ಜಿಲ್ಲಾಸ್ಪತ್ರೆಯಾಗಿ ಶ್ರೀದೇವಿ ಆಸ್ಪತ್ರೆಯ ಸಾರ್ಥಕ ಸೇವೆ

ತುಮಕೂರು

     ಜಗತ್ತನ್ನು ಕಾಡುತ್ತಿರುವ ಕೊರೊನಾ ಮಾರಿ ವಿರುದ್ಧ ದೊಡ್ಡ ಯುದ್ಧವೇ ನಡೆದಿದೆ. ಹಲವರು ಸೇನಾನಿಗಳಂತೆ ಜೀವದ ಹಂಗು ತೊರೆದು ಕೊರೊನಾ ನಿರ್ಮೂಲನೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇವೆ ಅಭಿನಂದನೀಯ.

     ತುಮಕೂರು ಜಿಲ್ಲೆಯಲ್ಲಿ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ, ಪಾಸಿಟೀವ್ ಇದ್ದ ಮತ್ತೊಬ್ಬರು ಚಿಕಿತ್ಸೆ ನಂತರ ಗುಣಮುಖರಾಗಿದ್ದಾರೆ. ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ. ಜಿಲ್ಲಾಡಳಿತ, ಜಿಲ್ಲೆಯ ಆರೋಗ್ಯ ಇಲಾಖೆಯವರು ಅನುಸರಿಸಿದ ಕ್ರಮಗಳಿಂದಾಗಿ ಕೊರೊನಾ ಜಿಲ್ಲೆಯಲ್ಲಿ ಮರುಕಳಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ.

    ಕೊರೊನಾ ಸೋಂಕು ಹರಡುವದನ್ನು ತಡೆಯುವಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರಾದಿಯಾಗಿ ಹಲವರು ನಿರಂತರ ಪ್ರಯತ್ನದಲ್ಲಿದ್ದಾರೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿರುವ ಅಸಹಾಯಕರು, ಬಡವರಿಗೆ ಸರ್ಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ನೆರವಾಗುತ್ತಿದ್ದಾರೆ. ಒಂದು ಅರ್ಥದಲ್ಲಿ ಇಡೀ ಸಮಾಜವೇ ಕೊರೊನಾ ಸಂಕಷ್ಟಗಳನ್ನು ಎದುರಿಸಲು ಸಾಮೂಹಿಕ ಪ್ರಯತ್ನ ಮಾಡುತ್ತಿದೆ.

     ಕೊರೊನಾ ನಿಯಂತ್ರಣದಲ್ಲಿದ್ದರೂ ಮುನ್ನೆಚ್ಚರಿಕೆಯಾಗಿ ನಗರದ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮಾನ್ಯ ರೋಗಿಗಳ ಆರೋಗ್ಯ ಸೇವೆಗಾಗಿ ಜಿಲ್ಲಾ ಆಸ್ಪತ್ರೆಯನ್ನು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು ಒಂದು ತಿಂಗಳಿನಿಂದ ಜಿಲ್ಲಾ ಆಸ್ಪತ್ರೆಯಾಗಿ ಶ್ರೀದೇವಿ ಆಸ್ಪತ್ರೆಯು ಬಡ ರೋಗಿಗಳಿಗೆ ದೊರೆಯಬೇಕಾದ ಆರೋಗ್ಯ ಸೇವೆ ಒದಗಿಸುತ್ತಿದೆ.

     ಕೊರೊನಾದ ಸಂಕಷ್ಟ ಪರಿಸ್ಥಿತಿಯಲ್ಲಿ ಇಡೀ ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯ ರೂಪವಾಗಿ ಸೇವೆ ಒದಗಿಸುತ್ತಿರುವ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಆಡಳಿತ ವರ್ಗ ಹಾಗೂ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಯನ್ನು ಸರ್ಕಾರ ಹಾಗೂ ನಾಗರೀಕರು ಅಭಿನಂದಿಸಲೇಬೇಕು.

