತೆ, ನಗರದಲ್ಲಿನ ಸಣ್ಣ-ಪುಟ್ಟ ರಸ್ತೆಗಳಲ್ಲಿ ಬೈಕ್, ಕಾರು ಹಾಗೂ ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು. ಲಾಕ್‍ಡೌನ್ ಬಿಗಿಗೊಳಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಸಹ ಬೀದಿ ಸುತ್ತುವವರಿಗೆ ಮಾತ್ರ ಕೊರತೆ ಇರಲಿಲ್ಲ.
ರಸ್ತೆಗಳಲ್ಲಿ ಜನ ದಟ್ಟಣೆ, ವಾಹನ ಸಂಚಾರವನ್ನು ಗಮನಿಸಿದ ಪೊಲೀಸರು ನಗರದ ಪ್ರಮುಖ ರಸ್ತೆ, ಒಳ ರಸ್ತೆಗಳಲ್ಲಿ ನಿಂತು ಜಿಲ್ಲಾಡಳಿತದಿಂದ ನೀಡಿರುವ ಪಾಸ್ ತಪಾಸಣೆ ಮಾಡಲಾರಂಭಿಸಿದರು. ಮಧ್ಯಾಹ್ನದ ವೇಳೆಗೆ ಜನ ಸಂಚಾರ ವಿರಳವಾಗಿ ಕಂಡು ಬಂದರೂ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಮಾತ್ರ ಕರಗಲಿಲ್ಲ.
ಜಗತ್ತಿನಾದ್ಯಂತ ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಮಾ.24ರಿಂದ ಏ.14ರವರೆಗೆ ಭಾರತ ಲಾಕ್‍ಡೌನ್‍ಗೆ ಆದೇಶಿಸಿದ್ದರು. ಆದರೆ ವೈರಸ್ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿರುವುದು ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರ ಕಾರಣ ಆಗಿದ್ದು ಆಗಲಿ ನೋಡಿಯೇ ಬಿಡೋಣ ಎಂಬ ಬಂಡ ಧೈರ್ಯದಿಂದ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂತು.
ಮಾ.24ರಿಂದಲೂ ಹಾಗೂ-ಹೀಗೂ ದಿನ ತಳ್ಳಿದ್ದವರು ಏ.14ಕ್ಕೆ ಲಾಕ್‍ಡೌನ್ ಸಡಿಲಗೊಳ್ಳಲಿದೆ ಎಂದೇ ಭಾವಿಸಿದ್ದರು. ಅಲ್ಲದೆ, ಜಿಲ್ಲೆಯಲ್ಲಿನ ಮೂರೂ ಕೊರೋನಾ ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗುವ ಜೊತೆಗೆ ಹೊಸ ಪ್ರಕರಣ ಕಾಣಿಸಿಕೊಂಡಿಲ್ಲವಾದ್ದರಿಂದ ದಾವಣಗೆರೆ ಜಿಲ್ಲೆಯು ಲಾಕ್‍ಡೌನ್‍ನಿಂದ ವಿನಾಯಿತಿ ಪಡೆಯಲಿದೆ ಎಂಬ ಆಶಾಭಾವದಲ್ಲಿದ್ದರು. ಆದರೆ ಪ್ರಧಾನಿ ಘೋಷಣೆಯು ಜನರ ನಿರೀಕ್ಷೆಯನ್ನೇ ಹುಸಿಗೊಳಿಸಿದೆ.
ಏಪ್ರಿಲ್ 20ರವರೆಗೆ ಬಿಗಿ ಕ್ರಮ ಅನಿವಾರ್ಯವೆಂದು ಹೇಳಿರುವ ಪ್ರಧಾನ ಮಂತ್ರಿಗಳು, ಆನಂತರದಲ್ಲಿ ಪರಿಸ್ಥಿತಿ ನೋಡಿಕೊಂಡು ಕೆಲ ವಿನಾಯಿತಿ ಘೋಷಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಏ.20ರವರೆಗೆ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ಕಾಣಿಸಿಕೊಳ್ಳದಿದ್ದರೆ ಜನರಿಗೆ ಕೊಂಚವಾದರೂ ಗೃಹಬಂಧನದಿಂದ ಮುಕ್ತಿ ಸಿಗುವ ಸಾಧ್ಯತೆ ಇಲ್ಲದಿಲ್ಲ.
