ಹುಳಿಯಾರು
ಕೊರೊನಾ ಲಾಕ್‍ಡೌನ್ ನಡುವೆಯೂ ಹುಳಿಯಾರಿನ ರಾಜ್ ಕುಮಾರ್ ರಸ್ತೆಯ ಸಿಸಿ ಚರಂಡಿ ಕಾಮಗಾರಿ ಗುರುವಾರ ಆರಂಭವಾಯಿತು.
ಪಟ್ಟಣ ಪಂಚಾಯ್ತಿಯ ಅನುದಾನದ ಈ ಕಾಮಗಾರಿಗೆ ಫೆಬ್ರವರಿ ಮಾಹೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಶಂಕುಸ್ಥಾಪನೆ ಆಗಿ ಹದಿನೈದಿಪ್ಪತ್ತು ದಿನಗಳ ನಂತರ ಕಾಮಗಾರಿ ಆರಂಭವಾಗಿತ್ತು.ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಶಿಲ್ಪಾ ಸ್ಟೋರ್ ವರೆವಿಗೂ ಸುಮಾರು 70 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಾಮಗಾರಿ ಇದಾಗಿದ್ದು ಆರಂಭದಲ್ಲಿ ಸಿಸಿ ಚರಂಡಿ ಕೈಗೆತ್ತಿಕೊಂಡು ಭರದಿಂದ ಮಾಡಲಾಗುತ್ತಿತ್ತು.
ಅಷ್ಟರಲ್ಲಿ ಕೊರೊನಾ ಲಾಕ್‍ಡೌನ್ ಜಾರಿಯಾಗಿ ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಆದರೆ ಈಗ ಲಾಕ್‍ಡೌನ್ ಜಾರಿನ ನಡುವೆಯೂ ಕಾಮಗಾರಿ ಆರಂಭಿಸಲಾಗಿದ್ದು ಬುಕ್ಕಾಪಟ್ಟಣ ಭಾಗದ ಏಳೆಂಟು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.ನಾವೆಲ್ಲರೂ ದಿನಗೂಲಿ ನೌಕರರಾಗಿದ್ದು ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಸಂಸಾರ ನಿರ್ವಹಣೆ ಕಷ್ಟವಾಗಿತ್ತು. ಹೀಗೆಯೇ ಮುಂದುವರೆದರೆ ನಮಗ್ಯಾರು ಗತಿ ಎನ್ನುವಂತಿರುವಾಗ ಗುತ್ತಿಗೆದಾರರು ಅರ್ಧಕ್ಕೆ ನಿಂತಿರುವ ಕೆಲಸ ಆರಂಭಿಸುವಂತೆ ತಿಳಿಸಿದ್ದರು. ಕೂಲಿ ಹಣದ ಆಸೆಗೆ ನಾವೆಲ್ಲರೂ ಖುಷಿಯಿಂದ ಒಪ್ಪಿ ಕೆಲಸಕ್ಕೆ ಬಂದಿದ್ದೇವೆ ಎನ್ನುತ್ತಾರೆ ಕಾರ್ಮಿಕರು.
ಎಂಜಿನಿಯರ್, ಗುತ್ತಿಗೆದಾರರ ಅನುಪಸ್ಥಿತಿಯಲ್ಲಿ ಮೇಸ್ತ್ರಿ ಕಾಮಗಾರಿ ಮಾಡಿಸುತ್ತಿದ್ದು ಕೂಲಿ ಕಾರ್ಮಿಕರು ಮಾಸ್ಕ್ ಧರಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಲಾಕ್ ಡೌನ್ ನಡುವೆ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಲವರಿಂದ ಆಕ್ಷೇಪ ಕೇಳಿಬಂದರೆ, ಲಾಕ್ ಡೌನ್ ನಿಂದ ಊರಿನವರೆಲ್ಲರೂ ಮನೆ ಸೇರಿರುವಾಗ ಅವರ ಪಾಡಿಗೆ ಅವರು ಕೆಲಸ ನಿರ್ವಹಿಸುವುದರಲ್ಲಿ ತಪ್ಪೇನಿಲ್ಲ ಬಿಡಿ ಎನ್ನುತ್ತಿದ್ದಾರೆ ಕೆಲವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