      ಕೊವಿಡ್ ಆಸ್ಪತ್ರೆಯಾಗಿ ಜಿಲ್ಲಾ ಆಸ್ಪತ್ರೆಯನ್ನು ಪರಿವರ್ತಿಸಿದ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳ ತಪಾಸಣೆ, ಚಿಕಿತ್ಸಾ ಸೇವೆ ನೀಡಲು ಮುಂದೆ ಬಂದ ಶ್ರೀದೇವಿ ಆಸ್ಪತ್ರೆ ಆಡಳಿತ ವರ್ಗದ ಆಶಯ ಶ್ಲಾಘನೀಯ. ಒಂದು ಜಿಲ್ಲಾ ಆಸ್ಪತ್ರೆಯಲ್ಲಿ ಇರಬೇಕಾದ ಬಹುತೇಕ ಸೌಲಭ್ಯ ಹೊಂದಿರುವ ಶ್ರೀದೇವಿ ಆಸ್ಪತ್ರೆಗೆ ಸರ್ಕಾರದ ಜಿಲ್ಲಾ ಆಸ್ಪತ್ರೆಯಿಂದ ಯಾವುದೇ ಆರೋಗ್ಯ ತಪಾಸಣೆಯ ಯಂತ್ರೋಪಕರಣ, ನಿರ್ವಹಣಾ ಸಿಬ್ಬಂದಿ, ಮತ್ತಿತರ ಚಿಕಿತ್ಸಾ ಸಲಕರಣೆಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಿಲ್ಲ, ಇಲ್ಲಿ ಎಲ್ಲವೂ ಇವೆ ಎನ್ನುವಷ್ಟು ಶ್ರೀದೇವಿ ಆಸ್ಪತ್ರೆ ಸುಸಜ್ಜಿತವಾಗಿದೆ. 750 ಹಾಸಿಗೆಗಳ ಈ ಆಸ್ಪತ್ರೆಗೆ ಸರ್ಕಾರಿ ಆಸ್ಪತ್ರೆಯಿಂದ ರೋಗಿಗಳ ಒಂದು ಹಾಸಿಗೆ, ಮಂಚವನ್ನೂ ಇಲ್ಲಿಗೆ ತಂದಿಲ್ಲ. ಅದರ ಅಗತ್ಯವಿಲ್ಲದಷ್ಟು ಶ್ರೀದೇವಿ ಆಸ್ಪತ್ರೆ ಪೂರಕ ಸೌಲಭ್ಯ ಹೊಂದಿದೆ.

      ಕೊರೊನಾ ಕಾಯಿಲೆ ಹರಡುವಂತಹ ಸೂಕ್ಷ್ಮ ಸಂದರ್ಭದಲ್ಲಿ ಇಲ್ಲಿನ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಆರೋಗ್ಯ ಇಲಾಖೆ ಪಿಪಿಇ ಕಿಟ್, ಎನ್-95 ಮಾಸ್ಕ್‍ಗಳನ್ನು ಕೊಟ್ಟಿಲ್ಲ, ಶ್ರೀದೇವಿ ಆಸ್ಪತ್ರೆ ಆಡಳಿತ ವರ್ಗವೇ ಈ ವ್ಯವಸ್ಥೆ ಮಾಡಿದೆ. ಕೊರೊನಾ ಭೀತಿಯಲ್ಲಿ ಆರೋಗ್ಯ ಸಿಬ್ಬಂದಿಗೆ ಸುರಕ್ಷತಾ ಸಾಮಗ್ರಿಯನ್ನು ಜಿಲ್ಲಾಡಳಿತ ಒದಗಿಸಬೇಕಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು, ಸಿಬ್ಬಂದಿಗಳಿಗೆ ಸರ್ಕಾದಿಂದ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಆಸ್ಪತ್ರೆ ಶ್ರೀದೇವಿ ಆಸ್ಪತ್ರೆಗೆ ಸ್ಥಳಾಂತರವಾದಾಗಿನಿಂದ ಇಲಾಖೆ ಇಲ್ಲಿ ಊಟದ ವ್ಯವಸ್ಥೆ ಕೈಬಿಟ್ಟಿದೆ. ಆದರೆ, ವ್ಯವಸ್ಥೆಗೆ ತೊಂದರೆ ಆಗಬಾರದು ಎಂದು ಶ್ರೀದೇವಿ ಆಸ್ಪತ್ರೆ ಆಡಳಿತ ವರ್ಗವೇ ಎಲ್ಲಾ ರೋಗಿಗಳು, ಸಿಬ್ಬಂದಿಗೆ ಊಟ ಪೂರೈಸುತ್ತಿದೆ.