ಕೇಂದ್ರ ಸರ್ಕಾರ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿದ ನಂತರ ಜಿಲ್ಲಾಡಳಿತ ಕೂಡ ಚುರುಕಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸರಣಿ ಸಭೆ ನಡೆಸಿ, ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಹೊಸ ಪ್ರಕರಣ ಕಾಣಿಸಿಕೊಳ್ಳದಂತೆ ಬಿಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಜವಾಬ್ದಾರಿ ಕೂಡ ಹೆಚ್ಚಾಗಿದ್ದು, ಸೋಂಕು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ಏ.14ರ ಮುನ್ನಾದಿನದವರೆಗೂ ಕೆಲವರು ಲಾಕ್‍ಡೌನ್ ಕೂಡ ಲೆಕ್ಕಿಸದೆ ಅಲ್ಲಿಲ್ಲಿ ಓಡಾಡಿಕೊಂಡಿದ್ದರು. ಇನ್ನೇನು ಲಾಕ್‍ಡೌನ್ ತೆರವಾಗಲಿದೆ ಎಂಬ ನಿರೀಕ್ಷೆಯಲ್ಲಿ ಖುಷಿಯಿಂದಲೇ ದಿನ ಎಣಿಸುತ್ತಿದ್ದರು. ಆದರೆ ಈಗ ಲಾಕ್‍ಡೌನ್ ತೆರವು ಮುಂದಕ್ಕೆ ಹೋಗಿರುವುದರಿಂದ ಜನರಿಗೆ ಒಂದೊಂದು ಗಂಟೆಯೂ ಒಂದೊಂದು ದಿನದಂತಾಗಿದೆ. ಕೆಲವರೂ ರಸ್ತೆಗಳಲ್ಲಿ ಸಂಚರಿಸಿದರೆ, ಇನ್ನೂ ಕೆಲವರು ತಿಂಡಿ, ಊಟ, ಪೇಪರ್ ಓದುವುದು, ಟಿವಿ ನೋಡುವುದು, ಇನ್ನೂ ಬೇಜಾರಾದರೆ ಯಾವುದಾದರೂ ಒಳಾಂಗಣ ಕ್ರೀಡೆಯಾಡುವುದು, ಮನೆ ಮುಂದಿನ ರಸ್ತೆ ಓಣಿಯಲ್ಲಿ ಚಿಕ್ಕದಾಗಿ ಷಟಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಆಡುವುದು ಇಷ್ಟಕ್ಕೇ ದಿನವೆಲ್ಲಾ ಸೀಮಿತವಾಗಿದೆ.
ಲಾಕ್‍ಡೌನ್ ಆರಂಭದಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ, ಸೋಪ್, ಸ್ಯಾನಿಟೈಸರ್, ಮಾಸ್ಕ್ ವಿತರಿಸಲು ಮುಗಿಬಿದ್ದಿದ್ದ ಕೆಲ ಸಂಘ-ಸಂಸ್ಥೆಗಳು ಕೂಡ ಮನೆ ಸೇರಿವೆ. ಇದೆಲ್ಲಾ ಇಷ್ಟು ಬೇಗ ಮುಗಿಯೋದಲ್ಲ ಎಂಬಂತೆ ಸೇವಾ ಕಾರ್ಯಗಳೂ ಕಡಿಮೆಯಾಗಿವೆ. ಪೊಲೀಸರು, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರಿಗೆ ಹಣ್ಣು, ಜ್ಯೂಸ್, ಮಜ್ಜಿಗೆ ನೀಡುವವರೂ ಅಷ್ಟಾಗಿ ಕಂಡುಬರುತ್ತಿಲ್ಲ.
ಕಟ್ಟುನಿಟ್ಟಾಗಿ ಲಾಕ್‍ಡೌನ್ ಜಾರಿಗೊಳಿಸಲು ಪೊಲೀಸ್ ಇಲಾಖೆ ಜಿಲ್ಲಾಕೇಂದ್ರದ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದೆ. ಹದಡಿ ರಸ್ತೆ, ಜಗಳೂರು ರಸ್ತೆ, ಶಾಮನೂರು ರಸ್ತೆ, ಹಳೇ ಪಿ.ಬಿ. ರಸ್ತೆ ಹೀಗೆ ಅನೇಕ ರಸ್ತೆಗಳನ್ನು ಸಂಪರ್ಕಿಸುವ ಊರಿನ ರಸ್ತೆಗಳು ಬಂದ್ ಆಗಿವೆ. ಅಗತ್ಯ ಸೇವೆ ಮತ್ತು ವಸ್ತುಗಳ ಪೂರೈಕೆದಾರರ ವಾಹನಗಳು ಕೂಡ ಚಕ್ರವ್ಯೂಹದಂತಹ ಬೀದಿಗಳಲ್ಲಿ ಹಾದು, ಪ್ರಮುಖ ರಸ್ತೆಗೆ ಬರುವುದು ಹರಸಾಹಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