     ಜಿಲ್ಲಾ ಆಸ್ಪತ್ರೆಯ ಸರ್ಕಾರಿ ಸೇವೆಯ ಹಲವು ತಜ್ಞ ವೈದ್ಯರು ಶ್ರೀದೇವಿ ಆಸ್ಪತ್ರೆಗೆ ನಿಯಮಿತವಾಗಿ ಸೇವೆಗೆÀ ಬರುತ್ತಾರೆ, ಆದರೆ, ಕೆಲವು ರೋಗಗಳಿಗೆ ಸಂಬಂಧಿಸಿದ ತಜ್ಞರು ಸೇವೆಗೆ ಲಭ್ಯವಿರುವುದಿಲ್ಲ, ಜೊತೆಗೆ ಸರ್ಕಾರಿ ಸೇವೆಯ ಆರೋಗ್ಯ ಸಿಬ್ಬಂದಿಯೂ ನಿಗಧಿತ ಸಮಯದ ಹೊರತಾಗಿ ಹೆಚ್ಚಿನ ಸೇವೆ ಮಾಡಲಾಗದೆ ಉಂಟಾಗುವ ಅನಾನುಕೂಲದಲ್ಲೂ ಶ್ರೀದೇವಿ ಆಸ್ಪತ್ರೆ ಸಿಬ್ಬಂದಿಯೇ ನಿಬಾಯಿಸುತ್ತಿದ್ದಾರೆ. ಅಲ್ಲದೆ, ಇಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅಗತ್ಯ ಔಷಧಿ ಪೂರೈಕೆಯಲ್ಲೂ ಇಲಾಖೆ ನೆರವಾಗಬೇಕು.

    ಆರೋಗ್ಯ ವಿಮೆ ಯೋಜನೆಯ ರೋಗಿಗಳಿಗೆ ಸರ್ಕಾರದ ನಿಯಮಾನುಸಾರ ಚಿಕಿತ್ಸೆ, ಔಷಧಿ ದೊರೆಯುತ್ತದೆ. ಹೆಲ್ತ್ ಕಾರ್ಡ್ ಇಲ್ಲದವರ ಆರೋಗ್ಯ ವೆಚ್ಚ, ಉಚಿತ ಔಷಧಿ ನೀಡಬೇಕಾದ ವಿಚಾರದಲ್ಲಿ ಜಿಲ್ಲಾಡಳಿತ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ ಎನ್ನಲಾಗಿದೆ. ಆರೋಗ್ಯ ವಿಮೆ ಯೋಜನೆಗೆ ಒಳಪಡದ ಅನೇಕ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ, ಅವರಿಂದ ಚಿಕಿತ್ಸಾ ವೆಚ್ಚ ಪಾವತಿ ಮಾಡಿಕೊಳ್ಳಲು ಆಗುವುದಿಲ್ಲ. ಆದರೂ ಪರಿಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆಯಿಂದಲೇ ಸಾಧ್ಯವಾದಷ್ಟು ಔಷಧಿ ವಿತರಿಸಲಾಗುತ್ತದೆ.

     ಸಿಬ್ಬಂದಿ ವೇತನ, ಆಸ್ಪತ್ರೆ ನಿರ್ವಹಣೆ ಜೊತೆಗೆ ಉಚಿತ ಆರೋಗ್ಯ ಸೇವೆ, ಔಷಧಿ ಒದಗಿಸಲು ಖಾಸಗಿ ಆಸ್ಪತ್ರೆಗೆ ಸಾಧ್ಯವೆ? ಇದಕ್ಕೆ ಇಲಾಖೆ ಸೂಚಿಸುವ ಸಂಪನ್ಮೂಲವೇನು, ರೋಗಿಗಳ ಕಡೆಯಿಂದಲೇ ವೆಚ್ಚ ಪಡೆಯಬಹುದೆ ಎಂಬ ಬಗ್ಗೆ ಜಿಲ್ಲಾಡಳಿತ ಈವರೆಗೂ ಯಾವುದು ಸಲಹೆ, ನಿರ್ಧಾರ ಪ್ರಕಟಿಸಿಲ್ಲ ಎನ್ನಲಾಗಿದೆ.

     ಇದರ ಜೊತೆಗೆ, ಸಂಘಸಂಸ್ಥೆಯವರು ಅನಾಥರನ್ನು ತಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡುತ್ತಾರೆ. ಇಂತಹವರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ ನಂತರ ಮುಂದೆ ಅವರ ಕೆಲವು ದಿನಗಳ ಆರೋಗ್ಯ ಆರೈಕೆಗೆ ಏನು ವ್ಯವಸ್ಥೆ ಮಾಡಬೇಕು ಎನ್ನುವ ಬಗ್ಗೆಯೂ ಇಲಾಖೆಯ ನಿರ್ದೇಶವಿಲ್ಲ.

    ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀದೇವಿ ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಾಗಿ ಬಡ ರೋಗಿಗಳ ಆರೋಗ್ಯ ಸೇವೆ ಒದಗಿಸುತ್ತಿದೆ. ಹೀಗಿರುವಾಗ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಈ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಒದಗಿಸಿದರೆ, ಬಡ ರೋಗಿಗಳಿಗೆ ಆಸ್ಪತ್ರೆಯಿಂದ ಮತ್ತಷ್ಟು ಉತ್ತಮ ಆರೋಗ್ಯ ನೀಡಲು ಸಾಧ್ಯವಾಗುತ್ತದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap